ಅಪರಾಧಗಳು ನಡೆಯದಂತೆ ಜಾಗೃತಿ ವಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ

ಅಪರಾಧಗಳು ನಡೆಯದಂತೆ ಜಾಗೃತಿ ವಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ

ತರಳಬಾಳು ಕಾಲೇಜಿನ ಕಾರ್ಯಕ್ರಮದಲ್ಲಿ ಬಡಾವಣೆ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಮಲ್ಲಮ್ಮ ಚೌಬೆ

ದಾವಣಗೆರೆ, ಡಿ. 19- ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರೂ ಅಪರಾಧಗಳು ನಡೆಯದಂತೆ ಜಾಗೃತಿ ವಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಅದರಲ್ಲೂ ವಿದ್ಯಾರ್ಥಿಗಳು ಓದುವ ದಿನಗಳಲ್ಲಿ ಅಧ್ಯಯನದಲ್ಲಿ ನಿರತರಾಗದೇ ಬಾಹ್ಯ ಚಟುವಟಿಕೆಗಳ ಮೂಲಕ, ಅಪ ರಾಧದ ಕೃತ್ಯಗಳಲ್ಲಿ ತೊಡಗಿಕೊಳ್ಳುತ್ತಿರುವುದು ದುರಂತವಾಗಿದೆ. ವಾಸ್ತವವಾಗಿ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗೆಗಿನ ಗುರಿಯನ್ನು ತಲುಪಲು ಅತೀವ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದು ನಗರದ ಬಡಾವಣೆ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಮಲ್ಲಮ್ಮ ಚೌಬೆ ತಿಳಿಸಿದರು.

ಅವರು ತರಳಬಾಳು ಜಗದ್ಗುರು ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಆಧುನಿಕ ದಿನಗಳಲ್ಲಿ ಮೊಬೈಲ್ ಬಳಕೆಯಿಂದ ಅಪರಾಧಗಳು ಹೆಚ್ಚಾಗುತ್ತಿದ್ದು, ಅದರಲ್ಲೂ ವಿದ್ಯಾರ್ಥಿಗಳು ದುಷ್ಕೃತ್ಯದಲ್ಲಿ ತೊಡಗಿ, ಅನೇಕ ಅಪರಾಧಗಳನ್ನು ಮಾಡುತ್ತಾ, ಬದುಕನ್ನು ಹಾಳು ಮಾಡಿಕೊಳ್ಳುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ಮೊಬೈಲ್‌ಗೆ ದಾಸರಾಗದೇ ಶಿಕ್ಷಕರ ಹಾಗೂ ತಂದೆ-ತಾಯಿಯ ಮಾರ್ಗದರ್ಶನದಲ್ಲಿ ನಡೆದುಕೊಂಡು ತಮ್ಮ ಗುರಿ  ತಲುಪಲು ಪ್ರಯತ್ನಿಸಬೇಕು ಎಂದು ತಿಳಿಸಿದರು. 

ಅಪರಾಧವನ್ನು ತಡೆಯುವುದು ಪೊಲೀಸರ ಕರ್ತವ್ಯ ಎಂದು ಭಾವಿಸಲಾಗಿದೆ. ಆದರೆ ಸಮಾಜದಲ್ಲಿ ಪ್ರತಿಯೊಬ್ಬರೂ ಭಾಗಿಯಾಗಿ ಅಪರಾಧಗಳು ಆಗದಂತೆ ಜಾಗೃತಿ ವಹಿಸುವುದು ಮುಖ್ಯವಾಗಿದೆ. ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ಅಪರಾಧಗಳು ಕಂಡು ಬಂದರೆ ಮತ್ತು ತಮಗೆ ಏನಾದರೂ ತೊಂದರೆ ಯಾದರೆ ತಕ್ಷಣವೇ ಪೊಲೀಸರಿಗೆ ತಿಳಿಸಿ ಅಪಾಯದಿಂದ ಪಾರಾಗಬೇಕು. ಇಂತಹ ಪರಿಸ್ಥಿತಿಯಲ್ಲಿ ಪೊಲೀಸ್ ಇಲಾಖೆಯು ಸದಾಕಾಲವೂ ತಮ್ಮ ಸೇವೆಗೆ ಸಿದ್ಧವಾಗಿದೆ ಎಂದು ಅತ್ಯುತ್ತಮವಾದ ಮಾತುಗಳನ್ನಾಡುವುದರ ಮೂಲಕ ಮಲ್ಲಮ್ಮ ಚೌಬೆ ಅರಿವು ಮೂಡಿಸಿದರು. 

ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ. ಹೆಚ್.ಎನ್. ಪ್ರದೀಪ್ ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!