ಜಿಗಳಿಯಲ್ಲಿ `ನಮ್ಮ ಸಂಕಲ್ಪ ವಿಕಸಿತ ಭಾರತ’ ಕಾರ್ಯಕ್ರಮ
ಮಲೇಬೆನ್ನೂರು, ಡಿ.13- ಜಿಗಳಿ ಗ್ರಾಮದ ಗ್ರಾ.ಪಂ. ಕಚೇರಿ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ `ನಮ್ಮ ಸಂಕಲ್ಪ ವಿಕಸಿತ ಭಾರತ’ ಪ್ರಚಾರ ಕಾರ್ಯಕ್ರಮವನ್ನು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ರೂಪಾ ಸೋಮಶೇಖರ್ ಉದ್ಘಾಟಿಸಿದರು.
ಸಭೆಯ ಆರಂಭದಲ್ಲಿ `ನಮ್ಮ ಸಂಕಲ್ಪ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶ’ ಎಂಬ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ಕರ್ನಾಟಕ ಬ್ಯಾಂಕಿನ ಜಿಗಳಿ ಶಾಖೆಯ ವ್ಯವಸ್ಥಾಪಕ ಗಂಗಾಧರ್ ಅವರು, ಪ್ರಾಸ್ತಾವಿಕವಾಗಿ ಬ್ಯಾಂಕಿನಿಂದ ಸಿಗುವ ಮತ್ತು ಸರ್ಕಾರದಿಂದ ಬ್ಯಾಂಕುಗಳ ಮೂಲಕ ಸಿಗುವ ಸೌಲಭ್ಯಗಳನ್ನು ಜನರಿಗೆ ತಿಳಿಸಿದರು.
ದಾವಣಗೆರೆಯ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮಲ್ಲಿಕಾರ್ಜುನ್ ಮಾತನಾಡಿ, ಮಣ್ಣು ಪರೀಕ್ಷೆ ಆಧಾರದ ಮೇಲೆ ರಸಗೊಬ್ಬರವನ್ನು ಕಡಿಮೆ ಪ್ರಮಾಣದಲ್ಲಿ ಬಳಸಬೇಕು ಮತ್ತು ಹಸಿರೆಲೆ ಗೊಬ್ಬರಕ್ಕೆ ರೈತರು ಒತ್ತು ಕೊಡಬೇಕೆಂದರು. ತಮಗೆ ಬೇಕಾದ ಬೀಜಗಳನ್ನು ರೈತರೇ ಉತ್ಪಾದನೆ ಮಾಡಿಕೊಳ್ಳಬೇಕೆಂದ ಮಲ್ಲಿಕಾರ್ಜುನ್ ಅವರು, ದ್ರೋಣ್ ಮೂಲಕ ಬೆಳೆಗಳಿಗೆ ಔಷಧಿ ಸಿಂಪರಣೆ ಮಾಡುವ ಬಗ್ಗೆ ತಿಳಿಸಿ, ಪ್ರಾತ್ಯಕ್ಷಿಕೆ ತೋರಿಸಿದರು.
ಚನ್ನಬಸಪ್ಪ ಬಿರಾದಾರ್ ಮಾತನಾಡಿ, ಬೆಳೆಗ ಳಿಗೆ ಅತಿಯಾಗಿ ಯೂರಿಯಾ ಗೊಬ್ಬರ ಬಳಕೆ ಯಿಂದ ಮನುಷ್ಯರಿಗೆ ಕ್ಯಾನ್ಸರ್ ಕಾಯಿಲೆ ಬರುವ ಸಾಧ್ಯತೆ ಹೆಚ್ಚಿದೆ. ಅನಾವಶ್ಯಕವಾಗಿ ಯೂರಿಯಾ ಗೊಬ್ಬರವನ್ನು ಬಳಸಬೇಡಿ ಎಂದರು.
ಹೊಳೆಸಿರಿಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ತಿಪ್ಪೇಸ್ವಾಮಿ ಅವರು, ಆರೋಗ್ಯದ ಬಗ್ಗೆ ಹಾಗೂ ಆರೋಗ್ಯ ಕೇಂದ್ರಗಳಿಂದ ಸಿಗುವ ಚಿಕಿತ್ಸಾ ಸೌಲಭ್ಯಗಳ ಬಗ್ಗೆ ತಿಳಿಸಿದರು.
ಗ್ರಾಮದ ಮುಖಂಡ ಹಾಗೂ ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿ.ಆನಂದಪ್ಪ ಮಾತ ನಾಡಿ, ನಮ್ಮ ದೇಶ ಪ್ರಗತಿ ಪಥ ದಲ್ಲಿದ್ದು, ಸರ್ಕಾರದ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ಸಿಗುವ ಮೂಲಕ ಬಡವರ ಪ್ರಗತಿಯೂ ಆಗಬೇಕೆಂದರು. ಫಲಾನುಭವಿ ಮಠದ ರಾಜಯ್ಯ ಮಾತನಾಡಿದರು.
ಆರ್‌ಸಿಎಫ್ ಅಧಿಕಾರಿ ಕುಲಭೂಷಣ್ ಮಾತನಾಡಿ, ಕೇಂದ್ರ ಸರ್ಕಾರ ದೇಶದಲ್ಲಿ ಈವರೆಗೆ 11.8 ಕೋಟಿ ರೈತರಿಗೆ ವಾರ್ಷಿಕ 6 ಸಾವಿರ ರೂ.ಗಳಂತೆ 2.6 ಲಕ್ಷ ಕೋಟಿ ರೂ. ನೆರವು ನೀಡಿದೆ ಎಂದರು.
ಗ್ರಾ.ಪಂ. ಉಪಾಧ್ಯಕ್ಷ ವೈ.ಚೇತನ್‌ಕುಮಾರ್, ಗ್ರಾ.ಪಂ. ಸದಸ್ಯರಾದ ಡಿ.ಎಂ.ಹರೀಶ್, ಕೆ.ಜಿ.ಬಸವರಾಜ್, ಮುಖಂಡರಾದ ನಾಗಸನಹಳ್ಳಿ ಮಹೇಶ್ವರಪ್ಪ, ಬಿ.ಸೋಮಶೇಖರಚಾರಿ, ಕೆ.ಎಸ್.ನಂದ್ಯಪ್ಪ, ಎಕ್ಕೆಗೊಂದಿ ರುದ್ರಗೌಡ, ಎಂ.ಆರ್.ನಾಗರಾಜ್, ವಿಜಯಭಾಸ್ಕರ್, ಜಿಎಫ್‌ಜಿ ಮ್ಯಾನೇಜರ್ ತೇಜಸ್ ಪಟೇಲ್, ಡಿಡಿ ಚಂದನದ ತಾರಾನಾಥ್ ಹಾಗೂ ಇತರರು ಭಾಗವಹಿಸಿದ್ದರು.
ಆರ್ಥಿಕ ಸಾಕ್ಷರತಾ ಸಲಹೆಗಾರ ಉಜ್ಜಪ್ಪ ಸ್ವಾಗತಿಸಿದರು. ಗ್ರಾಮದ ಜಿ.ಪಿ.ಹನುಮಗೌಡ ವಂದಿಸಿದರು.