ಸರ್ಕಾರಿ ಪ್ರಥಮ ದರ್ಜೆ ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿನ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಜೆ.ಎಸ್. ವೀರೇಶ್
ದಾವಣಗೆರೆ, ಡಿ. 13 – ಗ್ರಾಮೀಣ ಕ್ರೀಡೆಗಳು ನಶಿಸುತ್ತಿರುವ ಇಂದಿನ ದಿನಗಳಲ್ಲಿ ಸರ್ಕಾರ ಜ್ಯೂಡೋ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲ್ಯಾಘನೀಯ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಜೆ.ಎಸ್. ವೀರೇಶ್ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಗುರುವಾರ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಆಶ್ರಯದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯ ಮಟ್ಟದ ಅಂತರಕಾಲೇಜ್, ಪುರುಷರ ಮತ್ತು ಮಹಿಳೆಯರ ಜ್ಯೂಡೋ ಸ್ಪರ್ಧೆ ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯ ಜ್ಯೂಡೋ ಪಟುಗಳ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾ ರ್ಥಿಗಳು ತಮ್ಮ ದೇಹ ಸದೃಢಗೊಳಿಸಿಕೊಳ್ಳುವ ಜೊತೆಗೆ ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಲು ಕ್ರೀಡೆಗಳು ಸಹಕಾರಿಯಾಗಿವೆ ಎಂದರು.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಮತ್ತು ದುಶ್ಚಟಗಳ ದಾಸರಾಗಿ ತಮ್ಮ ಬದುಕನ್ನೇ ನಾಶ ಮಾಡಿಕೊಳ್ಳುತ್ತಿದ್ದಾರೆ. ಯುವಕರು ಇಂತಹ ಕ್ರೀಡೆಗಳಲ್ಲಿ ಭಾಗವಹಿಸುವ ಜೊತೆಗೆ ಸದೃಢ ಆರೋಗ್ಯ ಕಾಪಾಡಿಕೊಂಡು, ಉನ್ನತ ಹುದ್ದೆಯನ್ನು ಪಡೆದು ತಂದೆ-ತಾಯಿಗಳನ್ನು ನೋಡಿಕೊಳ್ಳ ಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಭಾರಿ ಪ್ರಾಂಶುಪಾಲ ಕೊಟ್ರಪ್ಪ, ಜ್ಯೂಡೋ ಕ್ರೀಡೆ ಜಪಾನ್ ಮೂಲದ ಕ್ರೀಡೆಯಾಗಿದೆ. ಈ ಕ್ರೀಡೆಯಿಂದ ವಿದ್ಯಾರ್ಥಿಗಳ ದೇಹ ಬಲಿಷ್ಠಗೊಳ್ಳುವ ಜೊತೆಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಹೀಗಾಗಿ ಜ್ಯೂಡೋ ಕ್ರೀಡೆಯಲ್ಲಿ ಹೆಚ್ಚು ಹೆಚ್ಚು ಭಾಗವಹಿಸಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗದ ಪ್ರಭಾರಿ ನಿರ್ದೇಶಕರಾದ ಪ್ರೊ. ವೆಂಕಟೇಶ್, ಕ್ರೀಡಾಧಿಕಾರಿ ಡಾ. ಬಿ.ಎಚ್. ವೀರಪ್ಪ, ದಾವಣಗೆರೆ ವಿಶ್ವವಿದ್ಯಾನಿಲಯದ, ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಬಸವರಾಜ ತಹಶೀಲ್ದಾರ್, ಹಿರಿಯ ಪತ್ರಕರ್ತ ಎ.ಎನ್. ನಿಂಗಪ್ಪ, ಸಹಾಯಕ ಪ್ರಾಧ್ಯಾಪಕ ಪ್ರೊ.ಎಸ್. ವೆಂಕಟೇಶ್ ಬಾಬು, ವಾಣಿಜ್ಯಶಾಸ್ತ್ರ ವಿಭಾಗದ, ಸಹಾಯಕ ಪ್ರಾಧ್ಯಾಪಕ ಪ್ರೊ. ಶಂಭುಲಿಂಗಪ್ಪ ನಲ್ಲನವರ್, ಪರಿಸರ ವಿಜ್ಞಾನ, ಆಂಗ್ಲಭಾಷೆ ಸಹಾಯಕ ಪ್ರಾಧ್ಯಾಪಕ ಪ್ರೊ. ಜಿ. ಮಂಜುನಾಥ, ಕೊಟ್ರಪ್ಪ ಸೇರಿದಂತೆ ಇನ್ನಿತರರಿದ್ದರು.