ಹರಿಹರ: ರಾಷ್ಟ್ರೀಯ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಡಾ. ಸಚ್ಚಿನ್ ಬೊಂಗಾಳೆ
ಹರಿಹರ, ಡಿ.14- ರೋಗ ಲಕ್ಷಣಗಳು ಕಂಡು ಬಂದಾಗ ಪ್ರಾಥಮಿಕ ಹಂತದಲ್ಲಿಯೇ ಚಿಕಿತ್ಸೆ ಪಡೆದುಕೊಂಡು, ಹೆಚ್ಚು ಹರಡದಂತೆ ಮುಂಜಾಗ್ರತೆ ವಹಿಸುವುದು ಜನತೆಯ ಆದ್ಯ ಕರ್ತವ್ಯವಾಗಿದೆ ಎಂದು ನಗರದ ವೈದ್ಯ ಡಾ. ಸಚ್ಚಿನ್ ಬೊಂಗಾಳೆ ಅಭಿಪ್ರಾಯಪಟ್ಟರು.
ನಗರದ ಹಾಸ್ಟೆಲ್ ನಲ್ಲಿ ನಡೆದ ರಾಷ್ಟ್ರೀಯ ಆರೋಗ್ಯ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ಷಯರೋಗವು ಮುಖ್ಯವಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುವ ಗಂಭೀರ ಕಾಯಿಲೆಯಾಗಿದೆ. ಕ್ಷಯರೋಗವನ್ನು ಉಂಟುಮಾಡುವ ಸೂಕ್ಷ್ಮಜೀವಿಗಳು ಒಂದು ರೀತಿಯ ಬ್ಯಾಕ್ಟೀರಿಯಾ. ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯು ಕೆಮ್ಮಿದಾಗ, ಸೀನಿದಾಗ ಬಾಯಿ ಮೂಲಕ ಹೊರಡುವ ತುಂತುರು ಹನಿಗಳ ಮೂಲಕ ಕ್ಷಯರೋಗವು ಹರಡುತ್ತದೆ. ಇದು ಸೂಕ್ಷ್ಮಾಣುಗಳೊಂದಿಗೆ ಸಣ್ಣ ಹನಿಗಳನ್ನು ಗಾಳಿಯಲ್ಲಿ ಹರಡುವುದರಿಂದ, ಇನ್ನೊಬ್ಬ ವ್ಯಕ್ತಿಯು ಹನಿಗಳಲ್ಲಿ ಉಸಿರಾಡಬಹುದು, ಮತ್ತು ಸೂಕ್ಷ್ಮಜೀವಿಗಳು ಶ್ವಾಸಕೋಶವನ್ನು ಪ್ರವೇಶಿಸುತ್ತವೆ.
ಜನಸಂದಣಿಯಲ್ಲಿ ಜನರು ಸೇರುವ ಸ್ಥಳದಲ್ಲಿ ಅಥವಾ ಜನರು ಕಿಕ್ಕಿರಿದ ಸ್ಥಿತಿಯಲ್ಲಿ ವಾಸಿಸುವ ಸ್ಥಳದಲ್ಲಿ ಕ್ಷಯರೋಗವು ಸುಲಭವಾಗಿ ಹರಡುತ್ತದೆ. ಆದುದರಿಂದ ಕೆಮ್ಮುವಾಗ, ಸೀನುವಾಗ ಕರವಸ್ತ್ರವನ್ನು ಬಳಸಿ. ಎರಡು ವಾರಕ್ಕಿಂತ ಹೆಚ್ಚು ಕೆಮ್ಮು ಕಂಡುಬಂದರೆ ಹತ್ತಿರದ ಆಸ್ಪತ್ರೆಯಲ್ಲಿ ಕಫ ಪರೀಕ್ಷೆ ಮಾಡಿಸಿಕೊಳ್ಳಿ. ರೋಗ ಖಚಿತವೆಂದರೆ ಚಿಕಿತ್ಸೆ ಪಡೆದುಕೊಳ್ಳಿ ಎಂದು ಹೇಳಿದರು
ಸಾಮಾನ್ಯವಾಗಿ ಹಾಸ್ಟೆಲ್ನಲ್ಲಿ ಕಂಡು ಬರುವ ಸಾಂಕ್ರಾಮಿಕ ರೋಗಗಳಾದ ಕಜ್ಜಿ, ಮದ್ರಾಸ್ ಐ, ಶೀತ, ಜ್ವರ, ಸಾಮಾನ್ಯ ಕೆಮ್ಮುಗಳಿಂದ ರಕ್ಷಿಸಿ ಕೊಳ್ಳಲು ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಿ ಎಂದು ಹಾಸ್ಟೆಲ್ ವಾರ್ಡನ್ಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ತಿಳಿಸಿದರು.
ಪ್ರಾಸ್ತಾವಿಕವಾಗಿ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಪ್ರಶಾಂತ್ ಕುಮಾರ್ ಮಾತನಾಡಿ, ಸಾಮಾನ್ಯವಾಗಿ ಹಾಸ್ಟೆಲ್ ವಿದ್ಯಾರ್ಥಿಗಳಲ್ಲಿ ಕಜ್ಜಿ ಎಂಬ ಚರ್ಮರೋಗವು ಪದೇ ಪದೇ ಹೆಚ್ಚು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕಾರಣ ಕಜ್ಜಿ ಒಂದು ಅಂಟುರೋಗ. ಕೈ ಸಂದುಗಳು, ಕಂಕುಳು, ಗಜ್ಜಲುಗಳ ಚರ್ಮ ದೊಳಕ್ಕೆ ಬಿಲದಂತೆ ತೋಡಿಕೊಂಡು ಕ್ರಿಮಿ ಒಳಸೇರಿ ಮೇಲೆ ದದ್ದು ಗುಳ್ಳೆ ಎದ್ದಿರಬಹುದು. ರಾತ್ರಿಹೊತ್ತು ಇದರ ಚಟುವಟಿಕೆ ಬಹಳ. ಇದರಿಂದ ಕೆರೆತ, ತುರಿಕೆ ಹೆಚ್ಚು ಕಂಡು ಬರುತ್ತದೆ.
ಸ್ವಚ್ಛತೆ, ಶುದ್ಧ ಬಟ್ಟೆ ಧರಿಸುವುದು. ಬಟ್ಟೆಗಳನ್ನು ಬಿಸಿ ನೀರಿನಲ್ಲಿ ಹಾಕಿ ತೊಳೆಯುವುದು. ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆದರೆ ಗುಣಮುಖರಾಗುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸುಧಾ, ಆರೋಗ್ಯ ಮಿತ್ರ ಹನುಮಂತಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿ ಉಮ್ಮಣ್ಣ, ಆರೋಗ್ಯ ಶಿಕ್ಷಣಾಧಿಕಾರಿ ನಾಗರಾಜ್, ಸುಧಾ ಪಿ. ಸುಲಾಕೆ, ಷಣ್ಮುಖಪ್ಪ. ಮಹೇಶ್, ಬಸವನಗೌಡ ಇತರರು ಹಾಜರಿದ್ದರು.