ಕುಂಬಳೂರು ಬಸವ ಗುರುಕುಲ ಸಂಸ್ಥೆ ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ಶ್ರೀಗಳು
ಮಲೇಬೆನ್ನೂರು, ಡಿ.25- ಮಕ್ಕಳಲ್ಲಿ ಬೌದ್ಧಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಗೆ ಪೂರಕವಾದ ವಾತಾವರಣ ಶಾಲೆಗಳಲ್ಲಿ ಇರಬೇಕೆಂದು ಸಾಣೇಹಳ್ಳಿ ಮಠದ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು, ಸೋಮವಾರ ಕುಂಬಳೂರು ಗ್ರಾಮದಲ್ಲಿ ತರಳಬಾಳು ವಿದ್ಯಾಸಂಸ್ಥೆ ಹಾಗೂ ಶ್ರೀ ಬಸವ ಗುರುಕುಲ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ಶರಣ ಬಿ.ಪುಟ್ಟಣ ಹಿರಿಯ ಪ್ರಾಥಮಿಕ ಶಾಲೆ, ಶ್ರೀ ಶರಣ ಸಂಗಮ ಪ್ರೌಢಶಾಲೆ, ಶ್ರೀ ಬಸವ ಗುರುಕುಲ ಆಂಗ್ಲ ಮಾಧ್ಯಮ ನರ್ಸರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಾಲಾ ವಾರ್ಷಿಕೋತ್ಸವ ಮತ್ತು ಸದ್ಭಾವನಾ ಚಿಂತನಾಗೋಷ್ಠಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಬಹಳ ದುಡ್ಡು ಕೊಟ್ಟು ಹೈಟೆಕ್ ಶಾಲೆಗಳಲ್ಲಿ ಕಳುಹಿಸಿದರೆ ನಮ್ಮ ಮಕ್ಕಳು ಒಳ್ಳೆಯ ವಿದ್ಯೆ ಕಲಿಯುತ್ತಾರೆಂಬ ನಂಬಿಕೆ ಪೋಷಕರಲ್ಲಿದೆ. ಆದರೆ, ದೊಡ್ಡ ಕಟ್ಟಡ, ದೊಡ್ಡ ಮೈದಾನಕ್ಕಿಂತ ಆ ಶಾಲೆಯಲ್ಲಿ ಗುರು-ಶಿಷ್ಯರ ಬಾಂಧವ್ಯ ಹೇಗಿದೆ ? ಮತ್ತು ಮಕ್ಕಳಿಗೆ ಶಿಕ್ಷಕರು ಏನನ್ನು ಕಲಿಸುತ್ತಾರೆಂಬುದು ಬಹಳ ಮುಖ್ಯವಾಗಿದೆ.
ಪಠ್ಯದ ಜೊತೆಗೆ ಪಠ್ಯೇತರ ವಿಷಯಗಳನ್ನು ಮಕ್ಕಳಿಗೆ ಕಲಿಸಬೇಕು. ಶರಣರ ವಚನಗಳನ್ನು ಈಗಿನಿಂದಲೇ ಹೇಳಿಕೊಡಬೇಕು. ಆಗ ಮಕ್ಕಳು ಭಾಷೆಯಲ್ಲಿನ ಸತ್ವವನ್ನು ಅರಗಿಸಿಕೊಳ್ಳುತ್ತಾರೆ.
ಇಂಗ್ಲಿಷ್ ಅನ್ನು ಪರಭಾಷೆ ಎಂದು ತಿಳಿದುಕೊಳ್ಳಬೇಡಿ. ಕನ್ನಡದ ಜೊತೆಗೆ ಇಂಗ್ಲಿಷ್, ಹಿಂದಿ ಕೂಡಾ ಪ್ರಸ್ತುತ ಬಹಳ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಶಿಕ್ಷಕರೂ ಚೆನ್ನಾಗಿ ಓದಬೇಕು. ಬೇರೆ ಬೇರೆ ವಿಷಯಗಳನ್ನು ಮಕ್ಕಳಿಗೆ ಅರ್ಥವಾಗುವ ರೀತಿ ಸರಳವಾಗಿ ಹೇಳಿಕೊಡಬೇಕೆಂದು ಶ್ರೀಗಳು ಹೇಳಿದರು.
ನಮ್ಮ ಧರ್ಮದ ಗುರು ಬಸವಣ್ಣ ಎಂದು ಪ್ರತಿಯೊಬ್ಬರೂ ಹೇಳಬೇಕು. ಏಕೆಂದರೆ ಬಸವಣ್ಣನೇ ನಮ್ಮ ಬದುಕಿಗೆ ಚೈತ್ಯನ್ಯ ನೀಡಿ ಬೆಳಕಿನ ಕಡೆಗೆ ಕರೆದ್ಯೊಯ್ದಿದ್ದಾರೆ. ನಮ್ಮ ದೇಶಕ್ಕೆ ಸಂವಿಧಾನ ಎಷ್ಟೋ ಮುಖ್ಯವೋ, ನಮ್ಮ ಬದುಕಿಗೆ ಬಸವಣ್ಣನವರ ವಚನಗಳು ಅಷ್ಟೇ ಮುಖ್ಯವಾಗಿವೆ. ಇದನ್ನೇ ಮಕ್ಕಳು ಈ ವೇದಿಕೆಯಲ್ಲಿ ವಚನಗಳ ಭಾವಕ್ಕೆ ಪೂರಕವಾಗಿ ನೃತ್ಯ ಮಾಡಿ, ನಿಮ್ಮ ಗಮನ ಸೆಳೆದರೆಂದು ಹೇಳಿದರು.
ಬಸವ ಗುರುಕುಲ ವಿದ್ಯಾಸಂಸ್ಥೆ ಉಪಾಧ್ಯಕ್ಷ ಕೆ.ತೀರ್ಥಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಹಳೇ ಮನೆ ಶಂಭುಲಿಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಾಸಕ ಬಿ.ಪಿ.ಹರೀಶ್ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದರು. ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಉಮಾದೇವಿ ಎಂ.ಹೆಚ್.ಶಿವರಾಮಚಂದ್ರಪ್ಪ, ಉಪಾಧ್ಯಕ್ಷ ಎನ್.ಜಿ.ಕಲ್ಲೇಶ್, ವಿದ್ಯಾಸಂಸ್ಥೆಯ ಖಜಾಂಚಿ ಬಿ.ಎಂ.ಹನುಮಂತಪ್ಪ, ಸದಸ್ಯರಾದ ಎಸ್.ಜಿ.ನಾಗರಾಜಪ್ಪ, ಹೆಚ್.ಬಿ.ಶಿವರುದ್ರಪ್ಪ, ಡಿ.ಹೆಚ್.ರವೀಂದ್ರಪ್ಪ, ಬಿ.ಹೆಚ್.ಕಿರಣ್ಕುಮಾರ್, ವಕೀಲ ಹೆಚ್.ಬಿ.ಶಿವಕುಮಾರ್, ದಾನಿಗಳಾದ ಬಿ.ಶಂಭುಲಿಂಗಪ್ಪ, ಜಿ.ಶಂಕರಗೌಡ ಹಳೇಮನೆ ಉಮಾಪತಿ, ಎಸ್ಡಿಎಂಸಿ ಅಧ್ಯಕ್ಷರಾದ ಕೋಟ್ಯಾಳ್ ಆಂಜನೇಯ, ಕೆ.ಹೆಚ್.ನಾಗೇಂದ್ರಪ್ಪ, ಉಪಾಧ್ಯಕ್ಷರಾದ ಹಳೇಮನೆ ಚಂದ್ರಪ್ಪ, ಹಾಲಮ್ಮ ರಾಜಪ್ಪ, ಶಾಲಾ ಮುಖ್ಯ ಶಿಕ್ಷಕರಾದ ಬಸವರಾಜ್ ಬಿ.ಗುಂಡಣ್ಣನವರ್, ಕೆ.ಶಿರಸಾಚಾರ್, ಎಂ.ಸಿದ್ದಾರ್ಥ ಮತ್ತಿತರರು ಈ ವೇಳೆ ಹಾಜರಿದ್ದರು.