ರಾಣೇಬೆನ್ನೂರು, ಡಿ.14- ಅಪರೂಪದ ಸಾಧನೆ ಮಾಡಿ 600 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ದಾಖಲೆ ನಿರ್ಮಿಸಿದ ಬಹುಮುಖ ಪ್ರತಿಭೆ, ಪಂಚಭಾಷಾ ತಾರೆ ಲೀಲಾವತಿ ಅಮ್ಮನಿಗೆ ಕೇಂದ್ರ ಸರ್ಕಾರ ಅವರು ಜೀವಂತವಿದ್ದಾಗಲಂತೂ ಗೌರವಿಸಲಿಲ್ಲ, ಮರಣದ ನಂತರವಾದರೂ ಅವರಿಗೆ ಮರಣೋತ್ತರ ‘ಪದ್ಮಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಿ ಎಂದು ರೈತ ಮುಖಂಡ, ಪ್ರಗತಿಪರ ಚಿಂತಕ ರವೀಂದ್ರಗೌಡ ಎಫ್. ಪಾಟೀಲ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ಮುಷ್ಟೂರು ಗ್ರಾಮದಲ್ಲಿ ಕನ್ನಡಪರ, ರೈತಪರ ಸಂಘಟನೆಗಳಿಂದ ಲೀಲಾವತಿ ಅಭಿಮಾನಿಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಲೀಲಾವತಿ ಅಮ್ಮನವರ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲೀಲಾವತಿ ಅವರು ಚಿತ್ರರಂಗದ ದಿಗ್ಗಜರಾದ ಡಾ. ರಾಜಕುಮಾರ್, ಎಂ.ಜಿ.ಆರ್., ಎನ್.ಟಿ. ರಾಮ ರಾವ್, ಶಿವಾಜಿ ಗಣೇಶನ್, ಜೆಮಿನಿ ಗಣೇಶನ್, ಕಮಲ್ಹಾಸನ್, ರಜನೀಕಾಂತ್, ಚಿರಂಜೀವಿ, ವಿಷ್ಣುವರ್ಧನ್, ಶಂಕರನಾಗ್ ಮುಂತಾದವರ ಜೊತೆ ನಟಿಸಿ ದಕ್ಷಿಣ ಭಾರತದ ಚಿತ್ರರಂಗದಲ್ಲೇ ತಮ್ಮದೇ ಆದ ಛಾಪು ಮೂಡಿಸಿ, ಮರೆಯಾಗಿದ್ದಾರೆ. ಕೆಲವು ಕಾಣದ ಕೈಗಳ ಅಟ್ಟಹಾಸಕ್ಕೆ ಆ ಹಿರಿಯ ಜೀವಿ ನಲುಗಿ ಹೋಗಿತ್ತು. ಆ ಕೈಗಳ ಪ್ರಭಾವದಿಂದಲೇ ಸರ್ಕಾರಗಳು ಇಂದಿನವರೆಗೂ ಅವರಿಗೆ ಕೊಡಬಹುದಾದ ಗೌರವ ಕೊಡದೇ ಇರುವುದಕ್ಕೆ ಕಾರಣ ಎಂಬುದನ್ನು ನಾವಿಲ್ಲಿ ಸ್ಮರಿಸಬಹುದು. ಅವರ ಸಾವಿಗೆ ಕೇಂದ್ರ ಮೊಸಳೆ ಕಣ್ಣೀರು ಸುರಿಸುವುದನ್ನು ಬಿಟ್ಟು, ಮರಣೋತ್ತರ ‘ಪದ್ಮಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಿ ಎಂದು ಪಾಟೀಲರು ಕೇಂದ್ರಕ್ಕೆ ಒತ್ತಾಯಿಸಿದ್ದಾರೆ.
ಮುಖ್ಯ ಅತಿಥಿಗಳಾಗಿ ದಿನಗೂಲಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಕೊಂಗಿಯವರ, ಹರಿಹರಗೌಡ ಪಾಟೀಲ, ಬಸವರಾಜ ಯಲ್ಲಕ್ಕನವರ, ಸೀಮಾಬಾನು ಶೇತಸನದಿ, ಶ್ರೀಮತಿ ಕವಿತಾ ತಳವಾರ, ಸುಧಾ ಪಾಟೀಲ ಮುಂತಾದವರು ಭಾಗವಹಿಸಿದ್ದರು.
ಪ್ರಶಾಂತರಡ್ಡಿ ಜಿ. ಯರೇಕುಪ್ಪಿ ಸ್ವಾಗತಿಸಿದರು. ಷಾತಾಜಬಾನು ಶೇತಸನದಿ ಕಾರ್ಯಕ್ರಮ ನಿರೂಪಿಸಿದರು. ಜಯಮ್ಮ ಹುರಕಡ್ಲಿ ವಂದಿಸಿದರು.