ಮಾದಕ ದ್ರವ್ಯ ಬಳಕೆ ದುಷ್ಪರಿಣಾಮ

ಮಾದಕ ದ್ರವ್ಯ ಬಳಕೆ ದುಷ್ಪರಿಣಾಮ

ಹರಿಹರದ ಕಾರ್ಯಕ್ರಮದಲ್ಲಿ  ಗ್ರಾಮಾಂತರ ಡಿವೈಎಸ್ಪಿ ಬಸವರಾಜ್

ಹರಿಹರ, ಜ. 7 – ಮಾದಕ ವಸ್ತುಗಳನ್ನು ಬಳಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಲ್ಲದೆ, ಸಮಾಜದಲ್ಲಿ ಗೌರವ ಕೂಡ ಕಡಿಮೆಯಾಗುತ್ತದೆ ಎಂದು ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಜಿ.ಎಸ್. ಬಸವರಾಜ್ ಹೇಳಿದರು.

ನಗರದ ಪೊಲೀಸ್ ಇಲಾಖೆ, ಗ್ರಾಮಾಂತರ ಪೊಲೀಸ್ ಇಲಾಖೆ ಗುತ್ತೂರು, ಮಲೇಬೆನ್ನೂರು ಪೊಲೀಸ್ ಇಲಾಖೆ ವತಿಯಿಂದ ಮಾದಕ ದ್ರವ್ಯ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ವಿವಿಧ ಕಾಲೇಜು ವಿದ್ಯಾರ್ಥಿಗಳೊಂದಿಗೆ ಕಾಲ್ನಡಿಗೆ ಜಾಥಾ ಉದ್ದೇಶಿಸಿ ಅವರು ಮಾತನಾಡಿದರು. 

ಮಾದಕ ದ್ರವ್ಯಗಳನ್ನು ಬಳಸುವುದರಿಂದ, ದೇಹದಲ್ಲಿ ವಿವಿಧ ರೋಗಗಳು ಹರಡಿಕೊಂಡು ಮನುಷ್ಯನ ಚಲನ ಶೀಲತೆ ಕುಂಠಿತವಾಗುತ್ತದೆ. ಮತ್ತು ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳು ಸಹ ದೇಹಕ್ಕೆ ಸೇರದಂತೆ ಆಗುತ್ತದೆ ಮತ್ತು ಕೆಲಸದಲ್ಲಿ ನಿರಾಸಕ್ತಿ ಉಂಟಾಗಿ ದೈಹಿಕವಾಗಿ, ಮಾನಸಿಕವಾಗಿ ಖಿನ್ನತೆಗೆ ಒಳಪಟ್ಟು, ಅಸ್ವಸ್ಥತೆಯನ್ನು ಹೊಂದುವಂತಹ ವಾತಾವರಣದಲ್ಲಿ ಮನುಷ್ಯನ ಜೀವನ ಸಾಗುತ್ತದೆ. ಆಗಾಗಿ ಮನುಷ್ಯನು ಮಾದಕ ದ್ರವ್ಯ ವಸ್ತುಗಳಿಂದ ದೂರ ಇರುವಂತೆ ಹೇಳಿದರು.

ಈ ವೇಳೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಿಂದ ಕಾಲ್ನಡಿಗೆ ಜಾಥಾ ಆರಂಭಗೊಂಡು, ಶಿವಮೊಗ್ಗ ರಸ್ತೆ, ರಾಣಿ ಚೆನ್ನಮ್ಮ ವೃತ್ತದ ಮೂಲಕ ಸಂಚರಿಸಿ ಗಾಂಧಿ ವೃತ್ತದಲ್ಲಿ ಅಂತ್ಯಗೊಂಡಿತು. ನಗರದ ಎಸ್.ಜೆ.ವಿ.ಪಿ. ಕಾಲೇಜ್‌, ಸೆಂಟ್ ಮೇರಿಸ್ ಕಾಲೇಜ್, ಸರ್ಕಾರಿ ಪದವಿ ಪೂರ್ವ ಕಾಲೇಜು, ಗಿರಿಯಮ್ಮ ಪದವಿ ಪೂರ್ವ ಕಾಲೇಜು, ಚಂದ್ರಗುಪ್ತ ಮೌರ್ಯ ಬೆಳ್ಳೂಡಿ  ಕಾಲೇಜು ವಿದ್ಯಾರ್ಥಿಗಳು ಕಾಲ್ನಡಿಗೆ ಜಾಥಾದಲ್ಲಿ ಪಾಲ್ಗೊಂಡಿದ್ದರು. 

ಈ ಸಂದರ್ಭದಲ್ಲಿ ಮಲೇಬೆನ್ನೂರು ಪೊಲೀಸ್ ಮತ್ತು ಹರಿಹರ ಠಾಣೆಯ ಸಿಪಿಐ ಸುರೇಶ್ ಸರಗಿ, ಪಿಎಸ್ಐಗಳಾದ ದೇವಾನಂದ್, ಚಿದಾನಂದ, ಅರವಿಂದ್, ಪ್ರವೀಣ್ ಕುಮಾರ್, ಶ್ರಪತಿ ಗಿನ್ನಿ, ಮಂಜುನಾಥ್,  ಎ ಎಸ್ ಐ ನಾಗರಾಜಯ್ಯ,  ಪೊಲೀಸ್ ಸಿಬ್ಬಂದಿಗಳಾದ ಸತೀಶ್, ಸುಶೀಲಮ್ಮ, ಮಂಜುನಾಥ್ ಬನ್ನಿಕೋಡು, ನಾಗರಾಜ್,  ಸರ್ಕಾರಿ ಪದವಿ ಪೂರ್ವ ಕಾಲೇಜು ಪರಮೇಶ್ವರಪ್ಪ, ಮಂಜುನಾಥ್, ಸೆಂಟ್ ಮೇರಿಸ್ ಕಾಲೇಜ್ ಮಂಜುನಾಥ್ ಹಾಗೂ ಇತರರು ಹಾಜರಿದ್ದರು.    

error: Content is protected !!