ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಭಾನುವಾರ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಅಭಿಮಾನಿ ಬಳಗದಿಂದ ಕಾರ್ ರಾಲಿ ಮೂಲಕ ಸ್ವಾಗತಿಸಿ, ಶಾಮನೂರು ರಸ್ತೆಯಲ್ಲಿ ಸನ್ಮಾನಿಸಲಾಯಿತು.
ದಾವಣಗೆರೆ, ಡಿ.24- ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಇಂದು ನಗರಕ್ಕೆ ಆಗಮಿಸಿದ ಬಿ. ವೈ.ವಿಜಯೇಂದ್ರ ಅವರಿಗೆ ಬಿಜೆಪಿ ಕಾರ್ಯಕರ್ತರು ಜೈಕಾರಗಳನ್ನು ಹಾಕಿ, ಹೂವಿನ ಸುರಿಮಳೆ ಸುರಿಸಿ, ಅದ್ಧೂರಿ ಸ್ವಾಗತ ಕೋರಿದರು.
ಬಾಪೂಜಿ ಬ್ಯಾಂಕ್ ಸಮುದಾಯ ಭವನದ ಬಳಿ ಬೃಹದಾಕಾರದ ಹೂವಿನ ಹಾರ ಹಾಕಿ, ಪಟಾಕಿ ಸಿಡಿಸಿ ವಿಜಯೇಂದ್ರ ಅವರನ್ನು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಪಕ್ಷದ ಮುಖಂಡರು ಬರಮಾಡಿಕೊಂಡರು.
ಬಾಪೂಜಿ ಎಂಬಿಎ ಕಾಲೇಜಿನ ಮೈದಾನದಲ್ಲಿ ಏರ್ಪಡಿಸಿದ್ದ ವೀರಶೈವ ಲಿಂಗಾಯತ ಮಹಾಧಿವೇಶನಕ್ಕೆ ಆಗಮಿಸಿದ ವಿಜಯೇಂದ್ರ ಅವರಿಗೆ ಜೈಕಾರಗಳು ಮೊಳಗಿದವು.
ಅಪೂರ್ವ ರೆಸಾರ್ಟ್ ಬಳಿ ಆರಂಭಗೊಂಡ ಕಾರ್ ರಾಲಿಯು ರಾಜ ಬೀದಿಗಳ ಮುಖಾಂತರ ಮಹಾ ಅಧಿವೇಶನದ ಬಳಿ ಸಮಾರೋಪಗೊಂಡಿತು.
ವಿಜಯೇಂದ್ರ ಮಾತನಾಡಿ, ನಿಮ್ಮ ಪ್ರೀತಿ, ವಿಶ್ವಾಸಕ್ಕೆ ಎಂದೆಂದಿಗೂ ಚಿರಋಣಿ ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ಮತ್ತೆ ದಾವಣಗೆರೆಗೆ ಬರುತ್ತೇನೆ. ದೊಡ್ಡ ಸಮಾವೇಶ ಮಾಡೋಣ. ಲಕ್ಷಾಂತರ ಜನರನ್ನು ಸೇರಿಸೋಣ. ಕಾಂಗ್ರೆಸ್ ಅಧಿಕಾರದಿಂದ ಜನರು ಬೇಸತ್ತಿದ್ದಾರೆ. ದುರಂಹಕಾರ ಮಿತಿಮೀರಿದೆ. ಇದಕ್ಕೆ ಕಡಿವಾಣ ಹಾಕಬೇಕಿದೆ. ಪಕ್ಷದ ಕಾರ್ಯಕರ್ತರು ಯೋಧರಂತೆ ಕಾರ್ಯನಿರ್ವಹಿಸೋಣ. ನಾವು ಮನೆಯಲ್ಲಿ ಕುಳಿತುಕೊಳ್ಳದೇ, ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನಗಳನ್ನು ಗೆಲ್ಲುವವರೆಗೂ ವಿರಮಿಸುವುದು ಬೇಡ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.