ವೇಮನ ಶ್ರೀಗಳಿಂದ 10 ವರ್ಷಗಳಲ್ಲಿ ಅದ್ಭುತ ಸಾಧನೆ

ವೇಮನ ಶ್ರೀಗಳಿಂದ 10 ವರ್ಷಗಳಲ್ಲಿ ಅದ್ಭುತ ಸಾಧನೆ

ಹೊಸಹಳ್ಳಿ : ಹೇಮ-ವೇಮ ವಿದ್ಯಾಪೀಠದ ದಶಮಾನೋತ್ಸವ ಸಮಾರಂಭದಲ್ಲಿ ಶಿವಶಂಕರ ರೆಡ್ಡಿ ಮೆಚ್ಚುಗೆ

ಮಲೇಬೆನ್ನೂರು, ಜ.5- ಶ್ರೀ ವೇಮನಾನಂದ ಶ್ರೀಗಳು ಧರ್ಮದ ಜೊತೆಗೆ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಸಮಾಜವನ್ನು ಬೆಳೆಸುವುದರ ಜೊತೆಗೆ ವೇಮನ ಮತ್ತು ಹೇಮರೆಡ್ಡಿ ಮಲ್ಲಮ್ಮನ ಭಕ್ತರನ್ನು ಒಂದು ಗೂಡಿಸುವ ಕೆಲಸವನ್ನೂ ಮಾಡಿದ್ದಾರೆ ಎಂದು ಮಾಜಿ ಸಚಿವರೂ ಆದ ವಿಧಾನಸಭೆಯ ಮಾಜಿ ಉಪಸಭಾಪತಿ ಶಿವಶಂಕರ ರೆಡ್ಡಿ ಹೇಳಿದರು.

ಅವರು, ಶುಕ್ರವಾರ ಸಂಜೆ ಹರಿಹರ ತಾಲ್ಲೂಕಿನ ಹೊಸಳ್ಳಿ ಗ್ರಾಮದಲ್ಲಿ ಮಹಾಯೋಗಿ ವೇಮನ ಸಂಸ್ಥಾನದ ರೆಡ್ಡಿ ಗುರುಪೀಠದಲ್ಲಿ ಹಮ್ಮಿಕೊಂಡಿದ್ದ ಹೇಮ-ವೇಮ ಸದ್ಬೋಧನಾ ವಿದ್ಯಾಪೀಠದ ದಶಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಶ್ರೀಗಳು ರಾಜ್ಯದ ಉದ್ದಗಲಕ್ಕೂ ಸಂಚರಿಸಿ, ಸಮಾಜದ ಹಿರಿಯರನ್ನು ವಿಶ್ವಾಸಕ್ಕೆ ಪಡೆದು, ಸಮಾಜವನ್ನು ಒಂದುಗೂಡಿಸುವ ಮತ್ತು ಸಂಘಟಿಸುವ ಕೆಲಸ ಮಾಡುತ್ತಿರುವುದು ಶ್ಲ್ಯಾಘನೀಯ ಎಂದರು.

ಈ ಹಿಂದೆ ಸರ್ಕಾರ ನಮ್ಮ ವೇಮನ ಮತ್ತು ಹೇಮರೆಡ್ಡಿ ಮಲ್ಲಮ್ಮನ ಜಯಂತಿ ಆಚರಣೆಗೆ ಸರ್ಕಾರದ ಮಾನ್ಯತೆ ನೀಡುವುದರ ಜೊತೆಗೆ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಪೀಠಗಳನ್ನು ಪ್ರಾರಂಭಿಸಿದೆ.

10 ವರ್ಷಗಳ ಹಿಂದೆ ಮುಳ್ಳುಗಿಡಗಳು ತುಂಬಿಕೊಂಡಿದ್ದ ಈ ಜಾಗ ಇವತ್ತು ಸುಂದರ ಕಲಿಕಾ ತಾಣವನ್ನಾಗಿ ಮಾಡಿರುವ ಶ್ರೀಗಳು 10 ವರ್ಷಗಳಲ್ಲೇ ಅದ್ಭುತ ಸಾಧನೆ ಮಾಡಿದ್ದಾರೆ ಎಂದು ಶಿವಶಂಕರ ರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀ ವೇಮನಾನಂದ ಸ್ವಾಮೀಜಿ ಮಾತನಾಡಿ, 10 ವರ್ಷಗಳ ಹಿಂದೆ ಪ್ರಾರಂಭವಾದ ಈ ವಿದ್ಯಾಪೀಠದಲ್ಲಿ 40 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಇವತ್ತು 2300 ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಕಲಿಯುವಂತಹ ವಾತಾವರಣ ಸೃಷ್ಟಿಯಾಗಲು ಸಮಾಜದ ಅನೇಕರು ಸಹಕಾರ ನೀಡಿದ್ದಾರೆ.

ಶ್ರೀ ಬಸವಕುಮಾರ ಶ್ರೀಗಳ ಆಸಕ್ತಿ ಮತ್ತು ಕಾಳಜಿಯಿಂದಾಗಿ ಈ ವಿದ್ಯಾಸಂಸ್ಥೆ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. 5 ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ವಸತಿ ಸೌಲಭ್ಯ ಕಲ್ಪಿಸುವ ಗುರಿ ಇಟ್ಟುಕೊಂಡು ಇಷ್ಟೆಲ್ಲಾ ಕಟ್ಟಡಗಳ ನಿರ್ಮಾಣ ಮಾಡುತ್ತಿದ್ದೇವೆ. ಇದಕ್ಕಾಗಿ ಶ್ರಮಿಸಿದವರನ್ನು ಇಲ್ಲಿ ಕರೆಸಿ, ಕೃತಜ್ಞತೆ ಸಲ್ಲಿಸುವುದೂ ಕೂಡಾ ಈ ದಶಮಾನೋತ್ಸವದ ಆಶಯವಾಗಿದೆ ಎಂದು ಶ್ರೀ ವೇಮನಾನಂದ ಸ್ವಾಮೀಜಿ ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಬಸವ ಕುಮಾರ ಸ್ವಾಮೀಜಿ ಅವರು, ವೇಮಾನಾನಂದ ಶ್ರೀಗಳು ದೈವ ಪ್ರೇಮ ಮತ್ತು ದೈವೀ ಶ್ರದ್ಧೆಯಿಂದಾಗಿ ಸಮಾಜದಲ್ಲಿ ಇಷ್ಟೊಂದು ಬದಲಾವಣೆ ತರಲು ಸಾಧ್ಯವಾಗಿದೆ.

ಅಕ್ಕೇರ ಲಕ್ಷ್ಮಣ ರೆಡ್ಡಿ ಅವರ ಸಂಕಲ್ಪದಂತೆ ಶ್ರೀಗಳು ಇಲ್ಲಿರುವ ಶ್ರೀರಾಮ ವನದಲ್ಲಿ ಪೂಜೆ ಸಲ್ಲಿಸಲು ಬಂದಿದ್ದರು. ನಂತರ ಅವರನ್ನು ಈ ಜಾಗ ಆಕರ್ಷಿಸಿತು. ಹೊಸಹಳ್ಳಿಯಂತಹ ಸಣ್ಣ ಊರಿನಲ್ಲಿ ರೆಡ್ಡಿ ಗುರುಪೀಠ ಮತ್ತು ವಿದ್ಯಾಪೀಠ ಸ್ಥಾಪಿಸಿ, ದೇಶ-ವಿದೇಶದವರು ಇಲ್ಲಿಗೆ ಬರುವಂತೆ ಮಾಡಿರುವ ಶ್ರೀಗಳು ತಾಯಿಯ ಸ್ವರೂಪವಾಗಿದ್ದಾರೆ. ಅವರು ಉದ್ದೇಶಗಳು ಇನ್ನೂ ಬಹಳಷ್ಟಿದ್ದು, ಹಂತ-ಹಂತವಾಗಿ ನಿಮಗಾಗಿ ಸಾಕಾರಗೊಳ್ಳಲಿವೆ ಎಂದು ಶ್ರೀ ಬಸವ ಕುಮಾರ ಸ್ವಾಮೀಜಿ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಬಿ.ಆರ್.ಯಾವಗಲ್ ಮಾತನಾಡಿ, ಹೊಸಹಳ್ಳಿಯಲ್ಲಿ ಕಿನ್ನಾರ ಲೋಕ ಸೃಷ್ಟಿ ಮಾಡಿರುವ ನಮ್ಮ ಶ್ರೀಗಳ ಕ್ರಿಯಾ ಶೀಲತೆಯನ್ನು ಸಮಾಜ ಅಭಿನಂದಿಸುತ್ತದೆ. ಬಹಳ ಅದ್ಭುತವಾದ ಲೋಕವನ್ನೇ ಇಲ್ಲಿ ಸೃಷ್ಟಿ ಮಾಡಿದ್ದಾರೆ. ಇದೊಂದು ದಿನ ಈ ಕ್ಷೇತ್ರ ದೇಶದ ನಮನ ಸೆಳೆಯಲಿದೆ ಎಂದ ಯಾವಗಲ್ ಅವರು, ನಮ್ಮ ಸಮಾಜಕ್ಕೆ ಶಾಸಕರ, ಮಂತ್ರಿಗಳ ಕೊರತೆ ಇಲ್ಲ. ಆದರೆ, ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿದ್ದು, ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಶ್ರೀಗಳು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. 

ಸಚಿವ ರಾಮಲಿಂಗಾರೆಡ್ದಿ ಅವರು ಅಂತರರಾಷ್ಟ್ರೀಯ ಸಮಾವೇಶ ಮಾಡುವ ಚಿಂತನೆ ಹೊಂದಿರುವ ವಿಷಯ ತಿಳಿದು ಸಂತೋಷವಾಗಿದೆ ಎಂದರು.

ಈ ವೇಳೆ ಪ್ರಗತಿಪರ ರೈತರು, ಯೋಧರು ಹಾಗೂ ಇದೇ ಶಾಲೆಯಲ್ಲಿ ಕಲಿತು ವಿವಿಧ ಸ್ಥಾನದಲ್ಲಿರುವವರನ್ನೂ ಮತ್ತು ಗುರುಪೀಠ, ವಿದ್ಯಾಪೀಠದ ಏಳಿಗೆಗಾಗಿ ಶ್ರಮಿಸಿದ ಸಮಾಜದ ಮುಖಂಡರನ್ನೂ ಸನ್ಮಾನಿಸಿ, ಗೌರವಿಸಲಾಯಿತು.

ಬೆಂಗಳೂರಿನ ಉದ್ಯಮಿಗಳಾದ ಭೈರತಿ ಬಾಬು ರೆಡ್ಡಿ, ಎಂ.ಎನ್.ರೆಡ್ಡಿ, ಶಿರಗುಪ್ಪದ ರವೀಂದ್ರ ರೆಡ್ಡಿ, ದಾವಣಗೆರೆ ಆರ್‌ವಿಆರ್ ಕಂಪನಿಯ ಆರ್.ವೆಂಕಟ ರೆಡ್ಡಿ, ಯುಎಸ್ಎ ಖ್ಯಾತ ವೈದ್ಯರಾದ ಡಾ. ಚಂಪಾವತಿ ನಾಗಪ್ಪ ದಂಪತಿಗಳು, ಮುದೋಳ್‌ನ ದಯಾನಂದ ಪಾಟೀಲ್, ಅಂದಾನಿ ಗೌಡ, ಸಂಪಗಿ ಕುಮಾರ ರೆಡ್ಡಿ, ಗೌರಿಬಿದನೂರಿನ ಹನುಮಂತ ರೆಡ್ಡಿ, ವಿದ್ಯಾಪೀಠದ ಉಪಾಧ್ಯಕ್ಷ ವಿಶ್ವಾಂಬರ ರೆಡ್ಡಿ, ಬಿ.ಆರ್.ತಿಪ್ಪೇಸ್ವಾಮಿ, ವೈ.ದ್ಯಾವಪ್ಪ ರೆಡ್ಡಿ, ನಂದಿಗಾವಿ ರಾಜಣ್ಣ ರೆಡ್ಡಿ, ಬಿಳಸನೂರಿನ ಹನುಮಂತ ರೆಡ್ಡಿ, ಎನ್.ರಂಗಪ್ಪ ರೆಡ್ಡಿ, ವಿಷ್ಣು ರೆಡ್ಡಿ, ಕಡ್ಲೇಗೊಂದಿ ಹನುಮಂತ ರೆಡ್ಡಿ, ಆಡಳಿತಾಧಿಕಾರಿ ಹೆಚ್.ಪಿ.ಸುಭಾಸ್, ಕಾನೂನು ಸಲಹೆಗಾರ ರುದ್ರೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.

ನಂತರ ವಿದ್ಯಾರ್ಥಿಗಳಿಂದ ತಡರಾತ್ರಿ ವರೆಗೂ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನಸೂರೆಗೊಂಡವು.

error: Content is protected !!