ಹರಿಹರ, ಜ. 2- ಭಾನುವಳ್ಳಿ ಹಾಗೂ ಕಡ್ಲೆಗೊಂದಿ ಗ್ರಾಮಗಳ ನಿರ್ವಸತಿಗ ದಲಿತ ಹಾಗೂ ಹಿಂದುಳಿದ ಸಮುದಾಯದವರಿಗೆ ವಸತಿ ಯೋಜನೆ ಜಾರಿಗೆ ಆಗ್ರಹಿಸಿ ನಗರದ ತಾಲ್ಲೂಕು ಕಚೇರಿ ಎದುರು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕ್ರಷ್ಣಪ್ಪ ಸ್ಥಾಪಿತ)ಯಿಂದ ನಡೆಸುತ್ತಿರುವ ಧರಣಿ ಸ್ಥಳಕ್ಕೆ ಮಂಗಳವಾರ ಶಾಸಕ ಬಿ.ಪಿ.ಹರೀಶ್ ಭೇಟಿ ನೀಡಿ ಮನವಿ ಸ್ವೀಕರಿಸಿದರು.
ನಂತರ ಕದಸಂಸ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, ಎರಡೂ ಗ್ರಾಮಗಳಲ್ಲಿ ದಲಿತ ಹಾಗೂ ಹಿಂದುಳಿದ ಸಮುದಾಯದ ನೂರಾರು ಕುಟುಂಬದವರು ಸಣ್ಣ, ಪುಟ್ಟ ಗುಡಿಸಲು, ನೆರಿಕೆ ಮನೆಗಳಲ್ಲಿಗಳಲ್ಲಿ ಮೂಲ ಸೌಕರ್ಯಗಳಿಲ್ಲದೆ ವಾಸಿಸುತ್ತಿದ್ದಾರೆ ಎಂದರು.
ಈ ಎರಡೂ ಗ್ರಾಮಗಳಲ್ಲಿ ಸರ್ಕಾರಕ್ಕೆ ಸಂಬಂಧಿತ ಜಮೀನುಗಳು ಲಭ್ಯವಿದೆ. ಈ ಕುರಿತು ಕಳೆದ ಎರಡು ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ. ಕಳೆದ ಜೂನ್ ತಿಂಗಳಲ್ಲಿ ಭಾನುವಳ್ಳಿಯಿಂದ ಹರಿಹರದವರೆಗೆ ಪಾದಯಾತ್ರೆಯನ್ನೂ ಮಾಡಲಾಗಿದೆ, ಕಳೆದ 8 ದಿನಗಳಿಂದ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ನಡೆಸುತ್ತಿದ್ದೇವೆ. ಈ ಕುರಿತು ತಾಲ್ಲೂಕು ಹಾಗೂ ಜಿಲ್ಲಾಡಳಿತದವರಿಗೆ ಮನವರಿಕೆ ಮಾಡಿ ವಸತಿ ಸೌಲಭ್ಯ ಕೊಡಿಸಬೇಕೆಂದು ಶಾಸಕರಿಗೆ ಮನವಿ ಮಾಡಿದರು.
ಈ ಕುರಿತು ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆಂದು ಶಾಸಕ ಹರೀಶ್ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹನುಮಜ್ಜಿ ಮಾತೆಂಗಮ್ಮ, ಗ್ರಾಪಂ ಸದಸ್ಯ ತಿಮ್ಮಣ್ಣ ಕಡ್ಲೆಗೊಂದಿ, ಪರಮೇಶ್, ಚೌಡಪ್ಪ ಭಾನುವಳ್ಳಿ, ಹನುಮಂತಪ್ಪ, ಮಲ್ಲಮ್ಮ, ಬಸಮ್ಮ, ನಿರ್ಮಲ, ಹನುಮಕ್ಕ, ಶಹತಾಜ್‍ಬಾನು, ಮಲ್ಕಾಬಿ, ಸೀತಮ್ಮ, ಗಂಗಮ್ಮ ಇದ್ದರು.