ಹೊನ್ನಾಳಿ : ಆರೆಸ್ಸೆಸ್ ಅಸಂಘಟಿತ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ಎ.ಬಿ. ಹನುಮಂತಪ್ಪ ಕರೆ
ಹೊನ್ನಾಳಿ, ಡಿ.19- ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಮತ್ತು ದೇವಸ್ಥಾನದ ಉದ್ಘಾಟನಾ ಸಮಾರಂಭವನ್ನು ರಾಜ್ಯದ ಪ್ರತೀ ಗ್ರಾಮ ಮತ್ತು ಮನೆಗಳಲ್ಲಿ ಹಬ್ಬದಂತೆ ಆಚರಿಸಬೇಕೆಂದು ಆರ್.ಎಸ್.ಎಸ್. ಅಸಂಘಟಿತ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ, ಬಿಜೆಪಿ ಮಾಜಿ ತಾಲ್ಲೂಕು ಅಧ್ಯಕ್ಷ ಎ.ಬಿ.ಹನುಮಂತಪ್ಪ ಕರೆ ನೀಡಿದರು.
ಅವರು ದಾವಣಗೆರೆಯ ಆರ್.ಎಸ್.ಎಸ್.ನ ಜೈನ್ ನಿವಾಸ ಕಚೇರಿಯಿಂದ ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಟ್ರಸ್ಟ್ ವತಿಯಿಂದ ಕಳುಹಿಸಿ ಕೊಡಲಾದ ಶ್ರೀರಾಮನ ಭಾವಚಿತ್ರ, ಅಕ್ಷತೆ ಮತ್ತು ಆಮಂತ್ರಣ ಪತ್ರಿಕೆಗಳನ್ನು ಹೊನ್ನಾಳಿಗೆ ತಂದ ಸಂದರ್ಭದಲ್ಲಿ ಮಾತನಾಡಿದರು.
ಜನವರಿ 22ರಂದು ಶ್ರೀರಾಮ ಮಂದಿರ ಉದ್ಘಾಟನೆಯ ಐತಿಹಾಸಿಕ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ದೇಶಾದ್ಯಂತ ರಾಮನ ಭಕ್ತರು ಕಾತರದಿಂದ ಕಾಯುತ್ತಿದ್ದಾರೆ ಎಂದರು.
ಗೊಲ್ಲರಹಳ್ಳಿಯ ಶನೇಶ್ವರ ದೇವಸ್ಥಾನದಿಂದ ಬೈಕ್ ರಾಲಿಯ ಮೂಲಕ ದಾವಣಗೆರೆಯಿಂದ ತರಲಾಗಿದ್ದ ಶ್ರೀರಾಮನ ಭಾವಚಿತ್ರ, ಅಕ್ಷತೆ ಮತ್ತು ಆಮಂತ್ರಣ ಪತ್ರಿಕೆಗಳನ್ನು ಪಟ್ಟಣದ ಕೋಟೆಯಲ್ಲಿರುವ ಶ್ರೀರಾಮನ ಮಂದಿರದಲ್ಲಿ ಇಡಲಾಗಿದೆ. ಹೊನ್ನಾಳಿಯ ಶ್ರೀರಾಮನ ಮಂದಿರದಲ್ಲಿ ಇದೇ ದಿನಾಂಕ 26ರ ಮಂಗಳವಾರ ಶ್ರೀ ರಾಮನಿಗೆ ವಿಶೇಷ ಪೂಜೆ ನೆರವೇರಿಸಿ, ಮಧ್ಯಾಹ್ನ ಕಾರ್ಯಕ್ರಮವನ್ನು ಹಮ್ಮಿಕೊಂಡು ನಂತರ ಮಂಡಲದ ಸದಸ್ಯರಿಗೆ ತಲುಪಿಸಲಾಗುವುದು. ಜನವರಿ 1 ರಿಂದ 15 ರವರೆಗೆ ಮಂಡಲದ ಸದಸ್ಯರು ಪ್ರತೀ ಗ್ರಾಮದ ಮನೆಗಳಿಗೆ ಶ್ರೀ ರಾಮನ ಭಾವಚಿತ್ರವಿರುವ ಫೋಟೋ, ಅಕ್ಷತೆ ಮತ್ತು ಆಮಂತ್ರಣ ಪತ್ರಿಕೆಗಳನ್ನು ತಲುಪಿಸುವ ಕಾರ್ಯವನ್ನು ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಈಗಾಗಲೇ ಶ್ರೀರಾಮನ 60,000 ಭಾವಚಿತ್ರವಿರುವ ಫೋಟೋ, ಆಮಂತ್ರಣಾ ಪತ್ರಿಕೆಗಳನ್ನು ತರಲಾಗಿದೆ ಎಂದರು.
ಜನವರಿ 22 ರಂದು ಶ್ರೀರಾಮನ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನಾ ಸಂದರ್ಭದಲ್ಲಿ ಪ್ರತೀ ಗ್ರಾಮದ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಿ, ಸಿಹಿ ತಿನಿಸುಗಳನ್ನು ಹಂಚುವುದರ ಮೂಲಕ ಆಯಾ ಗ್ರಾಮಗಳಲ್ಲಿ ಹಬ್ಬದ ವಾತಾವರಣ ನಿರ್ಮಿಸಿ, ಶ್ರೀರಾಮನ ದೇವಸ್ಥಾನದ ಉದ್ಘಾಟನೆಗೆ ಸಾಕ್ಷಿಯಾಗಬೇಕೆಂದು ಮನವಿ ಮಾಡಿದರು.
ಬಿಜೆಪಿ ಮುಖಂಡ ಕೆ.ವಿ.ಚನ್ನಪ್ಪ ಮಾತನಾ ಡಿದರು. ಈ ಸಂಧರ್ಭದಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಾಂತರಾಜ್ ಪಾಟೀಲ್, ಬಿಜೆಪಿ ಹೊನ್ನಾಳಿ ಮಂಡಲದ ಮಾಜಿ ಉಪಾಧ್ಯಕ್ಷ ನೆಲಹೊನ್ನೆ ದೇವರಾಜ್, ಮಾಸಡಿ ಸಿದ್ದೇಶ್, ಬಿಜೆಪಿ ಚನ್ನೇಶ್ ಮತ್ತಿತರಿದ್ದರು.