ಲೋಕ ಅದಾಲತ್‌ನಲ್ಲಿ ಮನವೊಲಿಸಿದ ನ್ಯಾಯಾಧೀಶರು : ಮತ್ತೆ ಒಂದಾದ 8 ಜೋಡಿ

ಲೋಕ ಅದಾಲತ್‌ನಲ್ಲಿ ಮನವೊಲಿಸಿದ ನ್ಯಾಯಾಧೀಶರು : ಮತ್ತೆ ಒಂದಾದ 8 ಜೋಡಿ

ದಾವಣಗೆರೆ, ಡಿ.9- ನಗರದ ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ವಿವಿಧ ಕಾರಣಗಳಿಂದಾಗಿ ಬೇರ್ಪಟ್ಟಿದ್ದ 8 ಜೋಡಿಗಳು ಮತ್ತೆ ಒಂದಾಗಿ, ಹೊಸ ಜೀವನ ಆರಂಭಿಸಲು ನಿರ್ಧರಿಸಿವೆ.

ಜಿಲ್ಲಾ ಕೌಟುಂಬಿಕ ನ್ಯಾಯಾಧೀಶರಾದ ಪಿ. ದಶರಥ್‌ ಅವರ ನೇತೃತ್ವದಲ್ಲಿ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು, ಸಂಧಾನಕಾರರು ಹಾಗೂ ವಕೀಲರ ಸಹಕಾರದಿಂದಾಗಿ ಎಂಟು ಜೋಡಿಗಳನ್ನು ಒಂದು ಮಾಡಲು ಸಾಧ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರೂ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ ಈ ಸಂದರ್ಭದಲ್ಲಿ ಮಾಧ್ಯಮದವರಿಗೆ ಮಾಹಿತಿ ನೀಡಿದರು.

ನಾನೇ ಮೇಲು ಎಂಬ ಅಹಂ,  ಹುಡುಗನ ಮನೆಯಲ್ಲಿ ತಂದೆ-ತಾಯಿಗಳು ಕಿರುಕುಳ ನೀಡುವುದು ಸೇರಿದಂತೆ ಚಿಕ್ಕ ಪುಟ್ಟ ವಿರಸಗಳಿಂದಾಗಿ ಈ ಜೋಡಿಗಳು ವಿಚ್ಛೇದನಕ್ಕೆ ನಿರ್ಧರಿಸಿದ್ದರು. ಕಳೆದ ಎರಡು ತಿಂಗಳಿನಿಂದ ರಾಜೀ ಸಂಧಾನ ಪ್ರಕ್ರಿಯೆ ನಡೆಯುತ್ತಿತ್ತು. ಬೇರ್ಪಡಿಸಲು ನಿರ್ಧರಿಸಿದ್ದ 8 ಜೋಡಿಗಳು ಇಂದು ಮತ್ತೆ ಒಂದಾಗಿದ್ದಾರೆ ಎಂದು ಹೇಳಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ರಾಜೇಶ್ವರಿ ಎನ್. ಹೆಗಡೆ, ನ್ಯಾಯಾಧೀಶರುಗಳಾದ ಜೆ. ವಿ. ವಿಜಯಾನಂದ, ಪ್ರವೀಣ್‌ಕುಮಾರ್ ಆರ್.ಎನ್., ಎನ್. ಶ್ರೀಪಾದ್‌, ಬಿ.ದಶರಥ,  ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್ ಕುಮಾರ್, ಕಾರ್ಯದರ್ಶಿ ಎಸ್.ಬಸವರಾಜ್, ಜಿ.ಕೆ. ಬಸವರಾಜು, ಎ.ಎಸ್. ಮಂಜುನಾಥ, ಸಂಧಾನಕಾರರಾದ ಭಾಗ್ಯಲಕ್ಷ್ಮಿ, ವಾಣಿ, ವಕೀಲರುಗಳಾದ ಮಹೇಶ್ ನಾಯ್ಕ, ಮಂಜಪ್ಪ ಹಲಗೇರಿ, ಕಾಕನೂರು ಮಂಜಪ್ಪ ಹಾಗೂ ಇತರರು ಲೋಕ ಅದಾಲತ್‌ನಲ್ಲಿ ಭಾಗವಹಿಸಿದ್ದರು.

error: Content is protected !!