75ರ ಸಂಭ್ರಮದಲ್ಲಿರುವ ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ ಭಾವುಕ
ಹೊನ್ನಾಳಿ, ಡಿ.9- ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕುಗಳ ಕ್ಷೇತ್ರದ ಅಭಿವೃದ್ಧಿ ಮಾಡುವುದರ ಮೂಲಕ ಮತದಾರರ, ಕಾರ್ಯಕರ್ತರ ಋಣವನ್ನು ಪ್ರಾಮಾಣಿಕವಾಗಿ ತೀರಿಸುತ್ತೇನೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಭರವಸೆ ನೀಡಿದರು.
ಗೊಲ್ಲರಹಳ್ಳಿಯ ತಮ್ಮ ನಿವಾಸದಲ್ಲಿ ಅಭಿಮಾ ನಿಗಳು – ಕಾರ್ಯಕರ್ತರು ಇಂದು ಹಮ್ಮಿಕೊಳ್ಳ ಲಾಗಿದ್ದ 75ನೇ ಹುಟ್ಟುಹಬ್ಬವನ್ನಾಚರಿಸಿಕೊಂಡು ಅವರು ಮಾತನಾಡಿದರು.
ಭೀಕರ ಬರಗಾಲವಿರುವ ಪ್ರಯುಕ್ತ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದೆ. ಈ ಬಗ್ಗೆ ಕಾರ್ಯಕರ್ತರು ಮತ್ತು ಅಭಿಮಾನಿಗಳಲ್ಲಿ ಮೊದಲೇ ವಿನಂತಿಸಿಕೊಂಡಿದ್ದೆ. ಆದರೂ ಕಾರ್ಯಕರ್ತರು, ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಸರಳವಾಗಿ ಹುಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ತಮ್ಮೆಲ್ಲರ ಅಭಿಮಾನಕ್ಕೆ ಸದಾ ಋಣಿಯಾಗಿರುತ್ತೇನೆಂದು ಭಾವುಕರಾದರು.
ಕಾರ್ಯಕರ್ತರು ಮತ್ತು ಅಭಿಮಾನಿಗಳು ನನ್ನ ಎರಡು ಕಣ್ಣುಗಳಿದ್ದಂತೆ. ಕಳೆದ ವರ್ಷ ಅವಳಿ ತಾಲ್ಲೂಕುಗಳಾದ್ಯಂತ ಬಹುತೇಕ ಎಲ್ಲಾ ಗ್ರಾಮಗಳಲ್ಲೂ ನನ್ನ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದ್ದನ್ನು ಸ್ಮರಿಸಿದರು. ಕಳೆದ ವರ್ಷದ ಹುಟ್ಟುಹಬ್ಬವೂ ಕೂಡ ನನ್ನ ಗೆಲುವಿಗೆ ಕಾರಣವಾಗಿದ್ದು, ನಾನು ಹೆಚ್ಚಿನ ಮತಗಳಿಂದ ವಿಜಯಿಯಾಗಲು ಕಾರಣಕರ್ತರಾದ ಸರ್ವರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುವುದಾಗಿ ತಿಳಿಸಿದರು.
ಚುನಾವಣೆಗಳಲ್ಲಿ ಸೋಲು-ಗೆಲುವು ಸಹಜ. ನಾನು ನನ್ನ ಸಹೋದರ ಡಿ.ಜಿ.ಬಸವನಗೌಡರ ಜೊತೆಗೂಡಿ ಸಾಕಷ್ಟು ಚುನಾವಣೆಗಳನ್ನು ಎದುರಿಸಿದ್ದು, ಸೋತಾಗ ಕೂಡ ಎದೆಗುಂದದೇ ಕಾರ್ಯಕರ್ತರ ಮತ್ತು ಕ್ಷೇತ್ರದ ಸಮಸ್ಯೆಗಳ ಬಗ್ಗೆ ಗಮನಹರಿಸಿದ್ದೆ ಎಂದು ವಿವರಿಸಿದರು.
ಶಾಸಕ ಶಾಂತನಗೌಡ ಅವರ ಹುಟ್ಟುಹಬ್ಬದ ಪ್ರಯುಕ್ತ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಆಗಮಿಸಿದ್ದ ಕಾರ್ಯಕರ್ತರುಗಳಿಗೆ, ಅಭಿಮಾನಿಗಳಿಗೆ ಲಾಡು, ಹೋಳಿಗೆ, ರೊಟ್ಟಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಅವಳಿ ತಾಲ್ಲೂಕು ಗಳ ಸಾವಿರಾರು ಅಭಿಮಾನಿಗಳು-ಕಾರ್ಯ ಕರ್ತರು ಆಗಮಿಸಿ, ತಮ್ಮ ಜನನಾಯಕನಿಗೆ ಹುಟ್ಟುಹಬ್ಬದ ಶುಭಾಶಯ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ, ಮಾಜಿ ಜಿ.ಪಂ ಸದಸ್ಯರಾದ ಡಿ.ಜಿ.ವಿಶ್ವನಾಥ್, ಮುಖಂಡರುಗಳಾದ ಆರ್.ನಾಗಪ್ಪ, ಸಣ್ಣಕ್ಕಿ ಬಸವನಗೌಡ, ಹೆಚ್.ಎ.ಉಮಾಪತಿ, ಹೆಚ್.ಬಿ.ಶಿವಯೋಗಿ, ವಾಗೀಶ್ ನುಚ್ಚಿನ್, ಎ.ಜಿ.ಪ್ರಕಾಶ್ ದಿಡಗೂರು, ಬಿ.ಸಿದ್ದಪ್ಪ, ಡಿ.ಜಿ.ಸೋಮಪ್ಪ, ಡಿ.ಎಸ್.ಅರುಣ್ಕುಮಾರ್, ಡಿ.ಎಸ್.ಪ್ರದೀಪ್ ಗೌಡ, ಡಿ.ಎಸ್.ಸುರೇಂದ್ರಗೌಡ ಅಧಿಕಾರಿ ವರ್ಗದವರು, ಚುನಾಯಿತ ಜನಪ್ರತಿನಿಧಿಗಳು, ಪಕ್ಷದ ಮುಖಂಡರುಗಳು, ಕಾರ್ಯಕರ್ತರುಗಳು, ಅಭಿಮಾನಿಗಳು ಉಪಸ್ಥಿತರಿದ್ದರು.