ಶಿಕ್ಷಣ ಸಮಾಜದ ಕೀಲಿ ಕೈ

ಶಿಕ್ಷಣ ಸಮಾಜದ ಕೀಲಿ ಕೈ

ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಲಿಂಗರಾಜ್ ಸಲಹೆ

ದಾವಣಗೆರೆ, ಡಿ. 25-  ಶಿಕ್ಷಣ ಎಂಬುದು ಸಮಾಜದ ಕೀಲಿ ಕೈ ಆಗಿದ್ದು, ಎಲ್ಲಾ ಸ್ತರಗಳಲ್ಲೂ ಶಿಕ್ಷಣಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಬೇಕು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಹೆಚ್.ಕೆ. ಲಿಂಗರಾಜ್ ಸಲಹೆ ನೀಡಿದರು.

ಬಿಇಎಹೆಚ್‌ಎಸ್ ಅಲ್ಯುಮ್ನಿ ಟ್ರಸ್ಟ್  ಇವರ ವತಿಯಿಂದ ಶಾಮನೂರಿನ ಜನತಾ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನವೀಕೃತ ಶಾಲೆಯ ಉದ್ಘಾಟನೆ ಹಾಗೂ ಪೀಠೋಪಕರಣ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ಕಂಪ್ಯೂಟರ್ ಸೌಲಭ್ಯವಿರುವ ಸರ್ಕಾರಿ ಶಾಲೆಗಳಿಗೆ ಶಿಕ್ಷಕರನ್ನು ಸ್ವಯಂ ಸೇವಕರಾಗಿ ನೇಮಕ ಮಾಡಿಕೊಂಡು ಮಕ್ಕಳಿಗೆ ತಾಂತ್ರಿಕ ಶಿಕ್ಷಣ ಸೌಲಭ್ಯವು ದೊರೆಯುವಂತೆ ಮಾಡಬೇಕೆಂದು ಕರೆ ನೀಡಿದರು.

ಡಿಡಿಪಿಐ ಜಿ. ಕೊಟ್ರೇಶ್ ಮಾತನಾಡಿ, ಬಾಪೂಜಿ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳ ಸೇನೆ ಯುವ ಪೀಳಿಗೆಗೆ ಸ್ಫೂರ್ತಿ ಎಂದರು. ದತ್ತು ಯೋಜನೆಯಲ್ಲಿ ಸರ್ಕಾರಿ ಶಾಲೆಗಳನ್ನು ಬಲವರ್ಧನೆಗಳಿಸುವ ಕುರಿತು ಮಾಹಿತಿ ನೀಡಿದರು.

ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಪುಷ್ಪಲತಾ ಅವರು, ಕರಡಿ ಕುಣಿತ ಪದ್ಯದ ಮೂಲಕ ಪರೋಪಕಾರದ ಅರ್ಥ ತಿಳಿಸಿ, ಪ್ರಾಣಿಗಳಲ್ಲಿ ಮನುಷ್ಯ ಅತಿ ಬುದ್ಧಿವಂತ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ನಿವೃತ್ತ  ಮುಖ್ಯೋಪಾಧ್ಯಾಯ ಕೆ. ಇಮಾಂ ಮಾತನಾಡಿ, ಸೌಲಭ್ಯ ವಂಚಿತ ಶಾಲೆಗಳನ್ನು ಗುರುತಿಸಿ ಶಾಲೆಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ, ಬಾಪೂಜಿ ವಿದ್ಯಾಸಂಸ್ಥೆಯ ಕೀರ್ತಿ ಪತಾಕೆಯನ್ನು ಎಲ್ಲೆಡೆ ಹರಡುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಶಾಲಾ ನವೀಕರಣ ಮತ್ತು ಪುನಶ್ಚೇತನ ಕಾರ್ಯಕ್ರಮ ಕುರಿತು ಎಂ. ರಾಜೇಶ್ವರಿ ಅನಿಸಿಕೆ ವ್ಯಕ್ತಪಡಿಸಿದರು. 

ಕಾರ್ಯಕ್ರಮದಲ್ಲಿ ಟ್ರಸ್ಟ್ ಪದಾಧಿಕಾರಿಗಳಾದ ಡಿ.ಎಸ್. ಹೇಮಂತ್, ಸಂಜಯ್ ಆರ್. ರೇವಣಕರ್ ಮತ್ತಿತರರು ಉಪಸ್ಥಿತರಿದ್ದರು. 

ಪರಿಣಿತ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪ್ರಭಾರಿ ಮುಖ್ಯ ಶಿಕ್ಷಕಿ ಸುಮಾರಾಣಿ ಸ್ವಾಗತಿಸಿದರು. ಮಾಜಿ ಮೇಯರ್, ಬಿಇಎಹೆಚ್ಎಸ್ ಅಲ್ಯುಮ್ನಿ ಟ್ರಸ್ಟ್ ಅಧ್ಯಕ್ಷ ಎಸ್.ಟಿ. ವೀರೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಪಿ.ಜೆ. ರಾಜಕುಮಾರ್ ವಂದಿಸಿದರು.  ವಿ. ಮಮತಾ ನಿರೂಪಿಸಿದರು.

error: Content is protected !!