ಕನ್ನಡ ಭಾಷೆ, ಸಂಸ್ಕೃತಿ ಅತ್ಯಂತ ಶ್ರೀಮಂತ: ನ್ಯಾ.ಕರೆಣ್ಣವರ್

ಕನ್ನಡ ಭಾಷೆ, ಸಂಸ್ಕೃತಿ ಅತ್ಯಂತ ಶ್ರೀಮಂತ: ನ್ಯಾ.ಕರೆಣ್ಣವರ್

ದಾವಣಗೆರೆ, ಡಿ. 14- ಕನ್ನಡ ನಾಡಿನ ಭಾಷೆ, ಸಂಸ್ಕೃತಿ ಅತ್ಯಂತ ಶ್ರೀಮಂತವಾದುದು. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನವಿದೆ. ಅತಿ ಹೆಚ್ಚು ಅಂದರೆ ಎಂಟು ಜ್ಞಾನಪೀಠ ಪ್ರಶಸ್ತಿ ಕನ್ನಡ ಭಾಷೆಗೆ ಲಭಿಸಿರುವುದು ಅತ್ಯಂತ ಸಂತಸದ ವಿಚಾರ ಎಂದು  ಜಿಲ್ಲಾ ನ್ಯಾಯಾಧೀಶರಾದ ಮಹಾವೀರ ಕರೆಣ್ಣವರ್ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ವೇದಿಕೆ   ಜಿಲ್ಲಾ ಮಹಿಳಾ ಘಟಕದಿಂದ ಆಯೋಜನೆಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡ ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿಳನ್ನು ಉಳಿಸಿ, ಬೆಳೆಸುವ ಮಹತ್ತರ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ನಿರ್ವಹಿಸಬೇಕಾಗಿದೆ. ಪ್ರತಿಯೊಬ್ಬರಲ್ಲೂ ಕನ್ನಡ ನಾಡು, ನುಡಿ ಬಗ್ಗೆ ಅಭಿಮಾನ ಮೂಡಿದಾಗ ಮಾತ್ರ ನಾಡು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಜಗತ್ತಿನ ಭಾಷೆಗಳಲ್ಲಿ ಕನ್ನಡವೇ ಶ್ರೇಷ್ಠ ಭಾಷೆಯಾಗಿದ್ದು, ಕನ್ನಡ ಅತ್ಯಂತ ಸರಳ, ಸುಲಭವಾದ ಭಾಷೆಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಭಾಷಾಭಿಮಾನ ಕಡಿಮೆಯಾಗುತ್ತಿದೆ ಯೇನೋ ಎಂಬ ಆತಂಕ  ನಮ್ಮಲ್ಲಿ ಮೂಡುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಸಹ  ಕನ್ನಡ ಭಾಷೆ, ನಾಡು, ನುಡಿ, ಸಂಸ್ಕೃತಿ ಉಳಿವಿನ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಕನ್ನಡ ಭಾಷೆಗೆ ಹೆಚ್ಚು ಮಹತ್ವ ಮತ್ತು ಮನ್ನಣೆ ದೊರಕಬೇಕಾಗಿದೆ ಎಂದು ಹೇಳಿದರು.

ಕನ್ನಡ ಮಾಧ್ಯಮದಲ್ಲಿ ಮಕ್ಕಳನ್ನು ಓದಿಸಿ ದರೆ ಮಾತ್ರ ಉನ್ನತ ಹುದ್ದೆಗಳು ಲಭ್ಯವಾಗುತ್ತ ವೆಯೋ, ಇಲ್ಲವೋ ಎಂಬ ದುಗುಡ, ದುಮ್ಮಾನವನ್ನು  ಬಹಳಷ್ಟು ಪೋಷಕರಲ್ಲಿ ಕಾಣಬಹುದು. ಕನ್ನಡ ಮಾಧ್ಯಮದಲ್ಲಿ ಓದಿದ ಅನೇಕರು ಉನ್ನತ ಹುದ್ದೆಗಳನ್ನು ಅಲಂಕರಿಸುವ ಉದಾಹರಣೆಗಳು ಇವೆ ಎಂದು ತಿಳಿಸಿದರು.

ಕನ್ನಡಕ್ಕೆ ಪ್ರಥಮ ಪ್ರಾಶಸ್ತ್ಯ ದೊರೆತು, ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಸಮಾಜದ ಮುನ್ನಲೆಗೆ ಬರಬೇಕಾಗಿದೆ. ಕನ್ನಡದ ಸುಂದರ ವರ್ಣಮಾಲೆಯನ್ನು ಪಠಿಸಿದರೆ ಸಾಕು ಮನುಷ್ಯನ ದೇಹದಲ್ಲಿರುವ ಅನೇಕ ರೋಗಗಳು ವಾಸಿಯಾಗುತ್ತವೆ. ಅಂತಹ ಶಕ್ತಿ ಕನ್ನಡ ಭಾಷೆಗಿದೆ ಎಂದು ಅಭಿಮಾನಪೂರ್ವಕವಾಗಿ ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೇದಿಕೆ ರಾಜ್ಯಾಧ್ಯಕ್ಷ ಪಿ. ಕೃಷ್ಣೇಗೌಡ ಮಾತನಾಡಿ, ರಾಜ್ಯದಲ್ಲಿ ಕನ್ನಡ ಭಾಷೆ ಮೇಲಿನ ದಬ್ಬಾಳಿಕೆ, ಸರ್ಕಾರ ನಡೆದುಕೊಳ್ಳುವ ರೀತಿ, ನೀತಿಯನ್ನು ಗಮನಿಸಿದರೆ ಬೇಸರವೆನಿಸುತ್ತಿದೆ. ಜನಪ್ರತಿನಿಧಿಗಳ ಕಿವಿಹಿಂಡಿ ಅವರನ್ನು ಸರಿದಾರಿಗೆ ತರುವ ಪ್ರಯತ್ನವನ್ನು ಕನ್ನಡಪರ ಸಂಘಟನೆಗಳ ಗೌರವ ಹೆಚ್ಚಾಗಲಿದೆ ಎಂದರು.

ರಾಜ್ಯದಲ್ಲಿ ಕನ್ನಡ ಪರ ಸಂಘಟನೆಗಳು ಸಹ ನಾಯಿಕೊಡೆಗಳಂತೆ ಉದ್ಭವವಾಗುತ್ತಿವೆ. ಅಪರಾಧಗಳ ಹಿನ್ನೆಲೆ ಇರುವವರೇ ಸಂಘಟನೆ ಗಳ ಮುಖಂಡತ್ವ ವಹಿಸಿಕೊಳ್ಳುತ್ತಿರುವುದು ವಿಪರ್ಯಾ ಸದ ಸಂಗತಿಯಾಗಿದೆ ಎಂದು ಅವರು ವ್ಯಾಕುಲತೆ ವ್ಯಕ್ತಪಡಿಸಿದರು.

ಶಾಸಕಾಂಗದಲ್ಲೂ ವ್ಯಾಪಾರೀಕರಣ ನಡೆಯುತ್ತಿದ್ದು, ರಾಜಕಾರಣಿಗಳು ಬರೀ ಸ್ವಾರ್ಥ, ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಅಂತವರನ್ನು ಸರಿದಾರಿಗೆ ತರುವ ಕೆಲಸವನ್ನು ಸಂಘಟನೆಗಳು ಮಾಡಬೇಕೆಂದು ಮನವಿ ಮಾಡಿದರು. 

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದ ವತಿಯಿಂದ 48 ಶಾಲೆಗಳನ್ನು ದತ್ತು ಪಡೆದಿದ್ದು, 78 ನಿರ್ಗತಿಕರಿಗೆ ಸೂರು ಕಲ್ಪಿಸಿಕೊಡಲಾಗಿದೆ ಎಂದು ಹೇಳಿದರು.

ನ್ಯಾಯವಾದಿಗಳೂ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್ ಕುಮಾರ್ ಕನ್ನಡ, ನಾಡು, ನುಡಿ, ನೆಲ,ಜಲ ಸಂರಕ್ಷಣೆ ಮತ್ತು ಕರವೇ ಜವಾಬ್ದಾರಿಯನ್ನು ಕುರಿತು ಮಾತನಾಡಿದರು.

ಕರವೇ ಸ್ವಾಭಿಮಾನ ಬಣದ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಕವಿತ, ಪರಶುರಾಮ್, ಗಿರೀಶ್ ಮತ್ತು ಇತರರು ಉಪಸ್ಥಿತರಿದ್ದರು.

error: Content is protected !!