ದಾವಣಗೆರೆ, ಡಿ.19- ತುಮಕೂರಿನ ಸಿದ್ಧಗಂಗಾ ಮಠದ ಹಿರಿಯ ವಿದ್ಯಾರ್ಥಿ ಗಳ ಮತ್ತು ಹಿತೈಷಿಗಳ ಸಂಘದ ವತಿಯಿಂದ ಪ್ರತಿವರ್ಷ ಕೊಡಮಾಡುವ `ಸಿದ್ಧಗಂಗಾ ಶ್ರೀ’ ಪ್ರಶಸ್ತಿಯನ್ನು ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ಕುಮಾರ್ರವರಿಗೆ, `ಸಿದ್ಧಗಂಗಾ ಶಿವಕುಮಾರ ಶ್ರೀ’ ಪ್ರಶಸ್ತಿಯನ್ನು ದಾವಣಗೆರೆಯ ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿ’ಸೌಜ ಮತ್ತು ಜಾನಪದ ವಿದ್ವಾಂಸ ಡಾ. ಬಿ.ಎಸ್. ಸ್ವಾಮಿ ಅವರಿಗೆ ಮಠಾಧ್ಯಕ್ಷರಾದ ಸಿದ್ಧಲಿಂಗ ಶ್ರೀಗಳು ಗೋಸಲ ಸಿದ್ಧೇಶ್ವರ ವೇದಿಕೆಯಲ್ಲಿ ಪ್ರದಾನ ಮಾಡಿದರು.
ಸನ್ಮಾನ ಸ್ವೀಕರಿಸಿದ ಜಸ್ಟಿನ್ ಡಿ’ಸೌಜರವರು `ಸಿದ್ಧಗಂಗಾ-ಸಿದ್ಧಲಿಂಗ’ ಇವೆರಡೂ ಸಂಸ್ಥೆಯ ಸಂಸ್ಥಾಪಕರಾದ ದಿ|| ಎಂ.ಎಸ್. ಶಿವಣ್ಣನವರಿಗೆ ಮಂತ್ರ ಮತ್ತು ಜಪದಂತಿದ್ದವು. ಸಾವಿರಾರು ವಿದ್ಯಾರ್ಥಿಗಳು, ನೂರಾರು ನೌಕರರಿಗೆ ಸಂಸ್ಥೆ ದಾರಿ ದೀಪವಾಗಿದೆ ಎಂದರೆ ಅದಕ್ಕೆ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಮತ್ತು ಶ್ರೀ ಸಿದ್ಧಲಿಂಗ ಸ್ವಾಮೀಜಿಯವರ ಮಾರ್ಗದರ್ಶನ, ಕೃಪಾಶೀರ್ವಾದ ಕಾರಣ. ಶ್ರೀಮಠದ ಕೀರ್ತಿಗೆ ಚ್ಯುತಿ ಬಾರದಂತೆ ದಾವಣಗೆರೆಯ ಸಂಸ್ಥೆಯನ್ನು ಮುನ್ನಡೆಸುತ್ತಿದ್ದು, ಈ ಪ್ರಶಸ್ತಿಯನ್ನು ಶಿವಣ್ಣನವರಿಗೆ ಅರ್ಪಿಸುತ್ತಿರುವುದಾಗಿ ತಿಳಿಸಿದರು.
ತುಮಕೂರಿನಲ್ಲಿ ನಿನ್ನೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಾವಣಗೆರೆಯಿಂದ ಡ್ಯಾಮ್ಸ್ನ ಅಧ್ಯಕ್ಷ ಉಮಾಪತಯ್ಯ, ಕಾರ್ಯದರ್ಶಿ ರಾಮಮೂರ್ತಿ, ಲೋಕೇಶ್ ತಾಳಿಕೋಟೆ, ಪತ್ರಕರ್ತ ವೀರಪ್ಪ ಎಂ. ಬಾವಿ ಪಾಲ್ಗೊಂಡು ಅಭಿನಂದಿಸಿದರು.