ಮಲೇಬೆನ್ನೂರು, ಡಿ. 12 – ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ರೈತರು ಬೆಳೆ ಬೆಳೆಯದೆ ತತ್ತರಿಸಿ ಹೋಗಿದ್ದು, ಬೆಳೆ ಬೆಳೆಯದ ಮತ್ತು ಬೆಳೆ ಹಾಳಾಗಿರುವ ರೈತರ ಪ್ರತಿ ಎಕರೆಗೆ 35 ಸಾವಿರ ರೂ. ಪರಿಹಾರ ನೀಡುವಂತೆ ರೈತ ಸಂಘದ ರಾಜ್ಯ ಕಾರ್ಯಧ್ಯಕ್ಷ ಬಲ್ಲೂರು ರವಿಕುಮಾರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅವರು ಮಂಗಳವಾರ ಪಟ್ಟಣದ ನೀರಾವರಿ ಇಲಾಖೆಯಿಂದ ನಾಡ ಕಛೇರಿವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿ ಉಪತಹಶೀಲ್ದಾರ್ ಆರ್. ರವಿ ಅವರಿಗೆ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಪತ್ರ ಸಲ್ಲಿಸಿ ಮಾತನಾಡಿದರು. 1971ರಿಂದ 2023ರವರೆಗೂ ಬಗರ ಹುಕ್ಕುಂ ಸಾಗುವಳಿ ಮಾಡಿದ ಕಲಂ ನಂ. 50, 53 ಮತ್ತು 57ರ ಅಡಿಯಲ್ಲಿನ ಅರ್ಜಿದಾರರಿಗೆ ಹಾಗೂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಣೆ ಮತ್ತು 94ಸಿ ಅಡಿಯಲ್ಲಿ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿ ಕೊಂಡವರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿದರು.
ದೇಶದ 140 ಕೋಟಿ ಜನರಿಗೆ ಆಹಾರ ಉತ್ಪಾದನೆ ಮಾಡಿ ತಮ್ಮ ಜೀವನವನ್ನು ತ್ಯಾಗ ಮಾಡಿರುವ 60 ವರ್ಷ ಮೇಲ್ಪಟ್ಟ ವೃದ್ಧ ರೈತರಿಗೆ 5 ಸಾವಿರ ಪಿಂಚಣಿ ನೀಡುವಂತೆ ಮತ್ತು ರೈತರನ್ನು ಮದುವೆಯಾಗುವ ವಧುವಿಗೆ ಸರ್ಕಾರಿ ಹುದ್ದೆಯಲ್ಲಿ ಶೇ.10ರಷ್ಟು ಉದ್ಯೋಗ ಮಿಸಲು ನೀಡುವಂತೆಯೂ ಬಲ್ಲೂರು ರವಿಕುಮಾರ್ ಈ ವೇಳೆ ಸರ್ಕಾರಕ್ಕೆ ಆಗ್ರಹ ಪಡಿಸಿದರು.
ಇದೇ ತಿಂಗಳು 23ರಂದು ಬೆಂಗಳೂರಿನಲ್ಲಿ ನಡೆಯುವ ರೈತರ ಮಹಾ ಅಧಿವೇಶನಕ್ಕೆ ರೈತರು ಹಾಗೂ ರೈತ ಸಂಘಟನೆಗಳು ಭಾಗವಹಿಸಿವಂತೆ ರೈತರು ಮನವಿ ಮಾಡಿದರು. ರೈತ ಸಂಘದ ಪ್ರಧಾನ ಕಾರ್ಯದರ್ಶಿ ಎಸ್. ಮಂಜುನಾಥ್, ನಂದಿತಾವರೆ ಮುರುಗೇಂದ್ರಯ್ಯ, ಪೂಜಾರ್ ಅಂಜಿನಪ್ಪ, ಮತ್ತಿತರರು ಈ ವೇಳೆ ಹಾಜರಿದ್ದರು.