ಜಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ

ಜಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ

ಸಾವಿರಾರು ವಿದ್ಯಾರ್ಥಿಗಳಿಗೆ ಉದ್ಯೋಗ : ಸಂಸದ ಜಿ.ಎಂ. ಸಿದ್ದೇಶ್ವರ

ಜಗಳೂರು, ಡಿ.24- ಯುವಕರಿಗೆ, ವಿದ್ಯೆ ಮತ್ತು ಉದ್ಯೋಗ ಎರಡೂ ಮುಖ್ಯವಾಗಿದ್ದು, ಜಿ.ಎಂ. ಟ್ರಸ್ಟ್ ವತಿಯಿಂದ ಸಾವಿರಾರು ಉದ್ಯೋಗ ಕಲ್ಪಿಸಿ ಕೊಡಲಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದರು.

ಪಟ್ಟಣದ ನಾಲಂದ ಕಾಲೇಜು ಆವರಣದಲ್ಲಿ ಜಿ. ಮಲ್ಲಿಕಾರ್ಜುನಪ್ಪ, ಹಾಲಮ್ಮ ಚಾರಿಟಿ ಫೌಂಡೇಶನ್ ಟ್ರಸ್ಟ್ ಮತ್ತು ನಲಂದ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ನಡೆದ ಉದ್ಯೋಗ ಮಹಿಳಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶಿಕ್ಷಣ, ಆರೋಗ್ಯ ಶಿಬಿರಗಳು ಮತ್ತು ಬಿಸಿಊಟ ಪೂರೈಸುವ ಯೋಜನೆ ಸೇರಿದಂತೆ ನಮ್ಮ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಲವಾರು ಸಮಾಜಮುಖಿ ಕಾರ್ಯಗಳನ್ನು ನೆರವೇರಿಸಲಾಗುತ್ತಿದೆ ಎಂದರು.

ಪ್ರಸ್ತುತ ಬರಪೀಡಿತ ಜಗಳೂರು ತಾಲ್ಲೂಕಿನಲ್ಲಿ ಕ್ಷೇತ್ರದ ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಅವರ ಮನವಿ ಮೇರೆಗೆ ಉದ್ಯೋಗ ಮೇಳವನ್ನು ಹಮ್ಮಿಕೊಂಡಿದ್ದು, ಸುಮಾರು ಮೂರು ಸಾವಿರ ನಿರುದ್ಯೋಗಿ ಯುವಕರು ನೋಂದಣಿ ಮಾಡಿಕೊಂಡಿದ್ದಾರೆ. 52 ಕಂಪನಿಗಳು ಉದ್ಯೋಗ ನೀಡಲು ಈ ಮೇಳದಲ್ಲಿ ಭಾಗವಹಿಸಿವೆ. ಸುಮಾರು 6 ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ಕಲ್ಪಿಸಿಕೊಡಲಾಗಿದ್ದು ಈ ಕ್ಷೇತ್ರದ ಸಾವಿರಾರು ಯುವಕರಿಗೆ ಉದ್ಯೋಗ ಲಭಿಸಲಿದೆ ಎಂದರು.

ಕಡಿಮೆ ವೇತನದಲ್ಲಿ ಬೆಂಗಳೂರಿನಂತಹ ನಗರದಲ್ಲಿ ಜೀವಿಸುವುದು ತುಂಬಾ ಕಷ್ಟ.  ಆದ್ದರಿಂದ ಖಾಸಗಿ ಕಂಪನಿಗಳು ನಮ್ಮ ಯುವಕರಿಗೆ ಉದ್ಯೋಗ ನೀಡುವ ಜೊತೆಗೆ ಉತ್ತಮ ವೇತನ ಹಾಗೂ ವಸತಿ ಸೌಕರ್ಯವನ್ನು ಕಲ್ಪಿಸಿ ಕೊಡಬೇಕೆಂದು ಪ್ರತಿಷ್ಠಿತ ಕಂಪನಿಗಳಿಗೆ ಮನವಿ ಮಾಡಿಕೊಂಡರು.

ಕೇಂದ್ರ ಸರ್ಕಾರದ ಅಭಿವೃದ್ಧಿಗಳನ್ನು ಬಿಂಬಿಸುವ ವಿಕಸಿತ ಸಂಕಲ್ಪ ಯಾತ್ರೆ ತಾಲ್ಲೂಕಿನಲ್ಲಿ ಸಂಚರಿಸಲಿದ್ದು ಯುವಕರು ಹೆಚ್ಚಿನ ಮಾಹಿತಿ ಪಡೆಯುವ ಮೂಲಕ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಬರಪೀಡಿತ ತಾಲ್ಲೂಕಿನ 57 ಕೆರೆ ತುಂಬಿಸುವ ಯೋಜನೆ ತುಪ್ಪದಹಳ್ಳಿಗೆ ನಿಂತು ಹೋಯಿತು. ಮುಂದಕ್ಕೆ ಬರಲೇ ಇಲ್ಲ, ಇದು ನನ್ನ ಮತ್ತು ಮಾಜಿ ಶಾಸಕ ರಾಮಚಂದ್ರ ಅವರ ದುರದೃಷ್ಟ. ಮುಂದಿನ ದಿನಗಳಲ್ಲಿ ಯೋಜನೆಯ ಪೂರ್ಣಗೊಳ್ಳುವ ವಿಶ್ವಾಸವಿದೆ. ಭದ್ರಾ ಮೇಲ್ದಂಡೆ ಯೋಜನೆಗೆ 1600 ಕೋಟಿ ಮಂಜೂರಾದರು ಹಣ ಬಿಡುಗಡೆಯಾಗಲಿಲ್ಲ. ಯೋಜನೆಗಳ ಜಾರಿಗೆ  ಪ್ರಯತ್ನ ಮುಂದುವರಿಸುತ್ತೇವೆ ಎಂದು ಸಂಸದ ಸಿದ್ದೇಶ್ವರ ತಿಳಿಸಿದರು.

ಉದ್ಯೋಗ ಮೇಳದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಶಾಸಕ ಎಸ್.ವಿ.ರಾಮಚಂದ್ರ, ನಮ್ಮ ಮನವಿಯ ಮೇರೆಗೆ ಜಿ.ಎಂ. ಟ್ರಸ್ಟ್  ಯುವಕರಿಗೆ ಮನೆ ಬಾಗಿಲಿಗೆ ಉದ್ಯೋಗ ಕಲ್ಪಿಸುವ ಅವಕಾಶವನ್ನು ಕಲ್ಪಿಸಿದ್ದು, ಇದರ ಸದುಪಯೋಗವನ್ನು ನಿರುದ್ಯೋಗಿ ಯುವಕರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಸಮಾರಂಭದಲ್ಲಿ ನಾಲಂದ ಕಾಲೇಜು ಪ್ರಾಂಶುಪಾಲ ಸಿ.ತಿಪ್ಪೇಸ್ವಾಮಿ, ಸಂಸದರ ಪುತ್ರ ಜಿ.ಎಸ್ ಅನಿತ್‌ಕುಮಾರ್‌, ಬಿಜೆಪಿ ಮಂಡಲ ಅಧ್ಯಕ್ಷ ಹೆಚ್.ಸಿ ಮಹೇಶ್, ಮಾಜಿ ಜಿ.ಪಂ. ಸದಸ್ಯರಾದ ಎಸ್. ಕೆ.ಮಂಜುನಾಥ್, ಹೆಚ್.ನಾಗರಾಜ್, ಮುಖಂಡರಾದ ಶಶಿಧರ್, ಕೃಷ್ಣಮೂರ್ತಿ, ಶಿವಕುಮಾರ್ ಸ್ವಾಮಿ, ಪುರುಶೋತ್ತಮ್, ಪ.ಪಂ. ಸದಸ್ಯರಾದ ಆರ್.ತಿಪ್ಪೇಸ್ವಾಮಿ, ನಿರ್ಮಲ ಕುಮಾರಿ, ದೇವರಾಜ್, ನವೀನ್ ಕುಮಾರ್, ಪಾಪಲಿಂಗಪ್ಪ ಮುಂತಾದವರು ಇದ್ದರು.

error: Content is protected !!