ಹರಪನಹಳ್ಳಿಯ ಕಾರ್ಯಕ್ರಮದಲ್ಲಿ ರಂಭಾಪುರಿ ಶ್ರೀ ವೀರಸೋಮೇಶ್ವರ ಜಗದ್ಗುರುಗಳು
ಹರಪನಹಳ್ಳಿ, ಡಿ. 24 – ಪ್ರಾಚೀನ ತತ್ವ ಸಿದ್ಧಾಂತ ಬಿಡದೇ ಸಮಾಜಕ್ಕೆ ಸ್ಪಂದಿಸಿ ಜನ ಮಾನಸಕ್ಕೆ ಸನ್ಮಾರ್ಗ ತೋರಿಸುವುದೇ ಸಾಧನೆಯ ಪರಮ ತಪಸ್ಸು. ಪ್ರಕೃತಿ ವಿಕಾಸವನ್ನು ಸೃಷ್ಟಿಸಿದರೆ ಸಂಸ್ಕಾರ ಆದರ್ಶ ವ್ಯಕ್ತಿಗಳನ್ನು ಸೃಷ್ಟಿಸುತ್ತದೆ. ಉನ್ನತವಾದ ಗುರಿ ಮತ್ತು ಧ್ಯೇಯ ವ್ಯಕ್ತಿತ್ವ ವಿಕಾಸಕ್ಕೆ ದಾರಿದೀಪ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಇಲ್ಲಿನ ತೆಗ್ಗಿನಮಠ ಸಂಸ್ಥಾನದಲ್ಲಿ ನಿನ್ನೆ ಜರುಗಿದ ಲಿಂ. ಚಂದ್ರಮೌಳೀಶ್ವರ ಶ್ರೀಗಳವರ 9ನೇ ವರ್ಷದ ಪುಣ್ಯ ಸ್ಮರಣೋತ್ಸವ ಹಾಗೂ ವರಸದ್ಯೋಜಾತ ಶ್ರೀಗಳ ಪಟ್ಟಾಧಿಕಾರದ 8ನೇ ವರ್ಷದ ವಾರ್ಷಿಕೋತ್ಸವ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಜಗದ್ಗುರುಗಳು ಆಶೀರ್ವಚನ ನೀಡಿದರು.
ಮನುಷ್ಯನಲ್ಲಿ ಅರಿವು-ಮರವು ಎರಡೂ ಇರುತ್ತವೆ. ಅರಿವನ್ನು ಜಾಗೃತಗೊಳಿಸಿಕೊಂಡು ಬಂದಾಗ ಮಾತ್ರ ಬದುಕು ಹಸನಾಗುತ್ತದೆ. ಪರಿಶ್ರಮದ ಜ್ಞಾನ ಮನುಷ್ಯನಿಗೆ ಜೀವನದಲ್ಲಿ ಉನ್ನತಿ ಸಾಧಿಸಲು ಸಾಧ್ಯವಿದೆ. ಖಾದಿ, ಖಾಕಿ ಮತ್ತು ಕಾವಿ ಜನಾಂಗವು ನಿರ್ಮಲ ಮನಸ್ಸಿನಿಂದ ಕಾಯಕ ಮಾಡಿದರೆ ಜನ ಕಲ್ಯಾಣದ ಜೊತೆಗೆ ಲೋಕ ಕಲ್ಯಾಣಾರ್ಥವಾಗುವುದು. ಜೀವನದಲ್ಲಿ ಬದಲಾವಣೆ ಮತ್ತು ಬೆಳವಣಿಗೆ ಎರಡೂ ಮುಖ್ಯ. ಯಾವುದೇ ವಿಶ್ವ ವಿದ್ಯಾಲಯ ಕಲಿಸಿಕೊಡದೇ ಇರುವ ಜ್ಞಾನವನ್ನು ಜೀವನಾನುಭವ ಮನುಷ್ಯನಿಗೆ ಕಲ್ಪಿಸಿಕೊಡುತ್ತದೆ. ಅಂತರಂಗ ಪರಿಶುದ್ಧಗೊಳಿಸುವ ಶಕ್ತಿ ಶ್ರೀ ಗುರುವಿಗೆ ಇದೆ. ಅಕ್ಷರದ ಜ್ಞಾನವು ಅಕ್ಷಯದ ಜ್ಞಾನ ದೀವಿಗೆ ಎಂದು ಹೇಳಿದರು.
ನೇತೃತ್ವ ವಹಿಸಿದ್ದ ತೆಗ್ಗಿನಮಠ ಸಂಸ್ಥಾನದ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ವ್ಯಕ್ತಿ ಜೀವನದಲ್ಲಿ ಸುವರ್ಣ ಸಂಪಾದಿಸದಿದ್ದರೂ ಚಿಂತೆಯಿಲ್ಲ. ಆದರೆ ಸದ್ಗುಣಗಳನ್ನು ಸಂಪಾದಿಸಿಕೊಂಡು ಬಾಳಬೇಕು. ಸಾಮಾಜಿಕ ಸಂಪ್ರದಾಯಗಳು ಬದಲಾಗಬಹುದು. ಆದರೆ ನೈತಿಕ ನಿಯಮಗಳು ಸಾರ್ವಕಾಲಿಕವಾಗಿ ಶಾಶ್ವತವಾಗಿರುತ್ತವೆ ಎಂದರು.
ಸಮಾರಂಭವನ್ನು ಉದ್ಘಾಟಿಸಿದ ಶಾಸಕರಾದ ಶ್ರೀಮತಿ ಲತಾ ಮಲ್ಲಿಕಾರ್ಜುನ ಮಾತನಾಡಿ, ಚಂದ್ರಶೇಖರ ಶ್ರೀಗಳವರ ಕಠಿಣ ಪರಿಶ್ರಮ ಪ್ರಯತ್ನ ಮತ್ತು ಇಂದಿನ ವರಸದ್ಯೋಜಾತ ಶ್ರೀಗಳವರ ಕ್ರಿಯಾಶೀಲ ಬದುಕು ಸಮಾಜ ಸಂವರ್ಧನೆಗೆ ಬಹು ದೊಡ್ಡ ಶಕ್ತಿಯಾಗಿದೆ ಎಂದು ಶ್ಲ್ಯಾಘಿಸಿದರು.
ತೆಗ್ಗಿನಮಠ ಸಂಸ್ಥಾನದ ಆಡಳಿತಾಧಿಕಾರಿ ಡಾ.ಟಿ.ಎಂ. ಚಂದ್ರಶೇಖರಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹಾವೇರಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಡಿ.ವೈ.ಎಸ್.ಪಿ. ವೆಂಕಟಪ್ಪ ನಾಯಕ, ಟಿ.ಎಂ. ಶಿವಕುಮಾರಸ್ವಾಮಿ, ಪಿ.ಬಿ. ಗೌಡ್ರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಮುರುಗೇಶ ಆರಾಧ್ಯ, ಡಾ.ಕೆ.ಎಂ.ಮಂಜುನಾಥ, ಸಿ.ಹೆಚ್.ಎಂ. ಗಂಗಾಧರ ವಿಶೇಷ ಆಹ್ವಾನಿತರಾಗಿದ್ದರು. ಡಾ. ಟಿ.ಎಂ. ನಟರಾಜ, ಟಿ.ಎಂ. ಚಂದ್ರಕಾಂತ, ಟಿ.ಎಂ. ಮಂಜೇಶ್ವರ ಅವರು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು.
ಎಮ್ಮಿಗನೂರು ಹಂಪಿ ಸಾವಿರದೇವರ ಮಠದ ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮಿಗಳು ಶಿಕ್ಷಣ ಧರ್ಮ ಪೀಠಗಳ ಪರಂಪರೆ ಕುರಿತು ಉಪದೇಶಾಮೃತವನ್ನಿತ್ತರು. ಕವಲೇದುರ್ಗ ಭುವನಗಿರಿ ಸಂಸ್ಥಾನದ ಮರುಳಸಿದ್ಧ ಶಿವಾಚಾರ್ಯ ಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು.
ಕೊಟ್ಟೂರು ಕಟ್ಟಿಮನಿ ಹಿರೇಮಠದ ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು ಸಮ್ಮುಖ ವಹಿಸಿದ್ದರು. ಸಿ.ಎಂ. ಕೊಟ್ರಯ್ಯ ಸ್ವಾಗತಿಸಿದರು. ಶಿಕ್ಷಕ ಎನ್. ದ್ವಾರಕೀಶರೆಡ್ಡಿ ನಿರೂಪಿಸಿದರು.