ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕಾರ್ಯಕ್ರಮದಲ್ಲಿ ಇನ್‌ಸೈಟ್ಸ್ ಐಎಎಸ್ ಸಂಸ್ಥೆಯ ಸಂಸ್ಥಾಪಕ ಜಿ.ಬಿ. ವಿನಯ್ ಕುಮಾರ್ ಕಿವಿಮಾತು
ದಾವಣಗೆರೆ, ಡಿ. 14- ವಿದ್ಯಾರ್ಥಿಗಳು ತಮ್ಮಲ್ಲಿರುವ ಕೀಳರಿಮೆ ಬಿಟ್ಟು, ವೈಜ್ಞಾನಿಕ ಮತ್ತು ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳುವ ಮೂಲಕ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕೆಂದು ಇನ್‌ಸೈಟ್ಸ್ ಐಎಎಸ್ ಸಂಸ್ಥೆಯ ಸಂಸ್ಥಾಪಕರೂ, ನಿರ್ದೇಶಕರೂ ಆದ ಜಿ.ಬಿ. ವಿನಯ್ ಕುಮಾರ್ ಕರೆ ನೀಡಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಇನ್‌ಸೈಟ್ಸ್ ಐಎಎಸ್ ಸಂಸ್ಥೆ ಹಾಗೂ ಬಂಧುತ್ವ ಫೌಂಡೇಶನ್ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಇಂದು ಹಮ್ಮಿಕೊಂಡಿದ್ದ ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ ಪರೀಕ್ಷಾ ಮಾರ್ಗದರ್ಶಿ ಕಾರ್ಯಾಗಾರವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ನಿತ್ಯ ಆಂಗ್ಲ ಭಾಷಾ ಪತ್ರಿಕೆಗಳನ್ನು ಓದುವುದನ್ನು ರೂಢಿಸಿಕೊಳ್ಳಿ. ಪದವಿ ತರಗತಿ ವಿದ್ಯಾರ್ಥಿಗಳು ಈಗಿನಿಂದಲೇ ಯುಪಿಎಸ್‌ಸಿ ಪರೀಕ್ಷೆ ಬರೆಯಲು ಪೂರ್ವ ತಯಾರಿ ಅಗತ್ಯ ಎಂದರು.
ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ. ಬದಲಾಗಿ ನಾವೇ ಹುಡುಕಿ ಹೋಗಬೇಕು. ಇಲ್ಲವೇ ನಾವೇ, ಅವಕಾಶಗಳನ್ನು ಸೃಷ್ಠಿಸಿಕೊಳ್ಳಬೇಕೆಂದ ಅವರು, ಜೀವನದಲ್ಲಿ ಸಾಧನೆ ಮಾಡಿದ ಸಾಧಕರನ್ನು ಆದರ್ಶವನ್ನಾಗಿಟ್ಟು ಕೊಳ್ಳಬೇಕು. ಸೋಲನ್ನು ಸ್ವೀಕರಿಸುವ ಮನೋಭಾ ವವನ್ನು ಹೊಂದಿರಬೇಕೆೆಂದು ಹೇಳಿದರು.
ವೈಚಾರಿಕ ಮತ್ತು ವೈಜ್ಞಾನಿಕ ಗುಣಗಳನ್ನು ಮೈಗೂಡಿಸಿಕೊಂಡಾಗ ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ಪಡೆಯಲು ಸಾಧ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಪೋಷಕರು ಏನೇನೋ ಕುಂಟು ನೆಪ ಹೇಳಿ ಎಸ್ಸೆಸ್ಸೆಲ್ಸಿ, ಪಿಯುಸಿ ತರಗತಿಗೆ ತಮ್ಮ ಮಕ್ಕಳ ವಿದ್ಯಾಭ್ಯಾಸ ಕುಂಠಿತಕ್ಕೆ ಕಾರಣರಾಗುತ್ತಾರೆ. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಎದೆಗುಂದದೇ ಧೈರ್ಯವಾಗಿ ಸಮಸ್ಯೆಗಳನ್ನು ಎದುರಿಸುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ದೊಡ್ಡ ದೊಡ್ಡ ಕನಸುಗಳನ್ನು ಕಾಣುವ ಮೂಲಕ ಶಿಕ್ಷಣದ ಗುರಿ ತಲುಪಲು ಯತ್ನಿಸಬೇಕೆಂದರು.
ವಿದ್ಯಾರ್ಥಿಗಳು ವಿಶ್ಲೇಷಣಾತ್ಮಕ, ವಿಮರ್ಶಾತ್ಮಕ ಮತ್ತು ಸೃಜನಾತ್ಮಕ ಮೂರು ಮೂಲಭೂತ ಆಲೋಚನೆಗಳನ್ನು ಮಾಡುವ ಮೂಲಕ ಜೀವನದ ಯಶಸ್ಸಿನತ್ತ ಹೆಜ್ಜೆ ಹಾಕಬೇಕೆಂದು ಸಲಹೆ ನೀಡಿದರು.
ವಿದ್ಯಾರ್ಥಿನಿಯರು ನ್ಯಾಯ ಸ್ಥಾನದಲ್ಲಿ ಕೂತು ನ್ಯಾಯ ಕೊಡಿಸುವ ಕೆಲಸವನ್ನು ಮಾಡಬೇಕು. ಅನೇಕ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಆದರೆ ನಿಮ್ಮ ತಂದೆ-ತಾಯಿಗಳು ಪದವಿವರೆಗೆ ಓದಲು ಅವಕಾಶ ನೀಡಿದ್ದಾರೆ. ನೀವು ಕೂಡ ಉನ್ನತ ಕನಸುಗಳನ್ನು ಹೊತ್ತು ಜೀವನದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುವ ಕಡೆ ನಿಮ್ಮ ಚಿತ್ತ ಹರಿಸಬೇಕು ಎಂದು ಕಿವಿಮಾತು ಹೇಳಿದರು.
ನಿಸ್ವಾರ್ಥ, ಜನಪರ ಕಾಳಜಿಯುಳ್ಳ ಪ್ರಾಮಾಣಿಕ ವ್ಯಕ್ತಿತ್ವ ಹೊಂದಿದ ಅಭ್ಯರ್ಥಿಗಳನ್ನು ಲೋಕಸಭೆಗೆ ಆಯ್ಕೆ ಮಾಡಿದರೆ ತನ್ಮೂಲಕ ಆಯಾ ಕ್ಷೇತ್ರ ಸರ್ವಾಂಗೀಣ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಯೋಚಿಸಿ, ಆಲೋಚಿಸಿ ಮತ ಹಾಕುವ ಕೆಲಸವನ್ನು ವಿದ್ಯಾರ್ಥಿ ಯುವ ಜನರು ಮಾಡಬೇಕಾಗಿದೆ ಎಂದು ಹೇಳಿದರು.
ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕಾಗಿದೆ. ಸಂಪತ್ತು ಮತ್ತು ಅಧಿಕಾರ ವಿಕೇಂದ್ರೀಕರಣವಾಗಬೇಕಿದೆ. ಪ್ರಾದೇಶಿಕ ಅಸಮತೋಲನ ಹೋಗಬೇಕಾಗಿದೆ. ರಾಜಕೀಯ ಪ್ರಜ್ಞಾವಂತರಾಗಬೇಕಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಂಧುತ್ವ ವೇದಿಕೆ ಅಧ್ಯಕ್ಷ ರಘು ದೊಡ್ಮನಿ ಅವರು, ವಿದ್ಯಾರ್ಥಿ ಜೀವನದಲ್ಲಿ ಪದವಿ ಹಂತ ಮಹತ್ತರ ಘಟ್ಟ. ಇಂತಹ ಸಮಯದಲ್ಲಿಯೇ ಭವಿಷ್ಯವನ್ನು ರೂಪಿಸಿಕೊಳ್ಳಲು ಅವಕಾಶಗಳ ಸದ್ಭಳಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಗಣಿತ ವಿಭಾಗದ ಮುಖ್ಯಸ್ಥರಾದ ಎನ್. ಶಿವರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಧ್ಯಾಪಕರಾದ ಎಸ್.ಆರ್. ಪೂರ್ಣಿಮಾ, ಪ್ರೊ. ಭೀಮಪ್ಪ, ಅಧೀಕ್ಷಕ ಟಿ. ಶೇಷಪ್ಪ, ವಕೀಲರಾದ ಪ್ರೇಮಾ ಜಾಧವ್ ಉಪಸ್ಥಿತರಿದ್ದರು.