ಅಭಿವೃದ್ಧಿ ಹೊಸಪರ್ವ ಆರಂಭಿಸುವ ಆಶಯ, ಆಶೀರ್ವದಿಸಿ

ಅಭಿವೃದ್ಧಿ ಹೊಸಪರ್ವ  ಆರಂಭಿಸುವ ಆಶಯ, ಆಶೀರ್ವದಿಸಿ

ಹರಪನಹಳ್ಳಿ ತಾಲ್ಲೂಕಿನ ಕಾರ್ಯಕ್ರಮದಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಆಕ್ಷಾಂಕಿ ಜಿ.ಬಿ. ವಿನಯ್ ಕುಮಾರ್

ಹರಪನಹಳ್ಳಿ, ಡಿ. 22 – ಕ್ಷೇತ್ರದ ಕಟ್ಟಕಡೆಯ ಹಳ್ಳಿಯ ಸಹ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ ಹಾಗೂ ಔದ್ಯೋಗಿಕವಾಗಿ ಸಮಗ್ರ ಅಭಿವೃದ್ಧಿ ದೂರದೃಷ್ಟಿ ಹೊಂದಿರಬೇಕಾದ ರಾಜಕಾರಣಿ ಅಗತ್ಯತೆ ಜರೂರಿದೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಆಕ್ಷಾಂಕಿ ಜಿ.ಬಿ. ವಿನಯ್ ಕುಮಾರ್ ಆಶಿಸಿದರು.

ಜಗಳೂರು ಕ್ಷೇತ್ರದ ಚಿಕ್ಕ ಉಜ್ಜಿನಿಯಿಂದ ಆರಂಭಿಸಲಾಗಿರುವ ‘ವಿನಯ್ ಕುಮಾರ್ ನಡಿಗೆ- ಹಳ್ಳಿ ಕಡೆ’ ಪಾದಯಾತ್ರೆ ಹಾಗೂ ಗ್ರಾಮ ವಾಸ್ತವ್ಯದ ನೇತೃತ್ವ ವಹಿಸಿರುವ ವಿನಯ್ ಕುಮಾರ್ ಅವರ ಪಾದಯಾತ್ರೆ ಇಂದು ಉಚ್ಚಂಗಿದುರ್ಗ ಗ್ರಾಮ ಪ್ರವೇಶಿಸಿದ್ದು, ಗ್ರಾಮದ ಐತಿಹಾಸಿಕ ಪ್ರಸಿದ್ಧ ಉತ್ಸವಾಂಬಾದೇವಿ ಪಾದಗಟ್ಟೆಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

ಕ್ಷೇತ್ರದಲ್ಲಿ ಅಭಿವೃದ್ಧಿ ಹೊಸಪರ್ವ ಆರಂಭವಾಗ ಬೇಕಾದರೆ, ಆ ಕುರಿತು ರಾಜಕಾರಣಿ ಮೈಗೂಡಿಸಿಕೊಂಡಿರಬೇಕು. ಆದರೆ, ದುರ್ದೈವದ ಸಂಗತಿ ಎಂದರೆ, ಈ ಬಗ್ಗೆ ಕನಿಷ್ಠ ಪ್ರಾಥಮಿಕ ಜ್ಞಾನವಾದರೂ, ನಮ್ಮ ಬಹುತೇಕ ರಾಜಕಾರಣಿಗಳಿಗೆ ಇಲ್ಲದಿರುವ ಪರಿಣಾಮ, ಸ್ವಾತಂತ್ರ್ಯದ ಬಳಿಕ, ಏಳೂವರೆ ದಶಕಗಳು ಗತಿಸಿದರೂ, ನಾವು ಕನಿಷ್ಠ ಮೂಲಸೌಕರ್ಯಗಳಿಗಾಗಿ ಹಪಹಪಿಸಬೇಕಾಗಿದೆ. ಹೋರಾಟ ನಡೆಸಬೇಕಾಗದ ಅನಿವಾರ್ಯತೆ ಒಳಗಾಗಿದ್ದೇವೆ ಎಂದು  ವಿಷಾದಿಸಿದರು.

ಜಗಳೂರು ಹಾಗೂ ಹರಪನಹಳ್ಳಿ ಭಾಗದಲ್ಲಿ ತಂತ್ರಜ್ಞಾನಾಧರಿತ ಅತ್ಯುನ್ನತ ಐಐಟಿಯಂತ ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾಗಬೇಕಿದೆ. ಆ ನಿಟ್ಟಿನಲ್ಲಿ ನನ್ನ ಹೋರಾಟ ಅವಿರತವಾಗಿರುತ್ತದೆ. ಜತೆಗೆ, ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಸ್ಪಷ್ಟ ದೂರದೃಷ್ಟಿ, ರೈತಾಪಿ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳ ಸ್ಪಷ್ಟ ಪರಿಕಲ್ಪನೆ, ವಿದ್ಯಾರ್ಥಿ/ಯುವಜನ ಸಮುದಾಯದ ಆಶೋತ್ತರಗಳಿಗೆ ಸ್ಪಂದಿಸುವ ನಿಖರ ಆಲೋಚನೆ ಹಾಗೂ ಮಾರ್ಗೋಪಾಯಗಳನ್ನು ನಾನು ಹೊಂದಿದ್ದೇನೆ. ಇದಕ್ಕೆ ಹೆಚ್ಚಿನ ಬಲ ನೀಡುವ, ಅಧಿಕಾರ ದೀಕ್ಷೆಯ ಆಶೀರ್ವಾದ ನೀಡುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನನ್ನನ್ನು ಬೆಂಬಲಿಸಿ, ಧೀಕ್ಷೆ ಪಡೆದ ಕ್ಷಣದಿಂದಲೇ ಈಗ ಹೇಳಿರುವ ಎಲ್ಲಾ ಯೋಜನೆಗಳನ್ನು ತ್ವರಿತಗತಿಯಲ್ಲಿ ಜಾರಿಗೊಳಿಸಲು ಅಣಿಯಾಗುತ್ತೇನೆ ಎಂದು ವಿನಯಕುಮಾರ್ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಶೇಖರಪ್ಪ, ಸಿದ್ದಪ್ಪ, ಕೆ. ರೇವಣಪ್ಪ, ಪರುಶುರಾಮ್, ದಾನೇಶ್, ದಂಡೆಪ್ಪ, ಭೂತಪ್ಪ, ಪುಣಭಗಟ್ಟಿ ಕೆಂಚಪ್ಪ, ಹಾಲೇಶ್, ಕರಣಪ್ಪ, ಚಂದ್ರಪ್ಪ, ರೇವಣಸಿದ್ಧ ನಾಯ್ಕ್, ರಾ ಮಘಟ್ಟದ ಬಸವರಾಜ್, ಈಶ್ವರ್ ನಾಯ್ಕ್, ದ್ವಾರಕೀಶ್ ನಾಯ್ಕ್ ಹಾಗೂ ಬೆಂಬಲಿಗರು ಹಾಜರಿದ್ದರು.

error: Content is protected !!