ಹರಪನಹಳ್ಳಿ ಕಾರ್ಯಕ್ರಮದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ. ಅಣ್ಣಪ್ಪ ಕರೆ
ಹರಪನಹಳ್ಳಿ, ಡಿ. 10 – ರೋಗಗಳು ಬರುವ ಮುನ್ನ ಎಚ್ಚರ ವಹಿಸಿದರೆ ಆಸ್ಪತ್ರೆ ಮತ್ತು ಮಾತ್ರೆಗಳಿಂದ ದೂರವಿರಬಹುದು ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ. ಅಣ್ಣಪ್ಪ ಹೇಳಿದರು.
ತಾಲ್ಲೂಕಿನ ದುಗ್ಗಾವತಿ ಗ್ರಾಮದಲ್ಲಿ ಯೋಗ ನರಸಿಂಹ ಸೌಹಾರ್ದ ಪತ್ತಿನ ಸಹ ಕಾರಿ ನಿಯಮಿತ ಹಾಗೂ ಶ್ರೀನಿವಾಸ್ ಆಸ್ಪತ್ರೆ ಇವರ ಸಹಯೋಗದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಸ್ತ್ರಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ದಿನಗಳಲ್ಲಿ ವಾಂತಿ-ಬೇದಿ, ಟೈಫಾಯಿಡ್, ಕ್ಷಯ, ಕಾಲರಾದಂತಹ ರೋಗಗಳು ಸಾಮಾನ್ಯವಾಗಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಬಿಪಿ, ಶುಗರ್, ಹೃದ್ರೋಗ ಹಾಗೂ ಕಿಡ್ನಿ ಕಾಯಿಲೆಗಳು ಸಾಮಾನ್ಯವಾಗಿವೆ. ಇವು ಶ್ರೀಮಂತ ಕಾಯಿಲೆ ಗಳಾಗಿದ್ದು, ಬಡ ಜನರು ಆರ್ಥಿಕವಾಗಿ ಭರಿಸಲು ಅಸಾಧ್ಯ. ಗ್ರಾಮೀಣ ಭಾಗದ ಹಾಗೂ ನಗರ ಪ್ರದೇಶದ ಬಡ ಜನರಿಗೆ ಇಂತಹ ಉಚಿತ ಶಿಬಿರಗಳ ಮೂಲಕವೇ ಚಿಕಿತ್ಸೆಗೊಳಪಡಿಸಿದಾಗ ಮಾತ್ರ ಅವರನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯ ಎಂದರು.
ಶಿಬಿರದ ಆಯೋಜಕ ಶ್ರೀನಿವಾಸ್ ಕಮ್ಮತ್ತಹಳ್ಳಿ ಮಾತನಾಡಿ, ಆರೋಗ್ಯವಾಗಿದ್ದರೆ ಸುಖವಾಗಿ ಬಾಳಬಹುದು. ಇಲ್ಲವಾದರೆ ದುಡಿದ ಹಣವನ್ನು ಆಸ್ಪತ್ರೆಗೆ ಖರ್ಚು ಮಾಡಬೇಕಾಗುತ್ತದೆ. ಆದ್ದರಿಂದ ರೋಗದ ಲಕ್ಷಣ ಕಾಣುವ ಮುನ್ನವೇ ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರು ನೀಡುವ ಸಲಹೆ ಪಾಲಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಮಂಜುನಾಥ, ಅರಸಿಕೇರಿ ಗ್ರಾ.ಪಂ.ಅಧ್ಯಕ್ಷ ಇನಾಯತ್, ಬಾಲೇನಹಳ್ಳಿ ಕೆಂಚನಗೌಡ, ಜಂಬಪ್ಪರ ಪರಸಪ್ಪ, ಶ್ರೀನಿವಾಸ್, ನವೀನ್ ಮತ್ತು ಇತರರು ಉಪಸ್ಥಿತರಿದ್ದರು.