ಹೊನ್ನಾಳಿಯಲ್ಲಿನ ಕನಕ ಜಯಂತ್ಯೋತ್ಸವದಲ್ಲಿ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಕರೆ
ಹೊನ್ನಾಳಿ, ಡಿ.25- ಕುರುಬ ಸಮಾಜ ಅಭಿವೃದ್ಧಿ ಕಾಣಬೇಕಾದರೆ ಮೊದಲು ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಮೌಢ್ಯದಿಂದ ಕೂಡಿದ ಹಬ್ಬಗಳ ಆಚರಣೆಯಿಂದ ದೂರವಿರಬೇಕು. ಪ್ರತಿ ಯೊಬ್ಬರೂ ಸ್ವಪ್ರತಿಷ್ಠೆ ತೊರೆದು ಸಂಘಟಿತರಾಗಬೇಕು ಎಂದು ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಕಿವಿಮಾತು ಹೇಳಿದರು.
ಪಟ್ಟಣದ ಕನಕ ರಂಗಮಂದಿರದ ಆವರಣದಲ್ಲಿ ಸೋಮವಾರ ಅವಳಿ ತಾಲ್ಲೂಕುಗಳ ಕುರುಬ ಸಮಾಜದ ವತಿಯಿಂದ ಇಂದು ಆಯೋಜಿಸಲಾಗಿದ್ದ ದಾಸ ಶ್ರೇಷ್ಠ ಕನಕದಾಸರ 536ನೇ ಜಯಂತ್ಯೋತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಬಾಯಿ ಚಪಲ ತೀರಿಸುವ ಹಬ್ಬಗಳಿಗೆ ಬ್ರೇಕ್ ಹಾಕಬೇಕು. ಸಾಲ ಮಾಡಿ ಹಬ್ಬ ಆಚರಣೆಗಳನ್ನು ಮಾಡಬಾರದು. ಇದರಿಂದ ಸಮಾಜದ ಕುಟುಂಬಗಳು ಆರ್ಥಿಕವಾಗಿ ಹಿಂದುಳಿಯುವುದು ತಪ್ಪುತ್ತದೆ ಎಂದ ಅವರು, ಇಂತಹ ಅದ್ಧೂರಿ ಖರ್ಚುಗಳ ಹಬ್ಬಗಳ ಆಚರಣೆ ಕೈಬಿಟ್ಟು ಇದೇ ಹಣವನ್ನು ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡಿದ್ದೇ ಆದಲ್ಲಿ ಇಡೀ ಸಮಾಜ ಉನ್ನತ ಸ್ಥಿತಿಗೆ ತಲುಪುವಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.
ಮಾಜಿ ಸಚಿವ ಎಚ್.ಎಂ. ರೇವಣ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, `ಹಿಂಡನ್ನಗಲಿದ ಗೋವು ಹುಲಿಗೆ ಮೇವು’ ಎನ್ನುವ ಸ್ಥಿತಿಗೆ ಹೊನ್ನಾಳಿ ಕುರುಬ ಸಮಾಜದ ಪರಿಸ್ಥಿತಿಯಾಗಿದೆ. ಒಗ್ಗಟ್ಟು ತೋರಿಸದಿದ್ದರೆ ಇದರ ಲಾಭವನ್ನು ಇತರರು ಪಡೆದು ತಮ್ಮ ಬೇಳೆ ಬೇಯಿಸಿ ಕೊಳ್ಳುತ್ತಾರೆ ಎಂದು ಎಚ್ಚರಿಸಿದರು.
ರಾಷ್ಟ್ರದ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಗುರುತಿಸಿಕೊಳ್ಳುತ್ತಿರುವ ಕುರುಬ ಸಮಾಜ ಸರಿಸುಮಾರು 12 ಕೋಟಿಗೂ ಅಧಿಕ ಸಂಖ್ಯೆಯಲ್ಲಿದೆ ಎಂದು ಹೇಳಿದರು.
ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಸಮಾಜದ ಮುಖಂಡ ಎಚ್.ಬಿ.ಮಂಜಪ್ಪ ಮಾತನಾಡಿ, ಕನಕ ಜಯಂತಿಯ ಉದ್ಧೇಶ ಸಮಾಜದ ಸಂಘಟನೆಗಾಗಿ ಮಾಡಲಾಗು ತ್ತಿದೆ. ಇದಕ್ಕೆ ಸಮಾಜದ ಪ್ರತಿಯೊಬ್ಬರೂ ಭಿನ್ನಾಭಿಪ್ರಾಯಗಳನ್ನು ಮರೆತು ಒಂದು ಗೂಡಿ ಸಮಾಜದ ಅಭಿವೃದ್ಧಿಗಾಗಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ಶಾಸಕ ಡಿ.ಜಿ.ಶಾಂತನಗೌಡ, ಮಾಜಿ ಶಾಸಕರುಗಳಾದ ಎಂ.ಪಿ.ರೇಣುಕಾಚಾರ್ಯ, ಡಾ. ಡಿ.ಬಿ.ಗಂಗಪ್ಪ ಅವರು ಮಾತನಾಡಿ, ನಿವೇಶನದ ಬಗ್ಗೆ ನಾವು ಪ್ರಾಮಾಣಿಕ ಪ್ರಯತ್ನ ಮಾಡಿದ್ದು, ಕೆಲ ತಾಂತ್ರಿಕ ಕಾರಣಗಳಿಂದಾಗಿ ವಿಳಂಬವಾಗಿದೆ ಎಂದು ಹೇಳಿದರು.
ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಶ್ರೀದೇವಿ ಧರ್ಮಪ್ಪ ಸೇರಿದಂತೆ, ಹಲವು ಮುಖಂಡರು ಮಾತನಾಡಿದರು.
ಸಮಾರಂಭದಲ್ಲಿ ಅವಳಿ ತಾಲ್ಲೂಕುಗಳ ಸಮಾಜದ ಅಧ್ಯಕ್ಷ ಎಂ.ಸಿ. ಮೋಹನ್, ಎಂ.ಆರ್.ಮಹೇಶ್, ಧರ್ಮಪ್ಪ, ಎಚ್.ಬಿ.ಗಿಡ್ಡಪ್ಪ, ಎಚ್.ಬಿ. ಅಣ್ಣಪ್ಪ, ಎಚ್.ಎ. ರಾಜಪ್ಪ, ತೆಂಗಿನಮರದ ಮಾದಪ್ಪ, ಸಮಾಜದ ಗೌರವಾಧ್ಯಕ್ಷ ಪ್ರಕಾಶ್ ಆರುಂಡಿ, ಎಚ್.ಎ.ನರಸಿಂಹಪ್ಪ ಸೇರಿದಂತೆ ಹಲವಾರು ಜನ ಮುಖಂಡರು ಇದ್ದರು.
ಎನ್.ಆಂಜನೇಯ ಸ್ವಾಗತಿಸಿದರು. ದೊಂಕತ್ತಿ ನಾಗರಾಜ್ ನಿರೂಪಿಸಿದರು. ಮುಖಂಡ ಎಂ.ಆರ್.ಮಹೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.