ಆರೋಪ – ಪ್ರತ್ಯಾರೋಪ ಬಿಡಿ, ಹೊಂದಾಣಿಕೆ ಭಾವದಲ್ಲಿ ಕೆಲಸ ಮಾಡಿ

ಆರೋಪ – ಪ್ರತ್ಯಾರೋಪ ಬಿಡಿ, ಹೊಂದಾಣಿಕೆ ಭಾವದಲ್ಲಿ ಕೆಲಸ ಮಾಡಿ

ಹರಿಹರ ತಾ.ಪಂ. ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳಿಗೆ ಜಿಪಂ ಲೆಕ್ಕಾಧಿಕಾರಿ ಸಿ.ಪಿ. ಸೌಮ್ಯಶ್ರೀ ಸಲಹೆ

ಹರಿಹರ, ಡಿ.27- ಅಧಿಕಾರಿಗಳು ಬೇರೆ ಇಲಾಖೆಯ ಮೇಲೆ ಆರೋಪ, ಪ್ರತ್ಯಾರೋಪ ಮಾಡುವುದರ ಬದಲಿಗೆ ಹೊಂದಾಣಿಕೆ ಭಾವದಲ್ಲಿ ಸಾಗಿದಾಗ, ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪಂಚಾಯತಿ ಲೆಕ್ಕಾಧಿಕಾರಿ ಸಿ.ಪಿ. ಸೌಮ್ಯಶ್ರೀ ಸಲಹೆ ನೀಡಿದರು.
ನಗರದ ತಾಪಂ ಕಚೇರಿಯ ಸಭಾಂಗಣದಲ್ಲಿ ಇಂದು ನಡೆದ ತ್ರೈಮಾಸಿಕ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಈಗಾಗಲೇ ರಾಜ್ಯದಾದ್ಯಂತ ಮಳೆ ಇಲ್ಲದೆ ಬರಗಾಲ ಹೆಚ್ಚಾಗಿದೆ. ಜೊತೆಗೆ ಕೊರೊನಾವೂ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ವಿದ್ಯುತ್ ಪೂರೈಕೆ ಸೇರಿದಂತೆ ಹಲವಾರು ಬಗೆಯಲ್ಲಿ ಸಮಸ್ಯೆಗಳು ಉಲ್ಬಣಗೊಳ್ಳುವುದು ಸಹಜ. ಎಲ್ಲಾ ಇಲಾಖೆಯ ಅಧಿಕಾರಿಗಳು ಮುತುವರ್ಜಿಯಿಂದ ಕರ್ತವ್ಯ ನಿಭಾಯಿಸುವುದು ಅವಶ್ಯವಾಗಿದೆ ಎಂದು ಹೇಳಿದರು.
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಇರುವ ಇಟ್ಟಿಗೆ ಬಟ್ಟಿಗಳಿಗೆ ವಲಸೆ ಬರುವಂತಹ ಕಾರ್ಮಿಕರಿಗೆ ಅವರ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ, ಇಟ್ಟಿಗೆ ಬಟ್ಟಿಗಳ ಸ್ಥಳದಲ್ಲಿ ತಾತ್ಕಾಲಿಕವಾಗಿ ಟೆಂಟ್ ಹಾಕಿ ಶಾಲೆಗಳನ್ನು ತೆರೆದು ಅವರಿಗೆ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಸಿಡಿಪಿಓ, ಬಿಇಓ ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳು ಮುಂದಾಗಬೇಕು ಎಂದು ಸೌಮ್ಯಶ್ರೀ ಕಿವಿಮಾತು ಹೇಳಿದರು.
ಬಿಇಓ ಹನುಮಂತಪ್ಪ ಮಾತನಾಡಿ, ಈ ಬಾರಿ ಎಸ್.ಎಸ್.ಎಲ್.ಸಿ.ಯಲ್ಲಿ 3285 ವಿದ್ಯಾರ್ಥಿ ಗಳಿಂದ ಉತ್ತಮ ಫಲಿತಾಂಶ ಬರುವ ನಿಟ್ಟಿನಲ್ಲಿ ಎಲ್ಲಾ ಬಗೆಯ ಪೂರ್ವ ತಯಾರಿ ನಡೆಸಲಾಗಿದೆ.
ಇಟ್ಟಿಗೆ ಬಟ್ಟಿಯಲ್ಲಿರುವ 34 ಕಾರ್ಮಿಕರ ಮಕ್ಕಳು ವಲಸೆ ಕಾರ್ಡನ್ನು ಪಡೆದುಕೊಂಡು ಬಂದಿದ್ದರಿಂದ ಅವರಿಗೆ ಟೆಂಟ್ ಹಾಕಿ ಸ್ಥಳದಲ್ಲೇ ಶಿಕ್ಷಣ ಕೊಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.
ಕೃಷಿ ಇಲಾಖೆಯ ನಾರನಗೌಡ ಮಾತನಾಡಿ, ತಾಲ್ಲೂಕಿನಲ್ಲಿ ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿ, ಮಳೆ ಆಶ್ರಿತ ಪ್ರದೇಶದಲ್ಲಿ ಸುಮಾರು 6127 ಹೆಕ್ಟೇರ್ ಮೆಕ್ಕೆಜೋಳ, ಅಲಸಂದಿ, ಜೋಳ, ಸೋಯಾಬಿನ್, ತೊಗರಿ ಬೆಳೆಗಳಿಗೆ ಹಾನಿಯಾಗಿದ್ದು, ತಾಲ್ಲೂಕಿನಲ್ಲಿ ಜಂಟಿ ಸರ್ವೇ ಮಾಡಿ 5 ಕೋಟಿ ರೂಪಾಯಿ ಬೆಳೆ ಹಾನಿಯಾಗಿರುವ ವರದಿಯನ್ನು ಸರ್ಕಾರಕ್ಕೆ ಕಳಿಸಲಾಗಿದೆ ಎಂದು ಹೇಳಿದರು.
ಪಂಚಾಯತ್ ರಾಜ್ ಇಲಾಖೆಯ ಗಿರೀಶ್ ಮಾತನಾಡಿ, ತಾಲ್ಲೂಕಿನ ಬೆಳ್ಳೂಡಿ ಮತ್ತು ರಾಮತೀರ್ಥ ಗ್ರಾಮದ ಮಧ್ಯೆ ಹಲವಾರು ಹಳ್ಳಿಗೆ ಸಂಪರ್ಕವನ್ನು ಹೊಂದಿರುವ ಸೇತುವೆ ಶಿಥಿಲವಾಗಿದೆ. ಸರ್ಕಾರಕ್ಕೆ 5 ಕೋಟಿ ರೂ. ವೆಚ್ಚದಲ್ಲಿ ಹೊಸದಾದ ಸೇತುವೆಯ ನಿರ್ಮಾಣಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಹೇಳಿದರು.
ಆರೋಗ್ಯ ಇಲಾಖೆಯ ಡಾ. ಪ್ರಶಾಂತ್ ಮಾತನಾಡಿ. ಕೊರೊನಾ ಹಿನ್ನೆಲೆಯಲ್ಲಿ ನಮ್ಮ ಇಲಾಖೆಯ ವತಿಯಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಕಾರ್ಮಿಕ ಇಲಾಖೆಯ ಕವಿತಾ ಮಾತನಾಡಿ, ನಗರ ಸೇರಿದಂತೆ ತಾಲ್ಲೂಕಿನಲ್ಲಿ 535 ನಕಲಿ ಕಟ್ಟಡ ಕಾರ್ಮಿಕ ಕಾರ್ಡ್ ಗಳನ್ನು ಹೊಂದಿದವರನ್ನು ಪತ್ತೆ ಮಾಡಲಾಗಿದೆ. ಅಂತಹ ಕಾರ್ಡನ್ನು ಹೊಂದಿದವರಿಗೆ ಸರ್ಕಾರದ ಯಾವುದೇ ಸೌಲಭ್ಯಗಳನ್ನು ಕೊಡಲಾಗುವುದಿಲ್ಲ ಎಂದು ಹೇಳಿದರು.
ತಾಪಂ ಇಓ ರಮೇಶ್ ಸುಲ್ಪಿ, ಸಿಡಿಪಿಓ ಇಲಾಖೆ ಪೂರ್ಣಿಮಾ, ತಾಪಂ ಲೆಕ್ಕಾಧಿಕಾರಿ ಲಿಂಗರಾಜ್, ಬಿಸಿಎಂ ಇಲಾಖೆ ಆಸ್ಮಾಭಾನು, ತೋಟಗಾರಿಕೆ ಇಲಾಖೆ ಸಿದ್ದಪ್ಪ, ಅರಣ್ಯ ಇಲಾಖೆ ಅಮೃತ, ತಾಪಂ ಇಲಾಖೆ ಸ್ವಪ್ನ, ಶೋಭಾ, ನಾಗರಾಜ್ ವಿದ್ಯುತ್ ಇಲಾಖೆ ಮಹಾವೀರ, ಶಾಸಕರ ಆಪ್ತ ಸಹಾಯಕ ಶಿವಶಂಕರ್ ಚಿಕ್ಕಬಿದರಿ, ವಿನಾಯಕ ಆರಾಧ್ಯಮಠ ಹಾಗು ಇತರರು ಹಾಜರಿದ್ದರು.

error: Content is protected !!