ಹೊನ್ನಾಳಿ, ಡಿ.13- ಹಿರೇಕಲ್ಮಠವು ಈ ಭಾಗದ ಭಕ್ತರ ಭಾಗ್ಯದ ಬಾಗಿಲು ತೆರೆಯುವ ಹೆಬ್ಬಾಗಿಲಿದ್ದಂತೆ ಎಂದು ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಪಟ್ಟಣದ ಹಿರೇಕಲ್ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಗುರು ಚನ್ನೇಶ್ವರ ಬೆಳ್ಳಿ ರಥೋತ್ಸವ, ಕದಳಿ ಕಾರ್ತಿಕ ಲಕ್ಷ ದೀಪೋತ್ಸವ, ಲಿಖಿತ ಜಪಯಜ್ಞ ಪುಸ್ತಕ ಬಿಡುಗಡೆ, ಸಂಸ್ಕೃತಿ-ಸಂಸ್ಕಾರ ಧಾರ್ಮಿಕ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ಶಿಕ್ಷಣ-ಸಂಸ್ಕಾರ-ಆರೋಗ್ಯ ಕ್ಷೇತ್ರಗಳಲ್ಲಿ ಭಕ್ತಾದಿಗಳಿಗೆ ಶ್ರೀಮಠದಿಂದ ಮಹತ್ತರ ಕೊಡುಗೆ ಗಳನ್ನು ನೀಡುವ ಯೋಜನೆಗಳು ಪ್ರಕೃತಿ ಮುನಿಸಿ ನಿಂದ ಭೀಕರ ಬರಗಾಲ ತಲೆದೋರಿದ್ದರ ಪರಿ ಣಾಮವಾಗಿ ಬರುವ ವರ್ಷಕ್ಕೆ ಮುಂದೂಡಲಾಗಿದ್ದು, ಲಕ್ಷ ದೀಪೋತ್ಸವದ ಮೂಲಕ ಜನಕಲ್ಯಾಣ ಕಾರ್ಯಕ್ರಮದ ಶುಭಾರಂಭ ಮಾಡಲಾಗಿದೆ ಎಂದರು.
ಶ್ರೀಗಳ ಸಂಕಲ್ಪವು ಹಿರೇಕಲ್ಮಠದ ಕತೃತ್ವ ಶಕ್ತಿಯಿಂದ ನೆರವೇರಲಿದೆ ಎಂದು ತಿಳಿಸಿದರು. ಲಿಂ.ಶ್ರೀಗಳು ಭೌತಿಕವಾಗಿ ನಮ್ಮ ಜೊತೆಯಿಲ್ಲದಿದ್ದರೂ ಅವ್ಯಕ್ತವಾಗಿದ್ದು, ತನ್ನ ಗುರು ಪರಂಪರೆಯನ್ನು ಈಗಿನ ಶ್ರೀಗಳ ಮೂಲಕ ಶ್ರೀಮಠದ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಿದ್ದಾರೆ. ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹಿರೇಕಲ್ಮಠವನ್ನು ಲಿಂ.ಶ್ರೀಗಳ ಸಂಕಲ್ಪದಂತೆ ತುಂಬಾ ಅತ್ಯುತ್ತಮವಾಗಿ ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀಮಠದ ಪರಿಸರವನ್ನು ನೋಡಿದರೆ ಇಲ್ಲಿನ ಮೂಲಪುರುಷರ ಪವಾಡಗಳು ಕಾಣುತ್ತವೆ. ಶ್ರೀ ಶೈಲ ಪೀಠದ ಎರಡನೇ ದೊಡ್ಡ ಶಾಖಾಮಠ ಇದಾಗಿದ್ದು, ಲಕ್ಷಾಂತರ ಭಕ್ತಾದಿಗಳನ್ನು ಸಂಪಾದಿಸಿದ ಕೀರ್ತಿ ಸಲ್ಲುತ್ತದೆ.
ಶ್ರೀ ಶೈಲ ಜಗದ್ಗುರುಗಳ ಕತೃ ಸಮಾಧಿಯನ್ನು ಹೊಂದಿರುವ ಪುಣ್ಯ ಸ್ಥಳ ಇದಾಗಿದೆ ಎಂದು ತಿಳಿಸಿದರು.
ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಲಿಂ.ಶ್ರೀಗಳ ಸಂಕಲ್ಪದಂತೆ ಶ್ರೀಮಠದಲ್ಲಿ ಚನ್ನಪ್ಪಸ್ವಾಮಿ ಜನಕಲ್ಯಾಣ ಟ್ರಸ್ಟ್ ಪ್ರಾರಂಭಿಸಿ ಅದರ ಮೂಲಕ 100 ಬೆಡ್ ಆಸ್ಪತ್ರೆ, ನರ್ಸಿಂಗ್, ಫಾರ್ಮಸಿ ಕಾಲೇಜ್, ಸಿಬಿಎಸ್‍ಇ ವಸತಿಯುತ ಶಾಲೆ, ಚನ್ನಪ್ಪಸ್ವಾಮಿಗಳ ಸುವರ್ಣ ಮೂರ್ತಿ, ಕೋಟಿ ದೀಪೋತ್ಸವ, ಕೋಟಿ ಬಿಲ್ವಾರ್ಚನೆಗಳನ್ನು ಶ್ರೀ ಮಠದ ಭಕ್ತಾದಿಗಳ ಶ್ರೇಯೋಭಿವೃದ್ಧಿಗಾಗಿ ಹಾಕಿಕೊಳ್ಳಲಾಗಿದ್ದು, ಬರಗಾಲವಿರುವ ಪ್ರಯುಕ್ತ ಎಲ್ಲಾ ಯೋಜನೆಗಳನ್ನು ಮುಂದಿನ ವರ್ಷಕ್ಕೆ ಮುಂದೂಡಿ ಪ್ರತೀ ವರ್ಷದ ಕದಳಿ ಕಾರ್ತಿಕೋತ್ಸವದ ಪದ್ಧತಿಯಂತೆ ಇಂದು 100505 ದೀಪಗಳನ್ನು ಹಚ್ಚುವುದರ ಮೂಲಕ ಬೃಹತ್ ಯೋಜನೆಗಳಿಗೆ ಈ ಮೂಲಕ ಚಾಲನೆ ನೀಡಲಾಗಿದೆ.
ಮುಂಬರುವ ವರ್ಷದಲ್ಲಿ 1 ತಿಂಗಳ ಪರ್ಯಂತ ಕಾಶಿ ಜಗದ್ಗುರುಗಳು ಶ್ರೀಮಠದಲ್ಲಿ ವಾಸ್ತವ್ಯ ಹೂಡಿ ಕೋಟಿ ದೀಪೋತ್ಸವ, ಕೋಟಿ ಬಿಲ್ವಾರ್ಚನೆ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿ ಭಕ್ತರನ್ನು ಆಶೀರ್ವದಿಸಲಿದ್ದಾರೆ ಎಂಬ ಆಶಾ ಭಾವನೆ ವ್ಯಕ್ತಪಡಿಸಿದರು.
ಶಿವಮೊಗ್ಗದ ವಿಘ್ನೇಶ್ವರ ಹೆಲ್ತ್ ಕೇರ್‍ನ ಶ್ರೀಮತಿ ಲಲಿತಮ್ಮ ಕೋಂ.ಲಿಂ.ಕೊಟ್ರಯ್ಯ ಮತ್ತು ಮಕ್ಕಳು ಹಾಗೂ ಲಲಿತಮ್ಮ ಚನ್ನವೀರಯ್ಯ ಮತ್ತು ಮಕ್ಕಳು ಪ್ರಸಾದ ವಿನಿಯೋಗದ ವ್ಯವಸ್ಥೆ ಮಾಡಿದ್ದರು.
ಧರ್ಮಸಭೆಯಲ್ಲಿ ದಿಡಗೂರಿನ ಅಣ್ಣಪ್ಪ ಸ್ವಾಮಿ, ಹೆಚ್.ಎ.ಉಮಾಪತಿ, ಹೆಚ್.ಎ.ರಾಜಪ್ಪ, ಹೊನ್ನಾಳಿ ಮಲ್ಲೇಶಪ್ಪ, ಕೋರಿ ದೀಪು, ದಾಕ್ಷಾಯಣಮ್ಮ ನಿಂಬೆಕಾಯಿ ಮತ್ತಿತರರು ಉಪಸ್ಥಿತರಿದ್ದರು.
ಪತ್ರಕರ್ತ ಹೆಚ್.ಸಿ.ಮೃತ್ಯುಂಜಯ ಪಾಟೀಲ್, ಲಿಖಿತ ಜಪಯಜ್ಞ ಪುಸ್ತಕದ ಲೇಖಕರಾದ ಹೊನ್ನಾಳಿ ಮಲ್ಲೇಶಪ್ಪ ಅವರ ವ್ಯಕ್ತಿ ಪರಿಚಯ ಮಾಡಿದರು.
ಹೊನ್ನಾಳಿ ಮಲ್ಲೇಶಪ್ಪ ವಿರಚಿತ ಲಿಖಿತ ಜಪಯಜ್ಞ ಪುಸ್ತಕವನ್ನು ಕಾಶಿ ಜಗದ್ಗುರುಗಳು ಬಿಡುಗಡೆಗೊಳಿಸಿದರು.
ಚನ್ನಪ್ಪಸ್ವಾಮಿ ವಿದ್ಯಾಪೀಠದ ಕಾರ್ಯದರ್ಶಿ ಚನ್ನಯ್ಯ ಬೆನ್ನೂರ್‍ಮಠ ಸ್ವಾಗತಿಸಿ, ವ್ಯವಸ್ಥಾಪಕ ಎಂ.ಪಿ.ಎಂ.ಚನ್ನಬಸಯ್ಯ ನಿರೂಪಿಸಿದರು.