ದಾವಣಗೆರೆ, ಜ. 5- ಕರ್ನಾಟಕ ರಕ್ಷಣ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ, ಪ್ರಧಾನ ಕಾರ್ಯದರ್ಶಿ ಸಣ್ಣೀರಪ್ಪ ಹಾಗೂ ವಿವಿಧ ರಾಜ್ಯ ಪದಾ ಧಿಕಾರಿಗಳು ಸೇರಿದಂತೆ 50 ಕ್ಕೂ ಹೆಚ್ಚು ಕಾರ್ಯಕರ್ತ ರನ್ನು ಬಂಧಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ವೇದಿಕೆ ಜಿಲ್ಲಾ ಘಟಕದ ವತಿಯಿಂದ ನಗರದ ಎವಿಕೆ ಕಾಲೇಜು ರಸ್ತೆಯಲ್ಲಿನ ವೇದಿಕೆ ಕಚೇರಿ ಬಳಿ ಇರುವ ಗುರುಭವನದಲ್ಲಿ ರಕ್ತ ಪತ್ರ ಚಳವಳಿ ನಡೆಸಲಾಯಿತು.
ಕರವೇ ಕಾರ್ಯಕರ್ತರು ರಕ್ತ ಪತ್ರ ಚಳವಳಿಯಲ್ಲಿ ಪಾಲ್ಗೊಂಡು ನಾರಾಯಣ ಗೌಡರು ಮತ್ತವರ ತಂಡವನ್ನು ಬಿಡುಗಡೆ ಮಾಡಬೇಕೆಂದು ರಕ್ತದಲ್ಲಿ ಬರೆದ ಪತ್ರವನ್ನು ಸಿದ್ಧರಾಮಯ್ಯ ಅವರಿಗೆ ಪೋಸ್ಟ್ ಮೂಲಕ ಕಳುಹಿಸಿದರು.
ಇದೇ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ಮಾತನಾಡಿ, ಕನ್ನಡ ಭಾಷೆಯ ಉಳುವಿಗಾಗಿ ಮತ್ತು ರಾಜ್ಯದ ಅಸ್ಮಿತೆಗಾಗಿ ಬೆಂಗಳೂರಿನಲ್ಲಿರುವ ಅಂಗಡಿ ಮುಂಗಟ್ಟುಗಳು, ಮಾಲ್ಗಳ ನಾಮಫಲಕಗಳು ಕನ್ನಡದಲ್ಲಿ ಇರಬೇಕು ಎಂದು ಹೋರಾಟ ಮಾಡಿದವರನ್ನು ಬಂಧಿಸಿರುವುದು ಅತ್ಯಂತ ಖಂಡನೀಯ. ಕನ್ನಡಿಗರಿಗೆ ಉದ್ಯೋಗ ಕೊಡದೇ ಕನ್ನಡಿಗರ ಮೇಲೆ ದೌರ್ಜನ್ಯ ಎಸಗಿದವರ ವಿರುದ್ಧ ಸಮರ ಸಾರಿದ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಮತ್ತವರ ತಂಡದವರನ್ನು ಬಂಧಿಸಿದ್ದು, ಈ ಕೂಡಲೇ ಕನ್ನಡ ಹೋರಾಟಗಾರರ ಕೇಸುಗಳನ್ನು ವಾಪಾಸ್ ಪಡೆದು, ಬಂಧಿತರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಚಳವಳಿಯಲ್ಲಿ ಕರವೇ ಪದಾಧಿಕಾರಿಗಳಾದ ಗೋಪಾಲ್ ದೇವರಮನಿ, ಸುರೇಶ್, ಆಟೋ ರಫೀಕ್, ಜಿ.ಎಸ್. ಸಂತೋಷ್, ಸಂಜು, ದಾದಾಪೀರ್, ಗುರುಮೂರ್ತಿ, ರವಿಕುಮಾರ್, ಖಾದರ್ ಬಾಷಾ, ಧೀರೇಂದ್ರ, ಪರಮೇಶ್, ತುಳಸಿರಾಮ್, ಅನ್ವರ್ ಮತ್ತಿತರರು ಪಾಲ್ಗೊಂಡಿದ್ದರು.