ಭಾರತದ ಆರ್ಥಿಕ ಸದೃಢತೆಗೆ ಗ್ರಾಮಾಭಿವೃದ್ಧಿ ಅವಶ್ಯ

ಭಾರತದ ಆರ್ಥಿಕ ಸದೃಢತೆಗೆ ಗ್ರಾಮಾಭಿವೃದ್ಧಿ ಅವಶ್ಯ

ಕಡ್ಲೇಬಾಳು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಎಚ್.ಬಿ.ಮಂಜುನಾಥ

ದಾವಣಗೆರೆ, ಡಿ.14- ಭಾರತವು ಮಹಾನ್ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವಲ್ಲಿ ದೇಶದ ಗ್ರಾಮೀಣಾಭಿವೃದ್ಧಿಯು ಅತ್ಯವಶ್ಯ ಎಂದು ಹಿರಿಯ ಪತ್ರಕರ್ತ ಹೆಚ್.ಬಿ.ಮಂಜುನಾಥ್ ಅಭಿಪ್ರಾಯಪಟ್ಟರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಟ್ರಸ್ಟ್ ವತಿಯಿಂದ ದಾವಣಗೆರೆ ಸಮೀಪದ ಕಡ್ಲೆಬಾಳು ಗ್ರಾಮದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮೊನ್ನೆ ಏರ್ಪಾಡಾಗಿದ್ದ ಸಾಮೂಹಿಕ ಶ್ರೀ ಮಹಾಲಕ್ಷ್ಮಿ ಪೂಜೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಉಪನ್ಯಾಸ ನೀಡಿದರು.

ಭಾರತವು 6,46,000 ಹಳ್ಳಿಗಳನ್ನು ಹೊಂದಿರುವ ದೇಶವಾಗಿದ್ದು, ದೇಶದ ಶೇ.70 ರಷ್ಟು ಜನ ಗ್ರಾಮಾಂತರ ಪ್ರದೇಶಗಳಲ್ಲಿ ವಾಸಿಸುತ್ತಿದ್ದು, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಆದಲ್ಲಿ ಅದು ದೇಶದ ಆರ್ಥಿಕ ಅಭಿವೃದ್ಧಿ ಹಾಗೂ ಜಿಡಿಪಿ ಅಂದರೆ ನಿವ್ವಳ ಆಂತರಿಕ ಉತ್ಪಾದನೆಯ ಏರಿಕೆಗೂ ಸಹಕಾರಿಯಾಗಬಲ್ಲದು. 

ಗ್ರಾಮೀಣ ಮಹಿಳೆಯರೂ ಸಹ ಆರ್ಥಿಕ ಸ್ವಾವಲಂಬಿಗಳಾಗಿ, ಸಂಘಟನಾತ್ಮಕವಾಗಿ ಚಟುವಟಿಕೆಗಳನ್ನು ನಡೆಸಲು ಪೂರಕವಾಗಿ ಸಾಮೂಹಿಕವಾದ ಧಾರ್ಮಿಕ ಆಚರಣೆಗಳೂ ಸಹ ಸಹಕಾರಿಯಾಗುತ್ತದೆ. ಸಾಮೂಹಿಕವಾದ ಸತ್ಕಾರ್ಯಗಳಲ್ಲಿ ತೊಡಗಿಕೊಂಡಾಗ `ನಾನು’ ಎನ್ನುವ ಅಹಂಕಾರ, ಅಹಂ ಭಾವ ದೂರಾಗಿ `ನಾವು’ ಎನ್ನುವ ಹೃದಯ ವೈಶಾಲ್ಯತೆ ಹಾಗೂ ಐಕ್ಯತೆ ಸಾಕಾರವಾಗುತ್ತದೆ ಎಂಬುದನ್ನು ಸ್ವಾರಸ್ಯಕರ ಕಥಾ ಉದಾಹರಣೆಯ ಮೂಲಕ ಹೆಚ್.ಬಿ.ಮಂಜುನಾಥ್ ವಿವರಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರದ ಭಗವಾನ್ ಮಹಾವೀರ ಜೈನ್‌ ಹಾಸ್ಪಿಟಲ್‌ನ ಟ್ರಸ್ಟಿಗಳಲ್ಲೊಬ್ಬರಾದ ಜಯಚಂದ್ ಪಿ. ಜೈನ್ ಅವರು ಕಾಲಕಾಲಕ್ಕೆ ಆರೋಗ್ಯ ತಪಾಸಣೆ, ವೈದ್ಯರ ಸಲಹೆ ಹಾಗೂ ಮಾಹಿತಿಗಳನ್ನು ಪಡೆಯಬೇಕಾದ ಮಹತ್ವ ವಿವರಿಸಿದರು.

ಗ್ರಾಮಾಭಿವೃದ್ಧಿ ಯೋಜನಾ ಟ್ರಸ್ಟಿನ ಯೋಜನಾಧಿಕಾರಿ ಬಿ.ಶ್ರೀನಿವಾಸ್ ಅವರು ಪ್ರಾಸ್ತಾವಿಕ ಮಾತನಾಡಿದರು. 

ಮುಖ್ಯ ಅತಿಥಿಯಾಗಿ ಸಹಾಯಕ ಕೃಷಿ ನಿರ್ದೇಶಕ ಡಿ.ಎಂ.ಶ್ರೀಧರಮೂರ್ತಿ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರುಗಳಾದ ಗೌಡರ ಚನ್ನಬಸಪ್ಪ, ಎಸ್.ಟಿ.ಕುಸುಮ ಶ್ರೇಷ್ಠಿ, ಕಡ್ಲೇಬಾಳು ಗ್ರಾಮ ಪಂಚಾಯಿತಿ ಸದಸ್ಯ ರಾಮಣ್ಣ, ಡಾ. ಜಿ.ಎನ್.ಅರ್ಜುನ್ ಮುಂತಾದವರು ಮಾತನಾಡಿದರು.

ಕಡ್ಲೇಬಾಳು ಗ್ರಾ.ಪಂ.ಅಧ್ಯಕ್ಷರಾದ ಶ್ರೀಮತಿ ಅಕ್ಕಮ್ಮ ಪರಮೇಶ್ವರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಪ್ರೇಮಲೀಲಾ, ಶಾಲಾ ಮುಖ್ಯೋಪಾಧ್ಯಾಯಿನಿ ಜ್ಯೋತಿ, ಡಾ. ಉಪೇಂದ್ರ, ಬಿ.ಕೆ.ಪರಶು ರಾಮಪ್ಪ, ಚಂದ್ರಶೇಖರ್, ಲಿಂಗರಾಜ್, ಬೂದಾಳು ಒಕ್ಕೂಟದ ಸುಶೀಲಮ್ಮ, ಹೊಸ ಕಡ್ಲೇಬಾಳು ಒಕ್ಕೂಟದ ಮಾಲತಿ, ಸೌಂಡ್ ಸಿಸ್ಟಂ ರಾಘವೇಂದ್ರ, ಅರ್ಚಕ  ಉದಯ್ ಭಾರಧ್ವಾಜ್ ಮುಂತಾದವರು ಉಪಸ್ಥಿತರಿದ್ದರು. 

ಪ್ರವೀಣ್, ಉಮಾ ನಿರೂಪಿಸಿದರು. ಕು|| ಮಾನಸ ಪ್ರಾರ್ಥಿಸಿದರು. ಟ್ರಸ್ಟಿನ ಮೇಲ್ವಿ ಚಾರಕಿ ಶ್ರೀಮತಿ ಎಂ.ಸಿ.ಉಮಾ ಸ್ವಾಗತಿಸಿದರು. 

error: Content is protected !!