ಯಲವಟ್ಟಿಯಲ್ಲಿನ ಸತ್ಸಂಗದಲ್ಲಿ ಪ್ರವಚನಕಾರ ಸಿರಿಗೆರೆ ಸಿದ್ದೇಶ್ ಅಭಿಮತ
ಮಲೇಬೆನ್ನೂರು, ಡಿ.12- ಸಿದ್ದಾರೂಢರು ಭಗವಂತನ ಪರಿಪೂರ್ಣ ಅವತಾರವಾಗಿದ್ದು, ಸಿದ್ದಾರೂಢರು ಅವತರಿಸಿದ ಅವತಾರಗಳನ್ನು ಬೇರೆ ಯಾರೂ ಅವತರಿಸಿಲ್ಲ ಎಂದು ಪ್ರವಚನಕಾರ ಹೊಳೆಸಿರಿಗೆರೆಯ ಡಿ.ಸಿದ್ದೇಶ್ ಹೇಳಿದರು.
ಅವರು, ಮಂಗಳವಾರ ಯಲವಟ್ಟಿಯ ಶ್ರೀ ಗುರುಸಿದ್ದಾಶ್ರಮದಲ್ಲಿ ಹಮ್ಮಿಕೊಂಡಿದ್ದ ಅಮಾವಾಸ್ಯೆ ಸತ್ಸಂಗ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ದೃಢವಾದ ಶ್ರದ್ಧೆ, ನಂಬಿಕೆ, ವಿಶ್ವಾಸ ಇದ್ದಲ್ಲಿ ಮಾತ್ರ ಭಗವಂತ ಒಲಿಯುತ್ತಾನೆ. ಅಂತಹ ಎಲ್ಲಾ ಶಕ್ತಿಗಳನ್ನು ಸಿದ್ದಾರೂಢರು ಹೊಂದಿದ್ದರು. ಹಾಗಾಗಿ ಅವರಿಗೆ ಭಗವಂತ ಒಲಿದನು. ಸತ್ಸಂಗ, ಭಜನೆಗೂ ಭಗವಂತನನ್ನು ಆಕರ್ಷಿಸುವ ಶಕ್ತಿ ಇದೆ ಎಂದು ಸಿದ್ದೇಶ್ ಹೇಳಿದರು.
ಹುಣಸೇಕಟ್ಟೆಯ ಶ್ರೀ ಸಿದ್ದಾರೂಢ ಆಶ್ರಮದ ಶ್ರೀ ಕೃಷ್ಣಾನಂದ ಭಾರತಿ ಸ್ವಾಮೀಜಿ ಮಾತನಾಡಿ, ವಿಜ್ಞಾನದಿಂದ ಸುಖಕ್ಕಿಂತ ತೊಂದರೆಯೇ ಹೆಚ್ಚಾಗಿದೆ. ಅಜ್ಞಾನದಲ್ಲಿರುವವರನ್ನು ಸುಜ್ಞಾನದೆಡೆಗೆ ಕರೆ ತರುವ ಶಕ್ತಿ ಸತ್ಸಂಗಕ್ಕಿದೆ ಎಂದರು.
ತನುವನ್ನು ದಂಡಿಸಲು ಸಾಧ್ಯವಿಲ್ಲ. ಹಾಗಾಗಿ ಮಹಾಶಕ್ತಿ ಇರುವ ಧ್ಯಾನ, ಸತ್ಸಂಗವನ್ನು ಅಳವಡಿಸಿ ಕೊಳ್ಳಿ ಎಂದು ಸ್ವಾಮೀಜಿ ಭಕ್ತರಿಗೆ ತಿಳಿಸಿದರು.
ಗುರುನಾಥ ಮಸಲಾಪುರ ಮಾತನಾಡಿ, ನಿಜವಾದ ಭಕ್ತಿಗೆ ಮಾತ್ರ ಗುರುದೇವ ಒಲಿಯುತ್ತಾನೆ ಎಂದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಶ್ರೀ ಯೋಗಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಧಾರಾವಾಹಿಗಳನ್ನು ನೋಡುವುದರಿಂದ ಆ ಕ್ಷಣಕ್ಕೆ ಮಾತ್ರ ನಿಮಗೆ ಖುಷಿ ಸಿಗಬಹುದು. ಆದರೆ, ನಿಮ್ಮನ್ನು ನೀವು ಪ್ರೀತಿಸುವುದರಿಂದ, ಅರ್ಪಿಸಿಕೊಳ್ಳು ವುದರಿಂದ ಸದಾ ಖುಷಿ, ತೃಪ್ತಿ ಸಿಗುತ್ತದೆ.
ಸಿದ್ದಾರೂಢರಲ್ಲಿ ಭಕ್ತಿ ಹೊಂದಿದವರು ನಿಜವಾದ ಪುಣ್ಯವಂತರು, `ಸಿದ್ದಾರೂಢರ ಜೋಳಿಗೆ ಊರಿಗೆಲ್ಲಾ ಹೋಳಿಗೆ’, `ಸಿದ್ದಾರೂಢರ ಅಂಗಾರ ಜಗತ್ತಿಗೆಲ್ಲ ಬಂಗಾರ’ ಎಂಬ ಮಾತು ಎಂದಿಗೂ ಸತ್ಯ ಎಂದರು.
ಸರ್ಕಾರದಿಂದ `ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿ’ ಪಡೆದಿರುವ ಯಲವಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಅಭಿನಂದಿಸಿದ ಶ್ರೀಗಳು, ಸಂಘದ ಸಿಇಓ ಶೇಖರಪ್ಪ ಮತ್ತು ನಾಗರಾಜ್ ಅವರನ್ನು ಮತ್ತು `ಡಾ. ಬಿ.ಆರ್.ಅಂಬೇಡ್ಕರ್ ಸದ್ಭಾವನಾ ಪ್ರಶಸ್ತಿ’ ಪಡೆದಿರುವ `ಜನತಾವಾಣಿ’ ಪತ್ರಕರ್ತ ಜಿಗಳಿ ಪ್ರಕಾಶ್ ಅವರನ್ನೂ ಸನ್ಮಾನಿಸಿ, ಗೌರವಿಸಿದರು.
ಯಲವಟ್ಟಿ ಗ್ರಾ.ಪಂ. ಮಾಜಿ ಸದಸ್ಯ ಹೊಸಮನಿ ಮಲ್ಲಪ್ಪ ಅವರು ಈ ದಿನದ ದಾಸೋಹ ದಾನಿಗಳಾಗಿದ್ದರು.
ನಿವೃತ್ತ ಶಿಕ್ಷಕ ಜಿ.ಬಸಪ್ಪ ಮೇಷ್ಟ್ರು, ನಿವೃತ್ತ ಯೋಧ ಶಿವಕುಮಾರ್, ಯೋಧ ಆನಂದಯ್ಯ, ಗ್ರಾಮದ ಎ.ಸುರೇಶ್, ಡಿ.ರಾಜಪ್ಪ, ಕೆ.ಮಂಜಪ್ಪ, ವೈ.ಸುರೇಶ್ ಶ್ರೇಷ್ಠಿ, ಡಿ.ಚನ್ನವೀರಪ್ಪ, ಎ.ಜಗದೀಶ್, ಹಲಸಬಾಳು ರಾಜು, ಎಂ.ಜಯ್ಯಣ್ಣ, ಕುಂಬಳೂರಿನ ಎಂ.ವಾಸುದೇವಮೂರ್ತಿ, ಕೆ.ಕುಬೇರಪ್ಪ, ಹೆಚ್.ಎಂ.ಸದಾಶಿವ, ಸಿರಿಗೆರೆಯ ಮಾಗೋಡ್ ಈಶ್ವರಪ್ಪ, ರೇವಣಸಿದ್ದಯ್ಯ, ಹನುಮಂತಗೌಡ, ಜಿಗಳಿಯ ಕೆ.ಎಸ್.ಮಾಲತೇಶ್, ರಂಗಪ್ಪ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.