ಹರಿಹರ : ದರ್ಗಾ ಮುಂಭಾಗದ ರಸ್ತೆ ದುರಸ್ತಿಗೆ ಆಗ್ರಹ

ಹರಿಹರ : ದರ್ಗಾ ಮುಂಭಾಗದ ರಸ್ತೆ ದುರಸ್ತಿಗೆ ಆಗ್ರಹ

ಜಯಕರ್ನಾಟಕ ಸಂಘಟನೆ ಪ್ರತಿಭಟನೆ

ಹರಿಹರ, ಡಿ.19- ನಗರದ ತುಂಗಭದ್ರಾ ನದಿ ಪಕ್ಕದ ದರ್ಗಾ ಮುಂಭಾಗದ ರಸ್ತೆಯನ್ನು ಆದಷ್ಟು ಬೇಗ ದುರಸ್ತಿಪಡಿಸುವಂತೆ ಆಗ್ರಹಿಸಿ, ಜಯಕರ್ನಾಟಕ ಸಂಘಟನೆ ಮುಖಂಡರು ತಹಶೀಲ್ದಾರ್ ಕಚೇರಿಯ ಮುಂಭಾದಲ್ಲಿ  ಇಂದು ಪ್ರತಿಭಟನೆ ನಡೆಸಿದರು. 

ಈ ವೇಳೆ ಮಾತನಾಡಿದ ತಹಶೀಲ್ದಾರ್ ಬಸವರಾಜಯ್ಯ, ತುಂಗಭದ್ರಾ ನದಿ ಪಕ್ಕದ ರಸ್ತೆಯನ್ನು ದುರಸ್ತಿಪಡಿಸವ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ಕು ಬಾರಿ ಸಭೆಯನ್ನು ಆಯೋಜಿಸಲಾಗಿದೆ. ಜೊತೆಗೆ ಸರ್ವೇ ಇಲಾಖೆಗೂ ಕೂಡ ಆದಷ್ಟು ಬೇಗ ಸರ್ವೇ ಮಾಡಿಸುವಂತೆ ಸೂಚನೆ ಕೂಡ ನೀಡಲಾಗಿದೆ ಮತ್ತು ಶಾಸಕರ ಸಮ್ಮುಖದಲ್ಲಿ ಒಂದು ಸಭೆಯನ್ನೂ ಮಾಡಲಾಗಿದೆ. ಇದರ ಮೇಲೆ ನಮ್ಮ ಇಲಾಖೆ ಯಿಂದ ಏನು ಮಾಡಲಿಕ್ಕೆ ಸಾಧ್ಯವಿಲ್ಲ. ಈ  ರಸ್ತೆ ಯನ್ನು ದುರಸ್ತಿಪಡಿಸುವ ವಿಚಾರ ನಮ್ಮ ಇಲಾಖೆಗೆ ಸಂಬಂಧಿಸಿದ್ದಲ್ಲ. ರಸ್ತೆಯನ್ನು ದುರಸ್ತಿಪಡಿಸಲು ಈಗಾಗಲೇ ಸರ್ಕಾರ ಲೋಕೋಪಯೋಗಿ ಇಲಾಖೆಗೆ ಎರಡು ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದ್ದರಿಂದ, ಅಧಿಕಾರಿಗಳು ಅದರ ಬಗ್ಗೆ ಹೆಚ್ಚು ಗಮನ ಹರಿಸಿ, ಆದಷ್ಟು ಬೇಗನೆ ರಸ್ತೆಯ ಕಾಮಗಾರಿ ಮಾಡಿಸಬೇಕು. ಅವರು ಮಾಡುತ್ತಿರುವ ವಿಳಂಬದಿಂದ ನಮ್ಮ ಕಚೇರಿಯ ಮುಂದೆ ಕುಳಿತುಕೊಂಡು ಪ್ರತಿಭಟನೆ ಮಾಡುವುದು ಸರಿಯಾದ ಬೆಳವಣಿಗೆಯಲ್ಲ ಎಂದರು. 

ಜಯಕರ್ನಾಟಕ ಸಂಘಟನೆ ಮುಖಂಡ ಗೋವಿಂದ ಮಾತನಾಡಿ, ತುಂಗಭದ್ರಾ ನದಿ ಮುಂಭಾಗದ ರಸ್ತೆಯನ್ನು ದುರಸ್ತಿಪಡಿಸುವಂತೆ ಕಳೆದ 24 ದಿನಗಳಿಂದ ಸತತವಾಗಿ ಹೋರಾಟ ಮಾಡಿದರೂ ಸಹ, ಇದುವರೆಗೂ ರಸ್ತೆಯನ್ನು ದುರಸ್ತಿಪಡಿಸುವಲ್ಲಿ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಇದರಿಂದಾಗಿ ರಸ್ತೆಯಲ್ಲಿ ಓಡಾ ಡುವ ಬಹಳಷ್ಟು ಜನರಿಗೆ ತೊಂದರೆ ಆಗುತ್ತಿದ್ದು, ಮುಂದೆ ಯಾವುದೇ ರೀತಿಯ ಅನಾಹುತಗಳು ಸಂಭವಿಸಿದರೆ ಅದಕ್ಕೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ನಾವು ಶಾಸಕರ ಮನೆಯ ಮುಂದೆ ಪ್ರತಿಭಟನೆ ಮಾಡಲಿಕ್ಕೆ ತೀರ್ಮಾನ ಮಾಡಲಾಗಿತ್ತು. ಆದರೆ ಅಧಿಕಾರಿಗಳು ನಮಗೆ ಆದೇಶ ಪತ್ರವನ್ನು ನೀಡದೇ ತಡೆ ಹಿಡಿದಿದ್ದು, ಇಂದು ಸಂಜೆಯವರೆಗೆ ಒಂದು ಒಳ್ಳೆಯ ನಿರ್ಣಯವನ್ನು ಮಾಡದೇ ಹೋದರೆ ಮುಂದಿನ ದಿನಗಳಲ್ಲಿ ಇನ್ನೂ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಜಯಕರ್ನಾಟಕ ಸಂಘಟನೆ ಮುಖಂಡರಾದ ಆನಂದ್, ಶಬರಿಶ, ಪ್ರದೀಪ್, ರಾಜು, ಸಂತೋಷ, ಕಾಂಗ್ರೆಸ್ ಪಕ್ಷದ ಭಾಗ್ಯಮ್ಮ, ಜಮೀಲಮ್ಮ, ಪಿಎಸ್ಐಗಳಾದ ಚಿದಾನಂದ, ಪ್ರವೀಣ್, ವಿ.ಎ.ಗಳಾದ ಹೇಮಂತ್ ಕುಮಾರ್, ಸಮೀರ್ ಪೊಲೀಸ್ ಸಿಬ್ಬಂದಿ ಸತೀಶ್, ಇತರರು ಹಾಜರಿದ್ದರು.

error: Content is protected !!