ಶ್ರೀ ಮಹಾಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರದಲ್ಲಿ ಶ್ರೀ ವೇದಬ್ರಹ್ಮ ಗೋಪಾಲ ಆಚಾರ್ ಮಣ್ಣೂರು
ದಾವಣಗೆರೆ, ಡಿ.19- ಪವಿತ್ರವಾದ ವಿಷ್ಣು ಸಹಸ್ರನಾಮವನ್ನು ಭಕ್ತಿಯಿಂದ ನಿತ್ಯವು ಪಠಿಸುವುದರಿಂದ ನಮ್ಮ ಬದುಕಿನಲ್ಲಿ ಧನ್ಯತೆಯ ಅನುಭವವಾಗುತ್ತದೆ. ಇದನ್ನು ಸ್ತೋತ್ರಗಳ ರಾಜನೆಂದು ಬಣ್ಣಿಸಲಾಗಿದೆ ಎಂದು ನಗರದ ಹಿರಿಯ ಅಧ್ಯಾತ್ಮಿಕ ಪ್ರವರ್ತಕ ಶ್ರೀ ವೇದಬ್ರಹ್ಮ ಗೋಪಾಲ ಆಚಾರ್ ಮಣ್ಣೂರು ಹೇಳಿದರು.
ನಗರದ ಆದರ್ಶ ಯೋಗ ಪ್ರತಿಷ್ಠಾನದ ಶ್ರೀ ಮಹಾಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರದಲ್ಲಿ ಇಂದು ಮುಂಜಾನೆ ಹಮ್ಮಿಕೊಳ್ಳ ಲಾಗಿದ್ದ ವಿಷ್ಣು ಸಹಸ್ರನಾಮ ಪಾರಾಯಣದ ಕಲಿಕಾ ಕಾರ್ಯಾಗಾರವನ್ನು ಜ್ಯೋತಿ ಬೆಳಗಿಸುವುದರೊಂದಿಗೆ ಚಾಲನೆ ನೀಡಿ ಅವರು ಉಪನ್ಯಾಸ ನೀಡಿದರು.
ಈ ಪಾರಾಯಣವು ಸಾತ್ವಿಕರ ಆನಂದಧಾಮವೆಂದು ಪ್ರಸಿದ್ಧವಾಗಿದೆ. ಬ್ರಹ್ಮಾಂಡವನ್ನು ವ್ಯಾಪಿಸಿರುವ ವಿಷ್ಣುವಿನ ವರ್ಣನೆ, ವಿಷ್ಣುವಿಗೆ ಸಾವಿರ ಹೆಸರು, ಸಾವಿರ ತಲೆ, ಸಾವಿರ ಸ್ಥಿತಿ, ಈತ ಜಗದಾದಿ ಪುರುಷ ಮಂಗಳಮಯನಾದ ವಿಷ್ಣುವಿನ ಸ್ತುತಿಯೇ ವಿಷ್ಣು ಸಹಸ್ರನಾಮವಾಗಿದೆ. ಇದು ದ್ವಾಪರ ಯುಗವು ಕಲಿಯುಗಕ್ಕೆ ನೀಡಿದ ಮಹತ್ತರವಾದ ಒಂದು ವರವಾಗಿದೆ. ಶರಶಯ್ಯೆಯಲ್ಲಿದ್ದ ಭೀಷ್ಮನಿಗೆ ಶ್ರೀ ಕೃಷ್ಣನು ಮಿದುಳಾಗಿ ಸ್ಮರಣೆ ನೀಡಿ, ಕಣ್ಣಾಗಿ ದೃಷ್ಟಿಯನ್ನಿತ್ತು, ಹೃದಯವಾಗಿ ಚೈತನ್ಯ ನೀಡಿದನು. ಆಗ ಭೀಷ್ಮರು ಯುದಿಷ್ಟರನಿಗೆ ವಿಷ್ಣುವಿನ ಸಹಸ್ರನಾಮಗಳ ಪಾರಾಯಣವನ್ನು ಹೇಳಿ, ಇದನ್ನು ಶ್ರದ್ಧೆ, ಭಕ್ತಿಯಿಂದ ಪಾರಾಯಣ ಮಾಡುವುದರಿಂದ ಆತ್ಮವಿಶ್ವಾಸ, ಯೋಗಕ್ಷೇಮ, ಐಶ್ವರ್ಯ, ಕೀರ್ತಿ ಲಭಿಸುತ್ತದೆ ಎಂದು ಹೇಳುತ್ತಾರೆ ಹಾಗೂ ಈ ಪಾರಾಯಣದಿಂದ ಶರೀರದಲ್ಲಿರುವ 72,000 ನಾಡಿಗಳು ಶುದ್ಧವಾಗುತ್ತವೆ. ಇದಕ್ಕೆ ಕಾಲ, ಸ್ಥಳ, ಲಿಂಗ ಭೇದವಿಲ್ಲ. ಯಾವ ಉಪಕರಣಗಳ ಅವಶ್ಯಕತೆಯಿಲ್ಲ. ಇನ್ನೊಬ್ಬರ ಸಹಾಯವಿಲ್ಲದೇ ಪಠಿಸಬಹುದು. ಇದರಿಂದ ಸರ್ವ ರೋಗಗಳ ನಿವಾರಣೆಯಾಗುತ್ತದೆ ಎಂದು ಚರಕ ಮುನಿಗಳು ಚರಕ ಸ್ಮೃತಿಯಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನು ಸಾಮೂಹಿಕವಾಗಿ ಪಾರಾಯಣ ಮಾಡುವಾಗ ಸಹಸ್ರ ನಾಮದಲ್ಲಿನ ನಾಮ ಮಂತ್ರಗಳಲ್ಲಿರುವ ತರಂಗಗಳು ಸುತ್ತಲಿನ ವಾತಾವರಣವನ್ನು ಶುದ್ಧಗೊಳಿಸುತ್ತವೆ. ಹೃದಯದಲ್ಲಿ ದೈವಿಕ ಆನಂದದ ಅನುಭವವನ್ನು ಕೊಡುತ್ತದೆ. ಮನಸ್ಸಿಗೆ ಶಾಂತಿ, ನೆಮ್ಮದಿ, ಆನಂದ ಲಭಿಸುತ್ತದೆ. ಧೈರ್ಯ, ಆತ್ಮಶಕ್ತಿ, ಸ್ಮರಣಶಕ್ತಿ, ಸ್ಪುರಣಶಕ್ತಿ, ಮೇಧಾಶಕ್ತಿಗಳು ಹೆಚ್ಚಾಗಿ ಭಯದಿಂದ ಮುಕ್ತರಾಗಬಹುದು ಎಂದು ತಿಳಿಸುತ್ತಾ, ಆರೋಗ್ಯದ ಯಶಸ್ಸು ದೊರಕಿ, ತಾಪತ್ರಗಳು ನಿವಾರಣೆಯಾಗುವವು ಎಂದು ತಿಳಿಸುತ್ತಾ, ತಮ್ಮ ಅನುಭವದಲ್ಲಿ ನಡೆದ ಒಂದು ನೈಜ ಘಟನೆಯನ್ನು ವಿವರಿಸಿದರು.
ಅನಾರೋಗ್ಯದಿಂದ ಬಳಲುತ್ತಿದ್ದವರು ಮೂರು ತಿಂಗಳ ಕಾಲ ಸತತ ಪಾರಾಯಣವನ್ನು ಮಾಡಿದ ಪರಿಣಾಮ ಶಸ್ತ್ರ ಚಿಕಿತ್ಸೆ ಇಲ್ಲದೇ ಆರೋಗ್ಯವಾಗಿ ಬದುಕುತ್ತಿದ್ದಾರೆ ಎಂದು ತಿಳಿಸಿದರು. ಶ್ರದ್ಧಾ ಭಕ್ತಿಯಿಂದ ಈ ವಿಷ್ಣು ಸಹಸ್ರನಾಮವನ್ನು ವಿಶೇಷವಾಗಿ ಭೀಷ್ಮ ಏಕಾದಶಿ, ವೈಕುಂಠ ಏಕಾದಶಿ, ಪ್ರಥಮ ಏಕಾದಶಿ ದಿನಗಳಂದು ಪಾರಾಯಣಕ್ಕೆ ಪ್ರಶಸ್ತವಾದ ದಿನಗಳಾಗಿವೆ ಎಂದು ಅವರು ತಿಳಿಸಿದರು.
ವಿಶ್ವಯೋಗ ಮಂದಿರದ ಸಂಸ್ಥಾಪಕ ಯೋಗ ಗುರು ರಾಘವೇಂದ್ರ ಗುರೂಜಿ ಸ್ವಾಗತಿಸಿದರು. ಶ್ರೀ ಗೋಪಾಲ ಆಚಾರ್ಯ ಮಣ್ಣೂರು ವಿಷ್ಣು ಸಹಸ್ರನಾಮದ ಪ್ರಾರಂಭದ ಶ್ಲೋಕಗಳನ್ನು ಹೇಳಿಕೊಟ್ಟರು.
ಈ ಪಾರಾಯಣ ಕಾರ್ಯಾಗಾರವು ಬರುವ ಗುರುವಾರ ವರೆಗೆ ಪ್ರತಿದಿನ ಬೆಳಿಗ್ಗೆ 6-15 ರಿಂದ 7 ವರೆಗೆ ನಡೆಯಲಿದೆ. ಆಸಕ್ತರು ಸದುಪಯೋಗ ಪಡೆದುಕೊಳ್ಳಬಹುದು ಎಂದು ರಾಘವೇಂದ್ರ ಗುರೂಜಿ ವಿನಂತಿಸಿದರು.