ರಸ್ತೆ ಅಪಘಾತ: ಪ್ರತಿಭಟನೆಗೆ ಹೊರಟಿದ್ದವರು ಆಸ್ಪತ್ರೆಗೆ

ರಸ್ತೆ ಅಪಘಾತ: ಪ್ರತಿಭಟನೆಗೆ ಹೊರಟಿದ್ದವರು ಆಸ್ಪತ್ರೆಗೆ
  • ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಬೆಳಗಾವಿಯಲ್ಲಿ ಪ್ರತಿಭಟಿಸಲು ಹೊರಟಿದ್ದರು.
  • ಜಿಲ್ಲಾ ಪಂಚಾಯ್ತಿ ಕಚೇರಿ ಬಳಿ ಹೆದ್ದಾರಿಯಲ್ಲಿ  ಬಸ್‌ ಅಪಘಾತ
  • 18 ಜನರಿಗೆ ಗಾಯ, ಜಿಲ್ಲಾಸ್ಪತ್ರೆಗೆ ದಾಖಲು

ದಾವಣಗೆರೆ, ಡಿ.11- ನಗರದ ಹೊರ ವಲಯದಲ್ಲಿನ ಜಿಲ್ಲಾ ಪಂಚಾಯ್ತಿ ಕಚೇರಿ ಬಳಿ ಹೆದ್ದಾರಿಯಲ್ಲಿ ಸೋಮವಾರ ಬೆಳಗಿನ ಜಾವ ಲಾರಿಗೆ ಬಸ್ ಡಿಕ್ಕಿ ಹೊಡೆದು 18 ಮಂದಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಮಾದಿಗ ದಂಡೋರ ಜಾಗೃತಿ ಸಮಿತಿಯ ಬೆಂಗಳೂರು, ಚಿಕ್ಕಬಳ್ಳಾಪುರ, ಚಿಂತಾಮಣಿ ಪದಾಧಿಕಾರಿಗಳು ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಬೆಳಗಾವಿ ಅಧಿವೇಶನದ ವೇಳೆ  ಪ್ರತಿಭಟಿಸುವ ಸಲುವಾಗಿ ಈ ಬಸ್‌ನಲ್ಲಿ ಬೆಳಗಾವಿಗೆ ತೆರಳುತ್ತಿದ್ದರು.

ಡಿಕ್ಕಿ ರಭಸಕ್ಕೆ ಬಸ್‌ ಮುಂಭಾಗ ಸಂಪೂರ್ಣ ನಜ್ಜು-ಗುಜ್ಜಾಗಿದೆ.  ಗಾಯಗೊಂಡಿದ್ದವರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ದಾವಣಗೆರೆ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಭೀಕರ ಅಪಘಾತದಲ್ಲಿ ಬಸ್ಸಿನ ಮುಂಭಾಗ ಛಿದ್ರಛಿದ್ರಗೊಂಡು, ಡ್ರೈವರ್‌ ಸೀಟ್‌ ಪೂರ್ತಿ ನಜ್ಜುಗುಜ್ಜಾಗಿತ್ತು. ಆದರೆ ಡ್ರೈವರ್‌ ಸೀಟ್‌ನಲ್ಲಿ ಅಳವಡಿಸಿದ್ದ ಡಾ. ರಾಜ್‌ಕುಮಾರ್‌ ಫೋಟೊಗೆ ಯಾವುದೇ ಹಾನಿಯಾಗದೆ ಭದ್ರವಾಗಿತ್ತು.

ರಸ್ತೆ ಅಪಘಾತ: ಪ್ರತಿಭಟನೆಗೆ ಹೊರಟಿದ್ದವರು ಆಸ್ಪತ್ರೆಗೆ - Janathavani

ಜಿಲ್ಲಾಧಿಕಾರಿ ಭೇಟಿ: ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್,  ಚಿಕಿತ್ಸೆ ಪಡೆ ಯುತ್ತಿದ್ದ ಗಾಯಾಳುಗಳ ಯೋಗ ಕ್ಷೇಮ ವಿಚಾರಿಸಿದರು.

ಈ ವೇಳೆ ಗಾಯಾಳುಗಳಿಗೆ ಸೂಕ್ತವಾದ ಚಿಕಿತ್ಸೆ ನೀಡಲು ಸೂಚನೆ ನೀಡಿದ ಅವರು ಇವರಿಗೆ ಯಾವುದೇ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದ್ದಲ್ಲಿ ಕೂಡಲೇ ನೀಡಲು ತಿಳಿಸಿದರು.

ಜಿಲ್ಲಾ ಸರ್ಜನ್ ಡಾ. ನಾಗೇಂದ್ರಪ್ಪ ಹಾಗೂ ವಿವಿಧ ಮುಖಂಡರುಗಳು ಉಪಸ್ಥಿತರಿದ್ದರು.

ಅಪಘಾತಕ್ಕೆ ಹಂಪ್ಸ್‌ ಕಾರಣ:  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಸೂಕ್ತ ಸ್ಥಳದಲ್ಲಿ ಹಂಪ್ಸ್ ನಿರ್ಮಿಸದೇ ಇರುವುದೇ ಸರಣಿ ಅಪಘಾತಗಳಿಗೆ ಕಾರಣ ಎಂದು ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್ ಆರೋಪಿಸಿದ್ದಾರೆ.

ಒಂದು ದಿನದ ಹಿಂದಷ್ಟೇ ಟ್ರ್ಯಾಕ್ಟರ್ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಅದೇ ಸ್ಥಳದಲ್ಲಿ ಮತ್ತೆ ಲಾರಿ ಹಾಗೂ ಬಸ್‌ ಡಿಕ್ಕಿಯಾಗಿದೆ. 

ಹೆದ್ದಾರಿಯಲ್ಲಿ 2 ಸ್ಟ್ರೀಟ್ ಲೈಟ್‌ಗಳ ಮಧ್ಯಭಾಗದಲ್ಲಿ ಹಂಪ್ಸ್ ಅಳವಡಿಸಲಾಗಿತ್ತು. ಇದು ಅಪಘಾತಕ್ಕೆ ಕಾರಣವಾಗಿತ್ತು. ಇದೀಗ ಪೊಲೀಸ್ ಇಲಾಖೆ ಹಂಪ್ಸ್ ತೆರವುಗೊಳಿಸಿದ್ದು ಅಭಿನಂದನಾರ್ಹ ಎಂದವರು ಹೇಳಿದ್ದಾರೆ.

ಹೆದ್ದಾರಿಯಲ್ಲಿ ವೇಗಮಿತಿ ಪಾಲನೆಯಾಗುತ್ತಿಲ್ಲ. ಮಿತಿ ಮೀರಿದ ವೇಗದಲ್ಲಿ ಬರುವ ವಾಹನಗಳಿಗೆ ದಂಡ ವಿಧಿಸುವ ಪ್ರಕ್ರಿಯೆ ಹೆಚ್ಚಾಗಬೇಕು ಎಂದೂ  ಶ್ರೀಕಾಂತ್ ಒತ್ತಾಯಿಸಿದ್ದಾರೆ.

error: Content is protected !!