ದಾವಣಗೆರೆ, ಡಿ.10- ಮಹಾನಗರ ಪಾಲಿಕೆಯಿಂದ ಜರುಗಿದ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಕುಶಲಕರ್ಮಿಯಾಗಿ ಸುಮಾರು 40 ವರ್ಷಗಳಿಂದ ಹೊಸ ಪಾದರಕ್ಷೆಗಳು ಹಾಗೂ ಹರಿದ ಪಾದರಕ್ಷೆಗಳನ್ನು ರಿಪೇರಿ ಮಾಡುವ ಕಾಯಕ ಸೇವೆ ಮಾಡುತ್ತಿರುವ ಬಳ್ಳಾರಿ ಶೇಖರಪ್ಪನವರಿಗೆ ಮತ್ತು ಪ್ರಶಸ್ತಿ ನೀಡಿ ಗೌರವಿಸಿದ ಮಹಾಪೌರರು ಹಾಗೂ ಪಾಲಿಕೆ ಆಡಳಿತ ವರ್ಗಕ್ಕೆ ಕೆ.ಟಿ.ಜೆ.ನಗರದ ಗಾಂಧೀಜಿ ಹರಿಜನ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ, ಕೆ.ಪಿ.ಸಿ.ಸಿ. ಎಸ್ಸಿ ವಿಭಾಗದ ಕಾರ್ಯದರ್ಶಿ ಸೋಮಲಾಪುರ ಹನುಮಂತಪ್ಪ ಅಭಿನಂದಿಸಿದ್ದಾರೆ.
ವೀರಶೈವ ಪಂಚಮಸಾಲಿ ಮುಖಂಡ ಮಂಜುನಾಥ್ ಕಲಘಟಗಿ ಹಾಗೂ ದಲಿತ ಮುಖಂಡ ಗುಮ್ಮನೂರು ರಾಮಚಂದ್ರಪ್ಪ, ಎಸ್.ನಿಂಗಪ್ಪ, ಕರಿಬಸಪ್ಪ ಗಾಂಧಿನಗರ, ನಾಗರಾಜ ಬಸಾಪುರ, ವಸಂತ ಸಿಂಗ್ರಿಹಳ್ಳಿ, ಆನಂದ ಕೆ.ಬಿ. ಬಡಾವಣೆ, ಐಗೂರು ಸುರೇಶ್ ಮತ್ತು ಸೋಮಲಾಪುರ ಅವರುಗಳು, ಶ್ರೀ ಜಯದೇವ ಮುರುಘರಾಜೇಂದ್ರ ವೃತ್ತದಲ್ಲಿ ದುಡ್ಡು ಇಲ್ಲದಿದ್ದರೂ ಬಡ ಶಾಲಾ ಮಕ್ಕಳ ಪಾದರಕ್ಷೆಗಳನ್ನು ರಿಪೇರಿ ಮಾಡಿ, ಚೆನ್ನಾಗಿ ಓದಿ ವಿದ್ಯಾವಂತರಾಗಿ, ದೊಡ್ಡ ಅಧಿಕಾರಿಗಳಾಗಿ ಎಂದು ಬುದ್ದಿವಾದ ಹೇಳಿದ ನಿಮ್ಮ ಸೇವೆ ಗುರುತಿಸಿ, ಪ್ರಶಸ್ತಿ ನೀಡಿರುವುದಕ್ಕೆ ಸಂತಸವಾಗಿದೆ ಎಂದು ಶೇಖರಪ್ಪ ಬಳ್ಳಾರಿ ಇವರಿಗೆ ಪುಷ್ಪ ಮಾಲೆ ಹಾಕಿ, ಸಿಹಿ ತಿನ್ನಿಸಿ ಅಭಿನಂದಿಸಿದರು.