ಶರಣರು ಕಂಡ ಶಿವ ಪ್ರವಚನ ಮಾಲೆಯಲ್ಲಿ ಡಾ.ಬಸವರಾಜ ರಾಜಋಷಿ
ಶಿವಯೋಗದ ಪ್ರಾತ್ಯಕ್ಷಿಕೆ
ನಾಳೆ ಬುಧವಾರ ಬೆಳಿಗ್ಗೆ 6 ರಿಂದ 7ರವರೆಗೆ ಪ್ರವಚನ ನಡೆಯುತ್ತಿರುವ ಸ್ಥಳದಲ್ಲಿ ಶಿವಯೋಗದ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿದ್ದು, ಡಾ. ಬಸವರಾಜ ರಾಜಋಷಿ ನಡೆಸಿಕೊಡುವರು. ಆಸಕ್ತರು ಭಾಗವಹಿಸಬಹುದು.
ದಾವಣಗೆರೆ, ಡಿ.11- ಓಂ ನಮಃ ಶಿವಾಯ ಎಂಬುದೇ ಆದಿ ಮಂತ್ರ, ಬೀಜ ಮಂತ್ರ, ಮೂಲ ಮಂತ್ರ. ಅದಕ್ಕೆ ಸಮವಾದ ಮಂತ್ರ ಬೇರೊಂದಿಲ್ಲ ಎಂದು ಬಸವಾದಿ ಶಿವಶರಣರು ತಿಳಿಸಿಕೊಟ್ಟಿರುವ ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಹುಬ್ಬಳ್ಳಿ ಉಪ ವಲಯದ ನಿರ್ದೇಶಕ ರಾಜಯೋಗಿ ಬ್ರಹ್ಮಾಕುಮಾರ ಡಾ.ಬಸವರಾಜ ರಾಜಋಷಿ ಹೇಳಿದರು.
ಇಲ್ಲಿನ ವಿದ್ಯಾನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾ ಲಯದ ಆವರಣದಲ್ಲಿ ನಡೆಯುತ್ತಿರುವ `ಶರಣರು ಕಂಡ ಶಿವ’ ಪ್ರವಚನ ಮಾಲೆ ಯ 8ನೇ ದಿನವಾದ ಸೋಮವಾರದ ಸಮಾರಂಭದಲ್ಲಿ ಅವರು ಪ್ರವಚನ ನೀಡಿದರು.
`ಓಂ’ ಎಂದರೆ ನಾನು ಆತ್ಮ, `ನಮಃ’ ಎಂದರೆ ನಮಸ್ಕರಿಸುತ್ತಿದ್ದೇವೆ. `ಶಿವಾಯ’ ಎಂದರೆ ಶಿವನಿಗೆ ಎಂದರ್ಥ ಎಂದು ಮಂತ್ರದ ಕುರಿತು ಅವರು ವಿಶ್ಲೇಷಿಸಿದರು.
`ಓಂ ನಮಃ ಶಿವಾಯ’ ಮಂತ್ರವನ್ನು ಚೆನ್ನಾಗಿ ಅರ್ಥ ಮಾಡಿ ಕೊಂಡಿರುವವರು ಪಂಚಾಕ್ಷರಿ ಮಂತ್ರವನ್ನೂ ಹೇಳಬಹುದು. ಏಕೆಂದರೆ ನಾನು ಆತ್ಮ ಆಗಿದ್ದೇನೆ ಎಂಬರ್ಥದ `ಓಂ’ ಅಕ್ಷರ ಬಿಟ್ಟು ಅನುಭಾವಿಕ ಸಿದ್ಧಾಂತದಲ್ಲಿ `ಶಿವಾಯ ನಮಃ’ ಎಂದು ಹೇಳಬಹುದು ಎಂದರು.
ಇಷ್ಟಲಿಂಗ ರೂಪದ ಶಿವಲಿಂಗವು ನಮ್ಮೆಲ್ಲರ ಇಚ್ಛೆ ಮತ್ತು ಅಭಿಲಾಷೆಗಳನ್ನು ಪೂರೈಸುತ್ತದೆ ಎಂಬುದನ್ನು ವೇದಗಳ ಮೂಲಕ ಈಗಾಗಲೇ ಹೇಳಲಾಗಿದೆ. ಆದ್ದರಿಂದ ಅಂಗದ ಮೇಲೆ ಕಟ್ಟಿಕೊಂಡ ಲಿಂಗ ಶಿವಲಿಂಗ. ಬಸವಾದಿ ಶರಣರು ಕೊಟ್ಟ ಶಿವಲಿಂಗ. ಅದು ಸ್ಥಾವರ ಲಿಂಗವೇ ಇರಬಹುದು. ಇಷ್ಟಲಿಂಗವೇ ಇರಬಹುದು ಅದಕ್ಕೆ ಓಂ ನಮಃ ಶಿವಾಯ ಎಂಬುದು ಒಂದೇ ಮಂತ್ರ. ಈ ಮಂತ್ರ ಬಸವಾದಿ ಶರಣರಿಗೂ ಪೂರ್ವದಲ್ಲಿ ಇದ್ದ ಮಂತ್ರ ಎಂದು ಹೇಳಿದರು.
ಮನಸ್ಸಿಂದ ಅಥವಾ ಶಬ್ಧಗಳಿಂದಾಗಲೀ ಉಚ್ಛರಿಸುವ ಶಬ್ಧ `ಮಂತ್ರ’ ಹಾಗೂ ಪರಮಜ್ಯೋತಿ ಸ್ವರೂಪನಾದ ಪರಮಾತ್ಮನನ್ನು ಯತಾರ್ಥವಾಗಿ ಅರ್ಥ ಮಾಡಿಕೊಂಡು ಜೀವನದಲ್ಲಿ ಅನುಷ್ಠಾನಗೊಳಿಸುವುದೇ `ತಂತ್ರ’ ಇವೆರಡೂ ನಮಗೆ ಅನುಭಾವಕ್ಕೆ ಬರಬೇಕು ಎಂಬುದು ಶಿವಶರಣರ ಧ್ಯೇಯ ಎಂದರು.
ನಮಗೆ ಬೇಕಾದ ಮಂತ್ರಗಳನ್ನು ಸೃಷ್ಟಿಸಿಕೊಳ್ಳದೆ, ಜಪ ಮಂತ್ರ, ತಪ ಮಂತ್ರ ಒಂದೇ ಮಂತ್ರ. ಅಂತರಂಗದಲ್ಲೂ, ಬಹಿರಂಗದಲ್ಲೂ
`ಓಂ ನಮಃ ಶಿವಾಯ’ ಒಂದೇ ಸೂಕ್ತ ಮಂತ್ರ. ಆದರೆ ಆಸೆ, ಅಭಿಲಾಷೆಗಳನ್ನು ಇಟ್ಟುಕೊಂಡು ಈ ಮಂತ್ರ ಜಪಿಸಬಾರದು. ಶಿವನೇ ನೀನು ನನಗೆ ಬೇಕು ಎಂಬ ಭಾವನೆಯಿಂದ ಜಪಿಸಬೇಕು. ಮಂತ್ರದ ಮೂಲಕ ಶಿವನನ್ನೇ ವಶಪಡಿಸಿಕೊಂಡ ಮೇಲೆ ಬೇರೆಲ್ಲಾ ಇಷ್ಟಾರ್ಥಗಳೂ ಸಿದ್ಧಿಸಿದಂತೆಯೇ. ಆದ್ದರಿಂದ ಇದು ಪರಮಾತ್ಮನನ್ನೇ ಒಲಿಸಿಕೊಳ್ಳುವ ಹಾಗೂ ಜನ್ಮ ಜನ್ಮದ ಶ್ರೇಯೋಭಿವೃದ್ಧಿಗಾಗಿ ಕೊಟ್ಟ ಮಂತ್ರ ಎಂದು ಪ್ರತಿಪಾದಿಸಿದರು.
ಸರಿಯಾದ ಜ್ಞಾನ ಪ್ರಾಪ್ತಿಯಾಗದ ಕಾರಣ ಅನ್ಯ ಮಂತ್ರಗಳನ್ನು ಜಪಿಸುತ್ತಿದ್ದೇವೆ. ಇದು ಪರಮಪೂಜ್ಯನನ್ನು ಬಿಟ್ಟು ಪೂಜಾರಿಗಳನ್ನು ಜಪಿಸಿದಂತೆ ಎಂದು ಹೇಳಿದರು.
ಸದಾ ಕಾಲಕ್ಕೆ ಆತ್ಮ ಪರಮಾತ್ಮರ ಅನುಸಂಧಾನ ಮನಸ್ಸಿನಲ್ಲಿ ಮಾಡುವುದೇ ಸತ್ಯ ಶಿವಯೋಗ ಎಂದು ಪ್ರತಿಪಾದಿಸಿದರು.
ನೇರ ಪ್ರಸಾರ : ಸುದೀರ್ಘ ಒಂದು ತಿಂಗಳ ಕಾಲ ಪ್ರತಿದಿನ ಸಂಜೆ 6.30 ರಿಂದ 7.30ರವರೆಗೆ 1 ಗಂಟೆ ಸಮಯ ನಡೆಯುವ ಈ ಪ್ರವಚನದ ನೇರ ಪ್ರಸಾರ ವೀಕ್ಷಿಸಲು ಯು ಟ್ಯೂಬ್ ಚಾನಲ್ಲಾದ ರಾಜಯೋಗ ಟಿವಿ ಕನ್ನಡದಲ್ಲಿ (youtube/rajayogatvkannada) ವೀಕ್ಷಿಸಬಹುದು.