ಇನ್ಸೆಟ್ಸ್ ಐಎಎಸ್ ಸಂಸ್ಥೆ ಸಂಸ್ಥಾಪಕ ಜಿ.ಬಿ. ವಿನಯ್ ಆಶಯ
ಜಗಳೂರು, ಡಿ.19- ಗ್ರಾಮೀಣ ಪ್ರದೇಶದ ಜನರ ಬವಣೆ ಮತ್ತು ಅಭಿವೃದ್ಧಿ, ಬಡತನ, ನಿರುದ್ಯೋಗ, ಶೈಕ್ಷಣಿಕ ಪ್ರಗತಿ, ವಿಚಾರಗಳನ್ನು ಜನರೊಂದಿಗೆ ಚರ್ಚಿಸಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆಯೇ ವಿನಃ, ಯಾವುದೇ ಲಾಭಕ್ಕಲ್ಲ ಎಂದು ಇನ್‌ಸೈಟ್ಸ್ ಸಂಸ್ಥಾಪಕ ಜಿ.ಬಿ.ವಿನಯ್‍ಕುಮಾರ್ ಹೇಳಿದರು.
ತಾಲ್ಲೂಕಿನ ಚಿಕ್ಕಉಜ್ಜನಿ ಗ್ರಾಮದಲ್ಲಿ ಸೋಮ ವಾರ ವಿನಯ ಟ್ರಸ್ಟ್ ವತಿಯಿಂದ ಜನವರಿ 12ರ ವರೆಗೂ ಹಮ್ಮಿಕೊಂಡಿರುವ `ವಿನಯ ನಡೆ ಹಳ್ಳಿಯ ಕಡೆ’ ಎಂಬ ವಿನೂತನ ಪಾದಯಾತ್ರೆ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ಥಳೀಯವಾಗಿ ಹೊಸ ನಾಯಕತ್ವ ಸೃಷ್ಟಿಯಾ ದಾಗ ಮಾತ್ರ ಬದಲಾವಣೆಗೆ ನಾಂದಿ. ವ್ಯಕ್ತಿಯಾಗಿ ನೂರಾರು ಜನರಿಗೆ ಸಹಾಯ ಮಾಡಬಹುದು. ಅದೇ ಒಬ್ಬ ಜನ ಪ್ರತಿನಿಧಿಯಾದರೆ ಲಕ್ಷಾಂತರ ಜನರಿಗೆ ಧ್ವನಿಯಾಗಿ ಸಮಾಜ ಸೇವೆಯಲ್ಲಿ ತೊಡ ಗಬಹುದು. ಸರ್ಕಾರದ ಯೋಜನೆಗಳ ಸೌಲಭ್ಯ ಗಳು ಬಡ ಜನರಿಗೆ ಬೆರಳೆಣಿಕೆಯಷ್ಟು ಮಾತ್ರ ಸಿಗುತ್ತವೆ, ಬಹುಪಾಲು ಉಳ್ಳವರು, ಜನ ಪ್ರತಿನಿಧಿ ಗಳ ಆಪ್ತರ ಪಾಲಾಗುತ್ತಿರುವುದು ದುರ್ದೈವದ ಸಂಗತಿಯೆಂದು ವಿಷಾದ ವ್ಯಕ್ತಪಡಿಸಿದರು.
ವಿನೂತನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ, ನನಗೊಂದು ಶಕ್ತಿ ನೀಡಿದಲ್ಲಿ ಸಮಾಜಕ್ಕೆ ದೊಡ್ಡ ಸಂದೇಶ ರವಾನೆಯಾದರೆ ಉಳಿದ ಜನ ಪ್ರತಿನಿಧಿಗಳು ಸೌಲಭ್ಯಗಳನ್ನು ಹೊತ್ತುಕೊಂಡು ನಿಮ್ಮ ಮನೆ ಬಾಗಿಲಿಗೆ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ಕುಟುಂಬಕ್ಕೆ ಸಿಮೀತವಾಗಿರುವುದರಿಂದ ಸಮಾಜದಲ್ಲಿ ದೊಡ್ಡ ಕಂದಕ ಸೃಷ್ಟಿ: ಪ್ರಜಾಪ್ರಭುತ್ವದ ಒಳಗೆ ಕೆಲವೇ ವ್ಯಕ್ತಿಗಳು ಅವರದ್ದೇ ಪರ್ಯಾಯ ವ್ಯವಸ್ಥೆ ಸೃಷ್ಟಿಸಿಕೊಳ್ಳುತ್ತಾರೆ. ಅಧಿಕಾರ ಅವರ ಕೈಯಲ್ಲೇ ಇರಬೇಕು. ಅವರ ಮಕ್ಕಳಿಗೆ, ಅವರು ಹೇಳಿದಂತೆ ಕೇಳುವ ಜನರಿಗೋಸ್ಕರ ಇರುವ ವ್ಯವಸ್ಥೆಯಾಗಿದೆ. ಅದು ಬದಲಾವಣೆಯಾಗಬೇಕು. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಅಧಿಕಾರ, ಹಣ, ಆಸ್ತಿ, ಜನಪ್ರತಿನಿಧಿಗಳು ಅವರದೇ ಆದಂತಹ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಅವರ ಕುಟುಂಬಕ್ಕೆ ಸೀಮಿತವಾಗುತ್ತಿರುವುದು ಸಮಾಜದಲ್ಲಿ ದೊಡ್ಡ ಕಂದಕ ಸೃಷ್ಟಿಯಾಗುತ್ತದೆ. ಪ್ರಜೆಗಳಿಂದ, ಪ್ರಜೆಗಳಿಗೆ, ಪ್ರಜೆಗಳಿಗೋಸ್ಕರ ಹಂಚಿಕೆಯಾದರೆ ಮಾತ್ರ ಪ್ರಜಾಪ್ರಭುತ್ವದ ಆಶಯಗಳು ಈಡೇರುತ್ತವೆ.
ಕಾರ್ಯಕ್ರಮದಲ್ಲಿ ಮುಖಂಡರಾದ ತಾ.ಪಂ. ಮಾಜಿ ಸದಸ್ಯ ಯು.ಜಿ.ಶಿವಕುಮಾರ್, ಗ್ರಾ.ಪಂ. ಮಾಜಿ ಅಧ್ಯಕ್ಷ ಪರಮೇಶ್ವರಪ್ಪ, ಸಾಹುಕಾರ್, ಗೌರಿಪುರ ಬಿ.ಎಚ್.ನಾಗರಾಜ್, ಮರೇನಹಳ್ಳಿ ನಾಗರಾಜ್, ಕೆಳಗೋಟೆ ಭದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.