ಮಲೇಬೆನ್ನೂರು, ಡಿ. 25 – ಹಿಂಡಸಘಟ್ಟ ಗ್ರಾಮದ ಶ್ರೀ ಸಿದ್ದೇಶ್ವರ ಸ್ವಾಮಿಯ ಕಾರ್ತಿಕೋತ್ಸವದ ಅಂಗವಾಗಿ ಶನಿವಾರ ರಾತ್ರಿ ಶ್ರೀ ಸಿದ್ದೇಶ್ವರ ಹಾಗೂ ಕೊಕ್ಕನೂರು ಶ್ರೀ ಆಂಜನೇಯ ಸ್ವಾಮಿಯ ತೆಪ್ಪೋತ್ಸವವು ಗ್ರಾಮದ ಐತಿಹಾಸಿಕ ಪುಷ್ಕರಣೆಯಲ್ಲಿ ಅಪಾರ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.
ಕೊಕ್ಕನೂರಿನ ಶ್ರೀ ಆಂಜನೇಯ ಸ್ವಾಮಿ ಉತ್ಸವ ಮೂರ್ತಿಯನ್ನು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಕರೆ ತಂದು ಶ್ರೀ ಸಿದ್ದೇಶ್ವರ ಸ್ವಾಮಿಯ ಸಮ್ಮುಖದಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.
ನಂತರ ದೇವಸ್ಥಾನದ ಬಳಿ ಭಕ್ತರು ದೀಪಗಳನ್ನು ಹಚ್ಚಿ ಕಾರ್ತಿಕೋತ್ಸವವನ್ನು ಆಚರಿಸಿದರು. ಬಳಿಕ ಕೊಕ್ಕನೂರು ಶ್ರೀ ಆಂಜನೇಯ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿಯ ಉತ್ಸವ ಮೂರ್ತಿಗಳನ್ನು ಮೆರವಣಿಗೆ ಮೂಲಕ ಪುಷ್ಕರಣಿಗೆ ತರಲಾಯಿತು. ಈ ವೇಳೆ ಭಕ್ತರು ರಸ್ತೆಯುದ್ದಕ್ಕೂ ರಸ್ತೆ ಅಕ್ಕ-ಪಕ್ಕದಲ್ಲಿ ದೀಪಗಳನ್ನು ಹಚ್ಚಿ ಮೆರವಣಿಗೆಗೆ ಬೆಳಕು ಚೆಲ್ಲಿದರು. ತೆಪ್ಪದಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾ ಪಿಸಿದ ಬಳಿಕ ನಂದಿಗುಡಿ ಬೃಹ ನ್ಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ಉತ್ಸವ ಮೂರ್ತಿಗಳಿಗೆ ಪೂಜೆ ಸಲ್ಲಿಸಿ, ತೆಪ್ಪದಲ್ಲಿ ಕುಳಿತು ತೆಪ್ಪೋತ್ಸವಕ್ಕೆ ಚಾಲನೆ ನೀಡಿದರು.
ಈ ವೇಳೆ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿ ಸುವಂತೆ ಪ್ರಾರ್ಥಿಸಿ, ಅಡಿಕೆ ಹಾಳೆಯಲ್ಲಿ ತಯಾರಿಸಿದ ದೀಪಗಳನ್ನು ಹಚ್ಚಿ ಪುಷ್ಕರಣೆಯಲ್ಲಿ ತೇಲಿಬಿಟ್ಟರು.
ಭಕ್ತರು ತೇಲಿಬಿಟ್ಟ ದೀಪಗಳು ನಕ್ಷತ್ರಗಳಂತೆ ಗೋಚರಿಸಿ, ಎಲ್ಲರ ಗಮನ ಸೆಳೆದವು. ಪಟಾಕಿ ಸಿಡಿತ ಮುಗಿಲು ಮುಟ್ಟಿತು.