ಗಂಗಾಮತಸ್ಥರನ್ನು ಜಾಗೃತಿಗೊಳಿಸಲು ಚೌಡಯ್ಯ ಜಾತ್ರೆ

ಗಂಗಾಮತಸ್ಥರನ್ನು ಜಾಗೃತಿಗೊಳಿಸಲು ಚೌಡಯ್ಯ ಜಾತ್ರೆ

ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ

ದಾವಣಗೆರೆ, ಡಿ.28- ರಾಜ್ಯದಲ್ಲಿ ಗಂಗಾಮತಸ್ಥರು 39 ಪಂಗಡಗಳಲ್ಲಿ ಹರಿದು ಹಂಚಿ ಹೋಗಿದ್ದಾರೆ. ಇವರೆಲ್ಲರನ್ನೂ ಒಂದೇ ವೇದಿಕೆಗೆ ತರುವ ಉದ್ದೇಶವನ್ನೂ ಅಂಬಿಗರ ಚೌಡಯ್ಯ ಜಾತ್ರೆ ಹೊಂದಿದೆ ಎಂದು ಶ್ರೀ ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ ಹೇಳಿದರು.
ನಗರದಲ್ಲಿರುವ ಜಿಲ್ಲಾ ಗಂಗಾಮತಸ್ಥರ ವಿದ್ಯಾರ್ಥಿ ನಿಲಯದಲ್ಲಿ ಜಿಲ್ಲಾ ಗಂಗಾಮತಸ್ಥರ ಸಂಘದಿಂದ ನಿನ್ನೆ ಹಮ್ಮಿಕೊಂಡಿದ್ದ ಜನವರಿ 14 ಮತ್ತು 15 ರಂದು ನಡೆಯಲಿರುವ ಅಂಬಿಗರ ಚೌಡಯ್ಯನವರ ಜಾತ್ರೆಯ ಪೂರ್ವಭಾವಿ ಸಭೆ ಮತ್ತು ಹಿರಿಯ ಚೇತನ ಕುಂಬಳೂರಿನ ಮಾಗಾನಹಳ್ಳಿ ಹಾಲಪ್ಪ ಅವರಿಗೆ ನುಡಿ ನಮನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ವ್ಯಾಸ ಪರಂಪರೆ ಹಾಗೂ ಚೌಡಯ್ಯನವರ ಪರಂಪರೆಯನ್ನು ಬೆಳೆಸುವುದೂ ಕೂಡಾ
ಜಾತ್ರೆ ಉದ್ದೇಶವಾಗಿದ್ದು, ಈ ಜಾತ್ರೆಗೆ ಸಮಾಜದವರು ಕುಟುಂಬ ಸಮೇತರಾಗಿ ಬರಬೇಕೆಂದರು.
ಗಂಗಾಮಾತೆಯನ್ನು ನಮ್ಮ ಕುಲ ದೇವತೆಯಾಗಿ ಮತ್ತು ಚೌಡಯ್ಯನವರನ್ನು ಕುಲ ದೇವರನ್ನಾಗಿ ನಮ್ಮ ಸಮಾಜದ ಪ್ರತಿಯೊಬ್ಬರೂ ಒಪ್ಪಿಕೊಂಡು ಆರಾಧಿಸಿದಾಗ ಮಾತ್ರ ನಮ್ಮ ಸಮಾಜದ ಸಂಘಟನೆ ಹಾಗೂ ಪ್ರಗತಿ ಸಾಧ್ಯ ಎಂದರು.
ಮೌಢ್ಯಗಳಿಂದ ಜನರನ್ನು ಹೊರ ತರಲು ಸಮಾಜಕ್ಕೆ ಶಿಕ್ಷಣ ಹಾಗೂ ಸಂಸ್ಕಾರ ನೀಡುವ ಈ ಜಾತ್ರೆ, ಸಮಾಜಕ್ಕೆ ದಿಕ್ಕು ತೋರಿಸಲಿದೆ ಎಂದು ವಿಶ್ವಾಸ ನಮಗಿದೆ ಎಂದ ಸ್ವಾಮೀಜಿ, ಮಠ ಹಾಗೂ ಗುರುಗಳು, ಹಿರಿಯರ ಬಗ್ಗೆ ಭಕ್ತಿ-ಭಾವ ಬೆಳೆಸಿಕೊಂಡಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದರು.
ನಾವು ಕಾವಿ ದೀಕ್ಷೆಯನ್ನು ಸ್ವೀಕರಿಸಿದ್ದು ಇದೇ ನಗರದಲ್ಲಿ. ಹಾಗಾಗಿ ನಮಗೆ ದಾವಣಗೆರೆ ಜಿಲ್ಲೆಯ ಬಗ್ಗೆ ವಿಶೇಷ ಪ್ರೀತಿ, ಕಾಳಜಿ ಇದೆ. ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರೆಯ ಎರಡೂ ದಿನ ದಾವಣಗೆರೆ ಜಿಲ್ಲೆಯ ಭಕ್ತರು ದಾಸೋಹದ ಜವಾಬ್ದಾರಿ ವಹಿಸಿಕೊಳ್ಳಬೇಕೆಂದು ಸ್ವಾಮೀಜಿ ಹೇಳಿದರು.
ಕುಂಬಳೂರಿನ ಮಾಗಾನಹಳ್ಳಿ ಹಾಲಪ್ಪಜ್ಜ ನವರಿಗೆ 94 ವರ್ಷ ವಯಸ್ಸಾಗಿದ್ದರೂ ಮಗು ವಿನಂತೆ ಸದಾ ಉತ್ಸಾಹದಿಂದ ಇರುತ್ತಿದ್ದರು. ಸಮಾಜ, ಮಠ, ಗುರುಗಳ ಬಗ್ಗೆ ಅತೀವ ಕಳಕಳಿ ಹೊಂದಿದ್ದರು. ಅವರು ಮುಗ್ಧ ಸ್ವಭಾವ ಹಾಗೂ ಸಂಸ್ಕಾರವಂತ ಹಿರಿಯ ಅಧ್ಯಾತ್ಮಿಕ ಚಿಂತಕರಾಗಿದ್ದರು. ಅವರ ಅಗಲಿಕೆ ಅವರ ಕುಟುಂಬಕ್ಕೆ ಅಷ್ಟೇ ಅಲ್ಲ, ಇಡೀ ಸಮಾಜಕ್ಕೆ ನಷ್ಟ ತಂದಿದೆ ಎಂದು ಸ್ವಾಮೀಜಿ ಹೇಳಿದರು.
ಜಿಲ್ಲಾ ಗಂಗಾಮತಸ್ಥರ ಸಂಘದ ಅಧ್ಯಕ್ಷ ಮಾಗಾನಹಳ್ಳಿ ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಗಂಗಾಮತಸ್ಥರ ಸಂಘದ ಹಿರಿಯ ಉಪಾಧ್ಯಕ್ಷ ಪುಟಗನಾಳ್ ಮಂಜಣ್ಣ, ಮಾಜಿ ಜಿಲ್ಲಾ ಕಾರ್ಯದರ್ಶಿ ಬಿ.ಹೆಚ್.ರಂಗನಾಥ್, ಯೋಗರಾಜ್, ಉಪನ್ಯಾಸಕ ರಾಜೇಶ್ ರಬಕವಿ, ಜಿಲ್ಲಾ ಗಂಗಾಮತಸ್ಥರ ನೌಕರರ ಸಂಘದ ಅಧ್ಯಕ್ಷ ನಿಟ್ಟೂರು ಮಹಾಂತೇಶ್, ಮಲೇಬೆನ್ನೂರು ಪುರಸಭೆ ಸದಸ್ಯ ಗೌಡ್ರ ಮಂಜಣ್ಣ, ಕುಂಬಳೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಆರ್.ಹೆಚ್.ಬಸವರಾಜ್, ಮುಖಂಡರಾದ ಕೆಂಚನಹಳ್ಳಿ ಮಹಾಂತೇಶಪ್ಪ, ಸುರೇಶ್, ಲಿಂಗರಾಜ್, ಪತ್ರಕರ್ತ ಜಿಗಳಿ ಪ್ರಕಾಶ್ ಅವರು ಮಾತನಾಡಿದರು.
ಈ ವೇಳೆ ಹೊನ್ನಾಳಿ ತಾ. ಗಂಗಾಮತಸ್ಥರ ಸಂಘದ ನೂತನ ಅಧ್ಯಕ್ಷ ವೆಂಕಟೇಶ್, ಉಪಾ ಧ್ಯಕ್ಷ ಚನ್ನೇಶ್ ಅವರನ್ನು ಅಭಿನಂದಿಸಲಾ ಯಿತು. ಕುಂಬಳೂರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಉಮಾದೇವಿ ಎಂ.ಹೆಚ್.ಶಿವರಾಮ ಚಂದ್ರಪ್ಪ, ಕೊಂಡಜ್ಜಿ ಬಸವರಾಜಪ್ಪ, ಸಾರಥಿ ಕೃಷ್ಣಪ್ಪ, ಮಲೇಬೆನ್ನೂರಿನ ಕಣ್ಣಾಳ್ ಪರಶುರಾಮಪ್ಪ, ಕಣ್ಣಾಳ್ ಹನುಮಂತಪ್ಪ, ನಿವೃತ್ತ ಎಇಇ ಕೃಷ್ಣಪ್ಪ ಜಾಡರ್, ನಿಟ್ಟೂರಿನ ಮಟ್ಟಿ ನಾಗರಾಜ್, ಕುಂಬಳೂರಿನ ಕರಡೇಪ್ಪರ ಬಸವರಾಜ್, ಎಂ.ಹೆಚ್.ಹನುಮಂತಪ್ಪ, ಎಂ.ಹೆಚ್.ಪರಮೇಶ್ವರಪ್ಪ, ಎಂ.ಹೆಚ್.ರಮೇಶ್, ಎಂ.ವಾಸುದೇವಮೂರ್ತಿ, ಎಂ.ಹೆಚ್.ಶರಣ್, ಗೋವಿನಹಾಳ್ ಚಂದ್ರಪ್ಪ, ನಿವೃತ್ತ ನೌಕರರಾದ ಶೇಖರಪ್ಪ, ತಿಪ್ಪಣ್ಣ, ಭೀಮೇಶ್ ಸೇರಿದಂತೆ ಇನ್ನೂ ಅನೇಕರು ಸಭೆಯಲ್ಲಿದ್ದರು.
ಲಿಂಗರಾಜ್ ಸ್ವಾಗತಿಸಿದರು. ಜಿಲ್ಲಾ ಗಂಗಾಮತಸ್ಥರ ಸಂಘದ ಕಾರ್ಯದರ್ಶಿ ಉಮೇಶ್ ಕಾರ್ಯಕ್ರಮ ನಿರೂಪಿಸಿದರು.

error: Content is protected !!