ಮಲೇಬೆನ್ನೂರು, ಜ.5- ಶ್ರೀರಾಮ ಜಟಾಯು ಪಕ್ಷಿ, ಶಬರಿ, ವಾಲಿ ಸುಗ್ರೀವ ಮತ್ತು ಹನುಮಂತ ಹೀಗೆ ಸರ್ವರಿಗೂ ಸ್ನೇಹ ನೀಡಿದ್ದಾರೆ ಎಂದು ರಾಷ್ಟ್ರೀಯ ಸ್ವಯಂ ಸಂಘದ ಪ್ರಮುಖ ಗಿರೀಶ್ ಹೇಳಿದರು. ಅವರು ಮಲೇಬೆನ್ನೂರು ಪಟ್ಟಣದ ನೀರಾವರಿ ಇಲಾಖೆ ಆವರಣದಲ್ಲಿ ಚೌಡೇಶ್ವರಿ ದೇವಾಲಯದಲ್ಲಿ ಶ್ರೀರಾಮಲಲ್ಲಾಗೆ ಪ್ರಾಣ ಪ್ರತಿಷ್ಠಾಪನೆಗೆ ಆಹ್ವಾನ ನೀಡುವ ಮಂತ್ರಾ ಕ್ಷತೆಗೆ ಚಾಲನೆ ನೀಡಿ ಮಾತನಾಡಿದರು.
1949ರ ನಂತರ ಶ್ರೀ ರಾಮನ ವಿಗ್ರಹ ಮೂರ್ತಿ ಪ್ರತ್ಯಕ್ಷವಾಗಿದ್ದು, ಆ ಸ್ಥಳದಲ್ಲಿ ರಾಮನ ಮೂರ್ತಿ ಪೂಜೆಗೆ ಅವಕಾಶ ನೀಡಬೇಕೆಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, 1990 ರಲ್ಲಿ ಪ್ರಥಮ, ಬಾರಿಗೆ ನಂತರ 1992ರಲ್ಲಿ ಎರಡನೇ ಬಾರಿಗೆ ಲಕ್ಷಾಂತರ ಜನಸೇವಕರು ಕರಸೇವೆ ಮಾಡಿ ಯಶಸ್ವಿಯಾದರು. 2019ರಲ್ಲಿ ಸರ್ವೋಚ್ಛ ನ್ಯಾಯಾಲಯ ಬಾಬರಿ ಮಸೀದಿ ಎನ್ನುವ ಸ್ಥಳವು ಶ್ರೀರಾಮನಿಗೆ ಸೇರಿದ್ದು ಎಂದು ಮಹತ್ವದ ತೀರ್ಪು ನೀಡಿತು ಎಂದರು.
ಜನವರಿ 22 ರಂದು ಮಧ್ಯಾಹ್ನ 12 ಗಂಟೆಗೆ ಮನೆ ಮುಂಭಾಗ ಶ್ರೀರಾಮನ ಹೆಸರಲ್ಲಿ ಕನಿಷ್ಠ ಐದು ದೀಪ ಹಚ್ಚಿ, ಹತ್ತಾರು ಜನ ಸೇರಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆಯನ್ನು ದೇವಾಲಯದಲ್ಲಿ, ಮನೆಯಲ್ಲಿ ಟಿವಿ ನೇರ ಪ್ರಸಾರದಲ್ಲಿ ವೀಕ್ಷಿಸಿ ಎಂದು ಕರೆ ನೀಡಿದರು.
ಭಾಜಪ ಯುವಕರಾದ ಗೌಡ್ರ ಶ್ರೀನಿವಾಸ್, ಪ್ರಕಾಶಚಾರ್ ಹಾಗೂ ಅಕ್ಕನ ಬಳಗದ ಮಹಿಳೆಯರು, ಮಕ್ಕಳು ಹಾಜರಿದ್ದು, ತಂಡವಾಗಿ ವಿವಿಧ ವಾರ್ಡ್ ಗಳಲ್ಲಿ ಮನೆ – ಮನೆಗೆ ತೆರಳಿ ಮಂತ್ರಾಕ್ಷತೆ ನೀಡಿದರು. ಮಕ್ಕಳು ಶ್ರೀರಾಮ, ಸೀತಾಮಾತೆ, ಹನುಮಂತ, ಲಕ್ಷ್ಮಣ್ ಮತ್ತಿತರೆ ವೇಷ ಹಾಕಿ ಗಮನ ಸೆಳೆದರು.