ಹೊನ್ನಾಳಿ, ಡಿ.11-ಹಿರೇಕಲ್ಮಠದಲ್ಲಿ ನಾಳೆ ದಿನಾಂಕ 12ರ ಮಂಗಳವಾರ ಕಾರ್ತಿಕ ಮಾಸದ ಚಟ್ಟಿ ಅಮಾವಾಸ್ಯೆ ದಿನದಂದು ಮಹಾಪೂಜೆ, ಕದಳಿ ಕಾರ್ತಿಕ ಲಕ್ಷ ದೀಪೋತ್ಸವ, ಶ್ರೀ ಗುರು ಚನ್ನೇಶ್ವರ ಬೆಳ್ಳಿ ರಥೋತ್ಸವ, ಧರ್ಮಸಭೆ ಹಾಗೂ ಸಂಸ್ಕೃತಿ-ಸಂಸ್ಕಾರ ಕಾರ್ಯಕ್ರಮಗಳು ಜರುಗುವವು ಎಂದು ಹಿರೇಕಲ್ಮಠದ ಶ್ರೀ ಒಡೆಯರ್ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ಹಿರೇಕಲ್ಮಠದಲ್ಲಿ ಕರೆದಿದ್ದ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಶಿವಾಚಾರ್ಯ ರತ್ನ ಲಿಂ.ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಿರೇಕಲ್ಮಠದ ಪಟ್ಟಾಧಿಕಾರ ಸ್ವೀಕರಿಸಿ 50 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ `ಸುವರ್ಣ ಮಹೋತ್ಸವ’ ಆರಂಭದ ಪ್ರಯುಕ್ತ ಶ್ರೀ ಮಠದಲ್ಲಿ ಕೋಟಿ ದೀಪೋತ್ಸವ ಹಾಗೂ ಕೋಟಿ ಬಿಲ್ವಾರ್ಚನೆ ಕಾರ್ಯಕ್ರಮವನ್ನು ಕಾರ್ತಿಕೋತ್ಸವ ದಲ್ಲಿ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿತ್ತು.
ಆದರೆ ಪ್ರಕೃತಿ ವೈಪರೀತ್ಯದಿಂದ ಮಳೆ ಬಾರದೆ ಅನಾವೃಷ್ಠಿ ಸೃಷ್ಟಿಯಾಗಿ ರೈತರು ಸಂಕಷ್ಟಕ್ಕೀಡಾದ ಕಾರಣ ಕೋಟಿ ದೀಪೋತ್ಸವ ಹಾಗೂ ಕೋಟಿ ಬಿಲ್ವಾರ್ಚನೆ ಕಾರ್ಯಕ್ರಮವನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ ಎಂದು ಹೇಳಿದರು.
ಕದಳಿ ಕಾರ್ತಿಕೋತ್ಸವ ಲಕ್ಷ ದೀಪೋತ್ಸವಾಗಿ ಪರಿವರ್ತನೆಯಾಗಿ ಶ್ರೀಮಠದಲ್ಲಿ 1 ಲಕ್ಷದ 5 ಸಾವಿರ ದೀಪಗಳನ್ನು ಬೆಳಗಿಸಲಾಗುವುದು. ಇದು ಪ್ರತಿ ವರ್ಷ ಮುಂದುವರೆಯುತ್ತದೆ ಎಂದ ಅವರು, ಲಕ್ಷ ದೀಪೋತ್ಸವಕ್ಕೆ ತಮಿಳುನಾಡು ರಾಜ್ಯದಿಂದ ಮಣ್ಣಿನ ದೀಪಗಳನ್ನು ಈಗಾಗಲೇ ತರಿಸಲಾಗಿದೆ ಎಂದು ನುಡಿದರು.
ಮಂಗಳವಾರ ನಡೆಯುವ ಮಹಾ ಪೂಜೆ, ಕದಳಿ ಕಾರ್ತಿಕೋತ್ಸವ, ಶ್ರೀಗುರು ಚನ್ನೇಶ್ವರ ಬೆಳ್ಳಿ ರಥೋತ್ಸವ, ಧರ್ಮಸಭೆಯಲ್ಲಿ ಪಂಚ ಪೀಠಗಳಲ್ಲೊಂದಾದ ಕಾಶಿ-ವಾರಣಾಸಿ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗತ್ಪಾದರು ದಿವ್ಯ ಸಾನ್ನಿಧ್ಯ ವಹಿಸುವರು.
ಮುಖ್ಯ ಅತಿಥಿಗಳಾಗಿ ಶಾಸಕ ಡಿ.ಜಿ.ಶಾಂತನಗೌಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಭಾಗವಹಿಸುವರು. ಧರ್ಮಸಭೆಯಲ್ಲಿ ಕೆ.ಮಲ್ಲೇಶಪ್ಪ ವಿರಚಿತ ಲಿಖಿತ `ಜಪಯಜ್ಞ’ ಕೃತಿ ಬಿಡುಗಡೆ ಮಾಡಲಾಗುವುದು.
ಪ್ರಸಾದದ ವ್ಯವಸ್ಥೆಯನ್ನು ಶಿವಮೊಗ್ಗ ನಗರದ ಶ್ರೀಮತಿ ವಿಶಾಲಾಕ್ಷಮ್ಮ ಲಿಂ.ಕೊಟ್ರಯ್ಯ ಮತ್ತು ಮಕ್ಕಳು ಹಾಗೂ ಶ್ರೀಮತಿ ಲಲಿತಮ್ಮ ಚನ್ನ ವೀರಯ್ಯ ನಡೆಸಿಕೊಡುವರು. ಮಠದ ವ್ಯವಸ್ಥಾ ಪಕ ಚನ್ನಬಸಯ್ಯ ಸುದ್ದಿ ಗೋಷ್ಠಿಯಲ್ಲಿದ್ದರು.