ಸಂಗೀತ, ನೃತ್ಯ ಕಲೆಗಳ ಪೋಷಣೆ ಅಗತ್ಯ : ಇ.ಬಾಲಕೃಷ್ಣ

ಸಂಗೀತ, ನೃತ್ಯ ಕಲೆಗಳ  ಪೋಷಣೆ ಅಗತ್ಯ : ಇ.ಬಾಲಕೃಷ್ಣ

ದಾವಣಗೆರೆ, ಡಿ. 14- ನೃತ್ಯ ಭಾರತೀಯ ಪ್ರಾಚೀನ ಕಲೆ. ಪುರಾಣಗಳಲ್ಲೂ ಕೂಡ ನೃತ್ಯ ಕಲೆಯ ಬಗ್ಗೆ ಉಲ್ಲೇಖ ಮಾಡಲಾಗಿದೆ. ಇಂತಹ ಸಂಗೀತ, ನೃತ್ಯ ಕಲೆಗಳನ್ನು ಪೋಷಿಸಬೇಕಾದ ಅಗತ್ಯವಿದೆ ಎಂದು ಕೆಎಎಸ್ ಅಧಿಕಾರಿ ಇ. ಬಾಲಕೃಷ್ಣ ಹೇಳಿದರು.

ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಆವರಣದಲ್ಲಿ ನೂಪುರ ಕಲಾ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮೊನ್ನೆ ಹಮ್ಮಿಕೊಂಡಿದ್ದ ನೂಪುರ ನೃತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಜಯನಗರ, ಹೊಯ್ಸಳರು ಸೇರಿದಂತೆ ಅನೇಕ ರಾಜರುಗಳ ಆಸ್ಥಾನದಲ್ಲಿ ನೃತ್ಯ ಕಲಾವಿದರಿದ್ದರು. ಕಲೆಗೆ ತುಂಬಾ ಬೆಲೆ ಇತ್ತು. ಇಂತಹ ಐತಿಹಾಸಿಕ ಸಂಗೀತ, ಕಲೆಗಳನ್ನು ಉಳಿಸಿ, ಬೆಳೆಸಬೇಕಾದ ಅವಶ್ಯವಿದೆ ಎಂದರು.

ಸಾಮಾಜಿಕ ಜಾಲತಾಣಗಳಲ್ಲಿ ನಾವು ಅನೇಕ ಅಪರಾಧಗಳನ್ನು ನೋಡುತ್ತೇವೆ. ಕ್ಷಣಮಾತ್ರದಲ್ಲಿ ಗ್ರಾಹಕರ ಬ್ಯಾಂಕ್ ಖಾತೆಗಳಲ್ಲಿನ ಹಣವನ್ನು ಮೋಸದಿಂದ ದೋಚುವ ಕೃತ್ಯಗಳು ನಡೆಯುತ್ತವೆ. ಆದರೆ ವಿದ್ಯೇ ಎಂದಿಗೂ ಕಸಿಯಲಾಗದ ಸಂಪತ್ತು. ಕಲಿತ ವಿದ್ಯೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ನಿರ್ದೇಶಕ ಡಾ. ಡಿ.ಎಸ್. ಜಯಂತ್ ಮಾತನಾಡಿ, ದಾವಣಗೆರೆಯ ಹೆಸರನ್ನು ಜಗತ್ತಿನಾದ್ಯಂತ ಪಸರಿಸುವ ಕೆಲಸವನ್ನು ನೂಪುರ ಕಲಾ ಸಂಸ್ಥೆ ಮಾಡುತ್ತಾ ಬಂದಿದೆ. ದೇಶ, ವಿದೇಶಗಳಲ್ಲಿ ನೃತ್ಯ ಪ್ರದರ್ಶನ ಮತ್ತು ಆನ್‌ಲೈನ್‌ನಲ್ಲಿ ಪಾಠ ಹೇಳಿಕೊಡುವ ಬೃಂದಾ ಶ್ರೀನಿವಾಸ್ ಅವರ ಕಲಾ ಸೇವೆಯನ್ನು ಪ್ರಶಂಸಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಅವರು, ನೂಪುರದಂತಹ ಕಲಾ ಸಂಸ್ಥೆಗಳು ಉತ್ತಮ ಕೆಲಸ ಮಾಡುತ್ತಿದ್ದು, ಇಲಾಖೆಯಿಂದ ಕಲಾ ಸಂಸ್ಥೆಗಳಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ನೂಪುರ ಕಲಾ ಸಂಸ್ಥೆಯ ಅಧ್ಯಕ್ಷರಾದ ಬೃಂದಾ ಶ್ರೀನಿವಾಸ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಇದೇ ವೇಳೆ ವಿದೂಷಿ ಪದ್ಮಿನಿ ಉಪಾಧ್ಯ ಅವರನ್ನು ಗೌರವಿಸಲಾಯಿತು. ಡಾ. ರೂಪಶ್ರೀ ಶಶಿಕಾಂತ್, ಸುಷ್ಮಾ  ಮತ್ತಿತರರು ಉಪಸ್ಥಿತರಿದ್ದರು.  

error: Content is protected !!