ಜಿಲ್ಲಾಮಟ್ಟದ ಜಾಗೃತಿ ಸಮಾವೇಶದಲ್ಲಿ ಶಾಸಕ ಕೆ.ಎಸ್. ಬಸವಂತಪ್ಪ ವ್ಯಾಕುಲತೆ
ದಾವಣಗೆರೆ, ಡಿ. 28- ಪ್ರಸ್ತುತ ದಲಿತ ಸಂಘರ್ಷ ಸಮಿತಿಗಳು ಸಾಮಾಜಿಕ ಚಳವಳಿಗಳಿಂದ ವಿಮುಖವಾಗುತ್ತಿದ್ದು, ಸಂಘಟನಾ ಚತುರರು ಯಾರಾದರೂ ನಾಯಕತ್ವ ವಹಿಸಿಕೊಂಡು, ಸಂಘಟನೆಗಳನ್ನು ಒಗ್ಗೂಡಿಸುವ ಕೆಲಸವನ್ನು ಮಾಡುವ ಅಗತ್ಯತೆ ಇದೆ ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.
ನಗರದ ಮಹಾನಗರ ಪಾಲಿಕೆ ಆವರಣದಲ್ಲಿರುವ ಶ್ರೀಮತಿ ರಾಧಮ್ಮ ಚನ್ನಗಿರಿ ರಂಗಪ್ಪ ಸ್ಮಾರಕ ರಂಗಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿ ವತಿಯಿಂದ ದಲಿತ, ಶೋಷಿತರ ಹಕ್ಕುಗಳಿಗೆ ಆಗ್ರಹಿಸಿ ಇಂದು ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಅರಿಯಬೇಕಾಗಿದೆ. ಒಗ್ಗಟ್ಟು ಇಲ್ಲದ ಯಾವುದೇ ಸಂಘಟನೆಗಳು ಬಲಗೊಳ್ಳಲು ಅಸಾಧ್ಯ. ಹಿಂದೆ ಪ್ರೊ. ಬಿ. ಕೃಷ್ಣಪ್ಪ ಅವರು ಒಂದು ಕರೆ ಕೊಟ್ಟರೆ ಸಾಕು ದಾವಣಗೆರೆಯೇ ಬಂದ್ ಆಗುತ್ತಿತ್ತು. ಅಂದು ರೈತ ಮತ್ತು ದಲಿತ ಸಂಘಟನೆಗಳ ಮುಖಂಡರುಗಳಿಗೆ ಅಂತ ಶಕ್ತಿ ಇತ್ತು ಎಂದು ಹಿಂದಿನ ದಲಿತ ಚಳವಳಿಗಳನ್ನು ಸ್ಮರಿಸಿಕೊಂಡರು.
ಅನೇಕ ಭಿನ್ನಾಭಿಪ್ರಾಯಗಳಿಂದ ದಲಿತ ಸಂಘಟನೆಗಳು ವಿಭಜನೆಗೊಂಡಿವೆ. ಅವು ಗಳಿಗೆ ಶಕ್ತಿ ತುಂಬಲು ಸಮರ್ಥ ನಾಯಕತ್ವ ಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮುಖಂಡ ರೆಲ್ಲರೂ ಒಗ್ಗೂಡಿ ಸಂಘಟನೆ ಬಲಿಷ್ಠಗೊಳಿ ಸಲು ಚಿಂತನ-ಮಂಥನ ಸಭೆ ನಡೆಸುವ ಮೂಲಕ ವಿಭಜನೆಗೊಂಡ ಸಂಘಟನೆಗಳನ್ನು ಒಂದೇ ವೇದಿಕೆಯಡಿ ತರುವ ಪ್ರಯತ್ನವನ್ನು ಮಾಡಬೇಕಾಗಿದೆ ಎಂದರು.
ನನ್ನ ಮತ ಕ್ಷೇತ್ರದಲ್ಲಿ ಉಳುಮೆ ಮಾಡಿ ಜೀವನ ಸಾಗಿಸುತ್ತಿರುವ ಜನರಿಗೆ ಹಕ್ಕುಪತ್ರ ಕೊಡಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದು, ಅನ್ನ, ಸೂರು, ಉಳುಮೆ ಮಾಡಲು ಜಮೀನು ಇದ್ದರೆ ಜೀವನ ನಿರ್ವಹಣೆ ಮಾಡಬಹುದು. ಅಗತ್ಯ ಸೌಲಭ್ಯಗಳನ್ನು ಕೊಡಿಸುವ ಕಡೆ ಹೆಚ್ಚು ಗಮನಹರಿಸುತ್ತಿದ್ದೇನೆ ಎಂದರು.
ಮಾಜಿ ಸಚಿವ ಹೆಚ್. ಆಂಜನೇಯ ಮಾತನಾಡಿ, ಬಂಡವಾಳಶಾಹಿ ಪರ ಇರುವ ಕೇಂದ್ರದ ಬಿಜೆಪಿ ಸರ್ಕಾರ ಬೆಲೆ ನಿಯಂತ್ರಿಸು ವಲ್ಲಿ ವಿಫಲವಾಗಿದೆ. ಭೂ ಸುಧಾರಣೆ ಕಾಯ್ದೆಗಳನ್ನು ಸಡಿಲಗೊಳಿಸಿರುವು ದರಿಂದ ಕಾಳಸಂತೆಕೋರರು ಭೂಮಿ ಮೇಲೆ ಬಂಡ ವಾಳ ಹೂಡಿಕೆ ಮಾಡಿ ಅಧಿಕ ಲಾಭ ಗಳಿಸು ವಲ್ಲಿ ಮುಂದಾಗಿದ್ದಾರೆ. ಇದರಿಂದ ಬೆಲೆ ಏರಿಕೆಯಾಗಿ ಶೋಷಿತ ವರ್ಗಕ್ಕೆ ತುಂಬಾ ತೊಂದರೆಯಾಗುತ್ತಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಯುವ ಮುಖಂಡ ಜಿ.ಬಿ. ವಿನಯ್ ಕುಮಾರ್ ಕಕ್ಕರಗೊಳ್ಳ ಮಾತನಾಡಿ, ಶಿಕ್ಷಣದಲ್ಲಿ ಬದಲಾವಣೆ ಬರದಿದ್ದರೆ ನಾವು ಎಷ್ಟೇ ಹೋರಾಟ ಮಾಡಿದರೂ ವ್ಯರ್ಥ. ನಗರ ಪ್ರದೇಶದ ಮಕ್ಕಳಿಗೆ ಹೋಲಿಸಿ ನೋಡಿದರೆ, ಗ್ರಾಮೀಣ ಮಕ್ಕಳು ಸಾಮಾನ್ಯ ಜ್ಞಾನ, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಅಲ್ಪ ಹಿಂದೆ ಇದ್ದಾರೆ ಎಂದು ಹೇಳಿದರು.
ಯಾವ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದೇವೆ ಎಂಬುದರ ಬಗ್ಗೆ ಎಲ್ಲರಿಗೂ ಅರಿವಿರಬೇಕು. ಅದು ನಮ್ಮ ವ್ಯಕ್ತಿತ್ವದಲ್ಲಿ ಬೆಸೆದುಕೊಳ್ಳಬೇಕು. ಹಾಗೆ ಆಗಲು ಸಾಮಾನ್ಯ ಶಿಕ್ಷಣ ಸಿಗಬೇಕಾಗಿದೆ ಎಂದರು.
ಶಿಕ್ಷಣದ ಮೂಲಕ ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಗುರುತಿಸಬೇಕು. ಈ ನಿಟ್ಟಿನಲ್ಲಿ ರಾಜಕಾರಣಕ್ಕೆ ಬರುವವರು ಶಿಕ್ಷಣಕ್ಕೆ ಆದ್ಯತೆ ನೀಡಬೇಕಾಗಿದೆ ಎಂದು ಆಶಿಸಿದರು.
ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ. ಎ.ಬಿ. ರಾಮಚಂದ್ರಪ್ಪ ಮಾತನಾಡಿ, ಸ್ವಾತಂತ್ರ್ಯ ಬಂದು 70 ವರ್ಷ ಗಳು ಗತಿಸಿದರೂ, ತುಂಡು ಭೂಮಿಗಾಗಿ, ಸಣ್ಣ ಸೂರಿಗಾಗಿ ಹೋರಾಟ ಮಾಡಬೇಕಾದ ದಯನೀಯ ಸ್ಥಿತಿ ಬಂದಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಶೋಷಿತರ ಪರ ಕೆಲಸ ಮಾಡಲು ಸರ್ಕಾರಗಳು ಮುಂದಾಗಬೇಕು. ಆದರೆ ಉಳ್ಳವರ ಪರ ಸರ್ಕಾರಗಳು ಕೆಲಸ ಮಾಡುತ್ತಿರುವುದು ದುರಂತವೇ ಸರಿ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಮುಖಂಡ ಚಂದ್ರಪ್ಪ ಮಾತನಾಡಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಬೆಂಗಳೂರು ವಿಭಾಗೀಯ ಸಂಚಾಲಕ ಬಿ.ಎನ್. ಜೀವೇಶಿ, ಉಪ ಪ್ರಧಾನ ಸಂಚಾಲಕ ಮಣಿಪಾಲ್ ರಾಜಪ್ಪ, ಕಟ್ಟಡ ಕಟ್ಟುವ, ಕಲ್ಲು ಕ್ವಾರಿ ಒಡೆಯುವ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಹೆಚ್.ಜಿ. ಉಮೇಶ್ ಆವರಗೆರೆ, ಹಿರಿಯ ವಕೀಲ ಅನೀಸ್ ಪಾಷ, ಪಾಲಿಕೆ ಮಾಜಿ ಮಹಾಪೌರ ಎಸ್.ಟಿ. ವೀರೇಶ್ ಮತ್ತಿತರರು ಉಪಸ್ಥಿತರಿದ್ದರು.