ನೀರಾವರಿ ಇಲಾಖೆ ಇಇ ಕಚೇರಿ ಮುಂದೆ ರೈತರ ಪ್ರತಿಭಟನೆ
ದಾವಣಗೆರೆ, ಡಿ. 28- ನಾಳೆಯಿಂದ ತರೀಕೆರೆ ಮತ್ತು ಕಡೂರಿಗೆ ನೀರು ಹರಿಸುವ ಆದೇಶ ರದ್ದು ಮಾಡುವಂತೆ ಒತ್ತಾಯಿಸಿ ಗುರು ವಾರ ನಗರದ ನೀರಾವರಿ ಇಲಾಖೆ ಕಾರ್ಯ ಪಾಲಕ ಅಭಿಯಂತರರ ಕಚೇರಿ ಎದುರು ರೈತ ಮುಖಂಡರು ಪ್ರತಿಭಟನೆ ನಡೆಸಿದರು.
ಭದ್ರಾ ಮೇಲ್ದಂಡೆ ಯೋಜನೆಯಡಿ ತರೀಕೆರೆ ಏತ ನೀರಾವರಿ ಯೋಜನೆ ಅಚ್ಚುಕಟ್ಟು ಪ್ರದೇಶಕ್ಕೆ ನೀರನ್ನು ಒದಗಿಸಲು ಅನುವಾಗುವಂತೆ ಮತ್ತು ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಕಾಲುವೆಯ ಮೂಲಕ ವಾಣಿ ವಿಲಾಸ ಸಾಗರಕ್ಕೆ ನೀರನ್ನು ಹರಿಸಲು ಅನುವಾಗುವಂತೆ ಭದ್ರಾ ಜಲಾಶಯದ ನೀರನ್ನು ಒಳಹರಿವಿನ ಪ್ರಮಾಣ ಹೆಚ್ಚಾದ ನಂತರ ಮತ್ತು ನೀರಿನ ಲಭ್ಯತೆ ನೋಡಿಕೊಂಡು ನೀರು ಹರಿಸಬೇಕು ಎಂದು ಸರ್ಕಾರದ ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಆದೇಶ ನೀಡಿದ್ದಾರೆ.
ಆದರೆ ಭದ್ರಾ ಸೂಪರಿಂಟೆಂಡೆಂಟ್ ಇಂಜಿನಿಯರ್ ಅವರು ತರೀಕೆರೆ ಮತ್ತು ಕಡೂರು ಭಾಗದ ರೈತರ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಬವಣೆಯನ್ನು ನೀಗಿಸುವ ಸಲುವಾಗಿ ಎಂದು ಕಾರಣ ನೀಡಿ ಡಿ.29 ರಿಂದ ಪ್ರತಿ ದಿನ 700 ಕ್ಯೂಸೆಕ್ಸ್ ನಂತೆ 4 ದಿನ ನೀರು ಬಿಡುವುದಾಗಿ ಘೋಷಿಸಿದ್ದಾರೆ.
ಈ ಕ್ರಮದಿಂದಾಗಿ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಬಹಳ ಅನ್ಯಾಯವಾಗುತ್ತದೆ ಎಂದು ರೈತ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಕರೆದು ನಿರ್ಣಯಿಸದೇ ನೀರು ಬಿಡುವ ತೀರ್ಮಾನ ಕೈಗೊಳ್ಳಬಾರದು. ತಕ್ಷಣ ಭದ್ರಾ ನೀರಾವರಿ ಸಲಹಾ ಸಮಿತಿ ಕರೆದು ಬೇಸಿಗೆ ಹಂಗಾಮಿಗೆ ನೀರು ಹರಿಸುವ ವೇಳಾಪಟ್ಟಿ ಪ್ರಕಟಣೆ ಮಾಡ ಬೇಕು. ತುಂಗಾದಿಂದ ಭದ್ರಾಕ್ಕೆ ಹರಿಸಬೇಕಾದ ನೀರನ್ನು ಲಿಫ್ಟ್ ಮಾಡುವ ತೀರ್ಮಾನ ಕೈಗೊಳ್ಳ ಬೇಕು. ಭದ್ರಾ ಮೇಲ್ದಂಡೆ ಯೋಜನೆಯ ಷರತ್ತಿನಂತೆ ತುಂಗಾದಿಂದ ಭದ್ರಾಕ್ಕೆ ನೀರು ಲಿಫ್ಟ್ ಮಾಡುವವರೆಗೆ ಭದ್ರಾ ಮೇಲ್ದಂಡೆ ಭಾಗಕ್ಕೆ ನೀರು ಹರಿಸಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ರೈತ ಮುಖಂಡರಾದ ತೇಜಸ್ವಿ ಪಟೇಲ್, ಶಾಮನೂರು ಲಿಂಗರಾಜು, ಕೊಳೇನಹಳ್ಳಿ ಬಿ ಎಂ ಸತೀಶ್, ಲೋಕಿಕೆರೆ ನಾಗರಾಜ್, ಬೆಳವನೂರು ನಾಗೇಶ್ವರರಾವ್, ಧನಂಜಯ ಕಡ್ಲೆಬಾಳ್, ಬಲ್ಲೂರು ರವಿಕುಮಾರ್, ಬಲ್ಲೂರು ಬಸವರಾಜ, ಕುಂದುವಾಡದ ಗಣೇಶಪ್ಪ, ಗುರುನಾಥ್, ಜಿಮ್ಮಿ ಹನುಮಂತಪ್ಪ, ಮಹೇಶಪ್ಪ, ಆರನೇಕಲ್ಲು ವಿಜಯಕುಮಾರ, ಕಲ್ಪನಹಳ್ಳಿ ಸತೀಶ್, ಉಜ್ಜಪ್ಪ, ಚಿಕ್ಕಬೂದಿಹಾಳು ಭಗತ್ ಸಿಂಗ್, ಕಲ್ಲುಬಂಡೆ ಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು.