`ಕಾವ್ಯ ಕನ್ನಿಕೆ’ ಕವನ ಸಂಕಲನದ ಬಿಡುಗಡೆ ಸಮಾರಂಭದಲ್ಲಿ ಪಾಂಡೋಮಟ್ಟಿ ವಿರಕ್ತಮಠದ ಡಾ. ಗುರುಬಸವ ಸ್ವಾಮೀಜಿ
ದಾವಣಗೆರೆ, ಡಿ. 13- ಹಣ, ಅಧಿಕಾರದಿಂದ ಶಾಂತಿ, ನೆಮ್ಮದಿ, ಆನಂದ ಸಾಧ್ಯವಿಲ್ಲ. ಬದಲಿಗೆ ಯೋಗ, ಧ್ಯಾನ ಮತ್ತು ಅಧ್ಯಾತ್ಮದಿಂದ ಮಾತ್ರ ಸಾಧ್ಯ ಎಂದು ಪಾಂಡೋಮಟ್ಟಿ ವಿರಕ್ತಮಠದ ಡಾ. ಗುರುಬಸವ ಸ್ವಾಮೀಜಿ ಹೇಳಿದರು.
ನಗರದ ಶ್ರೀಮತಿ ರಾಜನಹಳ್ಳಿ ಜಾನುಬಾಯಿ ಶ್ರೀನಿವಾಸಮೂರ್ತಿ ಯವರ ಧರ್ಮಶಾಲೆಯಲ್ಲಿ ಏರ್ಪಡಿಸಿದ್ದ ಲಿಂ. ಜಿ.ಕೆ. ಕಾವ್ಯ ಅವರ ಪ್ರಥಮ ವರ್ಷದ ಪುಣ್ಯಾರಾಧನೆ, ಸರ್ವ ಶರಣ ಸಮ್ಮೇಳನ ಹಾಗೂ `ಕಾವ್ಯ ಕನ್ನಿಕೆ’ ಕವನ ಸಂಕಲನ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಶಾಂತಿ, ನೆಮ್ಮದಿ, ಧ್ಯಾನ ನಮ್ಮ ಜೀವನದ ಪರಮ ಧ್ಯೇಯವಾಗಬೇಕು. ನಿತ್ಯ ಸಮಯ ನಿಗದಿ ಮಾಡಿಕೊಂಡು, ಧ್ಯಾನದಲ್ಲಿ ಮಗ್ನರಾದರೆ ಸಾಕು ಅದರಲ್ಲಿ ಸಿಗುವ ಶಾಂತಿ, ನೆಮ್ಮದಿ, ಆನಂದ ಬೇರೆ ಯಾವುದರಲ್ಲೂ ಸಿಗಲಾರದು ಎಂದರು.
ಕಾಯ ನಶ್ವರ, ಕಾಯಕ ಶಾಶ್ವತ. ಲಿಂ. ಕಾವ್ಯ ಅವರ ತಾಯಿ ಕಮಲಮ್ಮ ಅವರು ತನ್ನ ಮಗಳ ಹೆಸರಿನಲ್ಲಿ ಮಾಡುತ್ತಿರುವ ಅನಾಥರ, ಸಮಾಜ ಸೇವಾ ಕಾರ್ಯಗಳು ಮಾದರಿಯೇ ಸರಿ. ಇದೇ ವೇಳೆ ಮಗಳ ಪುತ್ಥಳಿ ಅನಾವರಣ ಹಾಗೂ `ಕಾವ್ಯ ಕನ್ನಿಕೆ’ ಕೃತಿ ಬಿಡುಗಡೆ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆಂದು ಹೇಳಿದರು.
ಶ್ರೀ ಜಡೇ ಸಿದ್ಧ ಶಿವಯೋಗೀಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿ ಮಾತನಾಡಿ, ಮನುಷ್ಯ ಜೀವನದಲ್ಲಿ ಸಾವು-ನೋವು, ನಲಿವುಗಳು ಸಹಜ. ಆದರೆ ಅವೆಲ್ಲವುಗಳನ್ನು ಸಹಿಸಿಕೊಂಡು, ಸಾಧಿಸು ವುದೇ ನಿಜವಾದ ಸಾರ್ಥಕ ಜೀವನ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಮಾತನಾಡಿ, ಅಧ್ಯಾತ್ಮದಿಂದ ನಾವು ಸಂಸ್ಕಾರವಂತರಾಗಲು ಸಾಧ್ಯವಿದೆ. ಯೋಗ, ಧ್ಯಾನವನ್ನು ನಿತ್ಯ ಅಳವಡಿಸಿಕೊಂಡರೆ ಮನುಷ್ಯ ಶಾಂತಿ, ನೆಮ್ಮದಿ ಜೀವನ ನಡೆಸಲು ಸಾಧ್ಯವಿದೆ ಎಂದು ಪ್ರತಿಪಾದಿಸಿದರು.
ಹಿರಿಯ ಸಾಹಿತಿ ಎಸ್.ಟಿ. ಶಾಂತಗಂಗಾಧರ ಮಾತನಾಡಿ, ಮಗಳ ಕನಸನ್ನು ನನಸು ಮಾಡುವ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ `ಕಾವ್ಯ ಕನ್ನಿಕೆ’ ಎಂಬ ಕೃತಿ ಲೋಕಾರ್ಪಣೆ ಮಾಡುವ ತಾಯಿ ಜೀವನದ ಸಾರ್ಥಕತೆ ಮೆರೆದಿದ್ದಾರೆಂದು ತಿಳಿಸಿದರು.
ಕೃತಿ ಬಿಡುಗಡೆ ಮಾಡಿದ ಹುಬ್ಬಳ್ಳಿಯ ಪತ್ರಕರ್ತ ರಾಜೇಂದ್ರ ಪಾಟೀಲ್ ಮಾತನಾಡಿ, `ಕಾವ್ಯ ಕನ್ನಿಕೆ’ ಕವನ ಸಂಕಲನದ ಕರ್ತೃ ಲಿಂ. ಕಾವ್ಯ ಅವರು ಇಹಲೋಕ ತ್ಯಜಿಸಿದ್ದರೂ ಅವರ ತಾಯಿಯ ಪರಿಶ್ರಮದ ಫಲವಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ಕೃತಿಯ ಮೂಲಕ ಅಮರರಾಗಿದ್ದಾರೆ. ಇದೊಂದು ತಾಯಿ-ಮಗಳ ಅನನ್ಯ ಪ್ರೇಮ ಕಾವ್ಯ ಎಂದು ಬಣ್ಣಿಸಿದರು.
ಚಿತ್ರದುರ್ಗದ ಬ್ರಹ್ಮಾಕುಮಾರಿ ಈಶ್ವರೀಯ ವಿವಿ ಸಂಚಾಲಕರಾದ ರಶ್ಮಿ ಮಾತನಾಡಿ, ಒಂದು ಆತ್ಮದ ಕನಸಿನ ನೆನವರಿಕೆಗೆ ಹಲವು ಆತ್ಮಗಳು ಮಾಡುವ ಪರಿಶುದ್ಧ ಸಂಕಲ್ಪ ಸಿದ್ಧಿಯನ್ನು ತಂದುಕೊಡುತ್ತದೆ ಎಂಬುದಕ್ಕೆ ಕಮಲಮ್ಮ ಉದಾಹರಣೆಯಾಗಿದ್ದಾರೆ ಎಂದರು.
ಕದಳಿ ವೇದಿಕೆ ಮಹಿಳೆಯರು ವಚನ ಗಾಯನ ನಡೆಸಿಕೊಟ್ಟರು. ನಿವೃತ್ತ ಮುಖ್ಯ ಶಿಕ್ಷಕಿ, ಕಾವ್ಯ ಅವರ ತಾಯಿ ಜಿ.ಎನ್. ಕಮಲಮ್ಮ, ಗೋಪನಾಳು ಕರಿಬಸಪ್ಪ, ಕೆಎಂಎಫ್ ನಿರ್ದೇಶಕ ಪಾಲಾಕ್ಷಪ್ಪ, ಶ್ರೀಮತಿ ಸುಧಾ, ಗಂಗಾಧರ ಬಿ.ಎಲ್. ನಿಟ್ಟೂರು ಮತ್ತಿತರರು ಉಪಸ್ಥಿತರಿದ್ದರು.