ಹರಿಹರ ತಾಲ್ಲೂಕಿನಲ್ಲಿ 147 ತಂಡಗಳಿಂದ ಕುಷ್ಠರೋಗ ಸಮೀಕ್ಷೆ

ಹರಿಹರ ತಾಲ್ಲೂಕಿನಲ್ಲಿ 147 ತಂಡಗಳಿಂದ ಕುಷ್ಠರೋಗ ಸಮೀಕ್ಷೆ

ಮಲೇಬೆನ್ನೂರು, ಡಿ.27- ಹರಿಹರ ತಾಲ್ಲೂಕಿನಲ್ಲಿ ಬುಧವಾರದಿಂದ 147 ತಂಡಗಳಿಂದ ಕುಷ್ಠ ರೋಗ ಸಮೀಕ್ಷೆ ಪ್ರಾರಂಭಿಸಿದ್ದು, ಎಲ್ಲಾ ಕಡೆಗಳಲ್ಲಿ ಸಮೀಕ್ಷೆ ನಡೆಯುತ್ತಿದೆ ಎಂದು ಟಿಹೆಚ್ಓ ಡಾ.ಪ್ರಶಾಂತ್ ತಿಳಿಸಿದರು.
ಭಾನುವಳ್ಳಿ, ಕಮಲಾಪುರ, ಹೊಳೆಸಿರಿಗೆರೆ ಗ್ರಾಮಗಳಿಗೆ ಭೇಟಿ ನೀಡಿ ಮೇಲ್ವಿಚಾರಣೆ ನಡೆಸಿದ ನಂತರ ಅವರು ಮಾತನಾಡಿದರು.
ಸಮೀಕ್ಷಾ ತಂಡದಲ್ಲಿ ಮಹಿಳೆಯರಿಗೆ ಆಶಾ ಕಾರ್ಯಕರ್ತೆಯರು ಮತ್ತು ಗಂಡು ಮಕ್ಕಳಿಗೆ ಪುರುಷ ಸ್ವಯಂ ಸೇವಕರು ಎಂದು ಆಯ್ಕೆ ಮಾಡಿಕೊಂಡು, ಒಟ್ಟು 294 ಜನರು ಸಮೀಕ್ಷೆ ಮಾಡುತ್ತಿದ್ದಾರೆ. ಈ ರೋಗವು ಮೈಕ್ರೋಬ್ಯಾಕ್ಟೀರಿಯಂ ಲೆಪ್ರೆ ಎಂಬ ರೋಗಾಣುವಿನಿಂದ ಹರಡುತ್ತದೆ. ಇದೊಂದು ಸಾಂಕ್ರಾಮಿಕ ರೋಗವಾಗಿದ್ದು, ಈ ರೋಗವು ಯಾವ ಶಾಪ ಮತ್ತು ಪಾಪದಿಂದ ಬರುವುದಿಲ್ಲ ಎಂದು ಸ್ಪಷ್ಟ ಪಡಿಸಿದರು. ಇದು ಪುರಾತನ ಕಾಯಿಲೆಯಾಗಿದ್ದು, ಚರ್ಮ ಮತ್ತು ನರಗಳಿಗೆ ಸಂಬಂಧಿಸಿದೆ.
ಈ ರೋಗವು ಗಾಳಿಯ ಮೂಲಕ ಹರಡುತ್ತದೆ. ಈ ರೋಗವು ಒಬ್ಬರಿಂದ ಇನ್ನೊಬ್ಬರಿಗೆ ಹರಡಲು 5 ರಿಂದ 10 ವರ್ಷಗಳೇ ಬೇಕಾಗುತ್ತದೆ. ಆದ್ದರಿಂದ ಹಗಲು ಬೆಳಕಿನಲ್ಲಿ ಪರೀಕ್ಷಿಸಿ ಮತ್ತು ಗುರುತುಗಳು ಇವೆ ಎಂದು ನೋಡಿ, ದೇಹದ ಯಾವುದೇ ಭಾಗದಲ್ಲಿ ತಿಳಿಬಿಳಿ ತಾಮ್ರ ವರ್ಣದ ಮಚ್ಚೆ ಹಾಗೂ ಮಚ್ಚೆಗಳ ಮೇಲೆ ಸ್ಪರ್ಶ ಜ್ಞಾನ ಇರುವುದಿಲ್ಲ ಎಂದು ಡಾ. ಪ್ರಶಾಂತ್ ತಿಳಿಸಿದರು.
ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಉಮ್ಮಣ್ಣ ಮಾತ ನಾಡಿ, ಜೆಎನ್ 1 ಕೊರೊನಾ ಉಪತಳಿ ಪ್ರಾರಂಭವಾಗಿರುವುದರಿಂದ ಹೊರಗಡೆ ಹೋದಾಗ ಎಲ್ಲರೂ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಯಾರು ಭಯಪಡುವಂತಿಲ್ಲ ಎಂದರು.
ಐ.ಹೆಚ್.ಓ ನಂದಿನಿ, ಪಿ.ಸಿ.ಹೆಚ್.ಓ ಉಷಾ ಮತ್ತು ಇತರರು ಈ ವೇಳೆ ಉಪಸ್ಥಿತರಿದ್ದರು.

error: Content is protected !!