ಅಪಾಯದಲ್ಲಿರುವ ಸಂವಿಧಾನದ ರಕ್ಷಣೆಗೆ ಪ್ರಜ್ಞಾವಂತರು ಪಣ ತೊಡಬೇಕಾಗಿದೆ

ಅಪಾಯದಲ್ಲಿರುವ ಸಂವಿಧಾನದ ರಕ್ಷಣೆಗೆ ಪ್ರಜ್ಞಾವಂತರು ಪಣ ತೊಡಬೇಕಾಗಿದೆ

ಕ.ದ.ಸಂ.ಸ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಶಿವಮೊಗ್ಗ

ಹರಿಹರ, ಡಿ.10- ದಲಿತರು, ಶೋಷಿತರು, ಮಹಿಳೆಯರಿಗೆ ಇಂದು ಸಿಗುತ್ತಿರುವ ಹಕ್ಕುಗಳಿಗೆ ಕಾರಣವಾಗಿರುವ ಸಂವಿಧಾನವು ಆರಾಧನೆಗೆ ಯೋಗ್ಯವಾಗಿದೆಯೆ ಹೊರತು ಯಾವುದೇ ಧರ್ಮ ಅಥವಾ ಅಧ್ಯಾತ್ಮಿಕ ದೇವ, ದೇವತೆಗಳಲ್ಲ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಶಿವಮೊಗ್ಗ ಹೇಳಿದರು.

ನಗರದ ಅಕ್ಷಯ ಆಸ್ಪತ್ರೆ ಆವರಣದಲ್ಲಿ ಭಾನುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ), ಅಕ್ಷಯ ಆಸ್ಪತ್ರೆ, ಐ ದೃಷ್ಟಿ ಕಣ್ಣಿನ ಆಸ್ಪತ್ರೆ, ಬೇಬಿ ಸೈನ್ಸ್, ಎಸ್.ಎಸ್.ನಾರಾಯಣ ಹಾರ್ಟ್ ಆಸ್ಪತ್ರೆ ಸಹಯೋಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್‍ರವರ 67ನೇ ಮಹಾಪರಿನಿಬ್ಬಾಣ ದಿನದ ನಿಮಿತ್ತ ಡಾ.ಬಿ.ಆರ್.ಅಂಬೇಡ್ಕರ್ ಸದ್ಭಾವನ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ವಿಚಾರ ಸಂಕಿರಣ ಮತ್ತು ಉಚಿತ ಆರೋಗ್ಯ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೆಲವರು ಹೆಮ್ಮೆ ಎಂದು ಕರೆಯುವ ಭಾರ ತೀಯ ಪರಂಪರೆಗಳು ಮಹಿಳೆಯನ್ನು ಮನೆಯ ನಾಲ್ಕು ಗೋಡೆ ಮಧ್ಯೆ ಬಂಧಿಸಿತ್ತು. ಆ ಮಹಿಳೆ ಶಿಕ್ಷಣ ಪಡೆಯಲು, ಸಾರ್ವಜನಿಕ ಬದುಕು ನಡೆ ಸಲು, ಉದ್ಯೋಗಿಗಳಿಗೆ ಹೆರಿಗೆ ರಜೆ, ಮತದಾನದ ಹಕ್ಕು ಸೇರಿದಂತೆ ಇತ್ಯಾದಿ ಹಕ್ಕುಗಳು ಡಾ.ಅಂಬೇಡ್ಕರ್ ರಚಿಸಿದ ಕಾನೂನುಗಳಿಂದ ಲಭಿಸಿವೆ.

ಇಂತಹ ಡಾ.ಅಂಬೇಡ್ಕರ್‍ರವರು ಮಹಿಳೆಯ ರಿಗೆ ಆದರ್ಶವಾಗುವ ಬದಲು ತನ್ನ ಪತ್ನಿ ಸೀತೆ ಯನ್ನು ಕಾಡಿಗಟ್ಟಿದ ಶ್ರೀರಾಮ ಇವರನ್ನು ಆದರ್ಶ ಪುರುಷ ಎಂದು ಮಹಿಳೆಯರು ಆರಾಧಿಸುವುದು ಸರಿಯೇ ಎಂದು ಪ್ರಶ್ನಿಸಿದ ಅವರನ್ನು ದೇವಸ್ಥಾನಗಳ ಪ್ರವೇಶದಿಂದ ಹೊರಗಿಡುವ ಧರ್ಮದ ಬದಲು ಈ ದೇಶದ ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಯಂತಹ ಅಧಿಕಾರ ದೊರಕಿಸುವ ಸಂವಿಧಾನವೇ ನಮಗೆಲ್ಲಾ ಶ್ರೇಷ್ಠ ಹಾಗೂ ಆದರ್ಶವಾಗಬೇಕೆಂದು ಪ್ರತಿಪಾದಿಸಿದರು.

ದೇಶದ ದಲಿತರು, ಶೋಷಿತರು, ಮಹಿಳೆ ಯರಿಗೆ ಸಮಾನ ಹಕ್ಕು ಕೊಡಿಸಿದ ಸಂವಿಧಾನದ ರಕ್ಷಣೆ ಮಾಡಬೇಕಾದವರ ಮಕ್ಕಳು ಇಂದು ಗಂಟೆ ಬಾರಿಸುತ್ತಿದ್ದಾರೆ, ಗಂಟೆ ಭಾರಿಸುವವರ ಮಕ್ಕಳು ಇಂದು ಸಂವಿಧಾನ ಬದಲಿಸಬೇಕೆಂಬ ಹುನ್ನಾರ ನಡೆಸುತ್ತಿದ್ದಾರೆ. ಸಂವಿಧಾನದ ಸ್ಥಾನ ಇಂದು ಅಪಾಯದಲ್ಲಿದ್ದು ಅದರ ರಕ್ಷಣೆಗೆ ಪ್ರಜ್ಞಾವಂತರು ಪಣ ತೊಡಬೇಕಾಗಿದೆ ಎಂದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಹಿರಿಯೂರು ಕೋಡಿಹಳ್ಳಿ ಮಠದ ಷಡಕ್ಷರಮುನಿ ದೇಶೀಕೇಂದ್ರ ಶ್ರೀಗಳು ಮಾತನಾಡಿ,   ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದರು.

ಸಾಧಕರಿಗೆ ಪುರಸ್ಕರಿಸಿದ ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಇಂದು ಆರೋಗ್ಯಯುತವಾಗಿ ಕಾಣುವ ವ್ಯಕ್ತಿ ಮಾರನೇ ದಿನ ಮರಣ ಹೊಂದುವ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ನಮಗಾಗಿ ಅಲ್ಲದಿದ್ದರೂ ನಮ್ಮನ್ನು ನಂಬಿರುವ ಕುಟುಂಬದವರಿಗಾಗಿ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕ.ದ.ಸಂ.ಸ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, 2012ರಲ್ಲಿ ಭದ್ರಾವತಿ ನ್ಯಾಯಾಲಯ ಎಂ.ಗುರುಮೂರ್ತಿಯವೇ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಸಂಘಟನೆಯ ವಾರಸುದಾರರು ಎಂದು ಘೋಷಣೆ ಮಾಡಿದೆ. ಹೈಕೋರ್ಟ್ ಕೂಡ ಈ ತೀರ್ಪನ್ನು ಎತ್ತಿ ಹಿಡಿದಿದೆ. ಆದರೂ ಕೂಡ ಇತ್ತೀಚಿಗೆ ಕೆಲವರು ಪ್ರೊ.ಬಿ.ಕೃಷ್ಣ ಸ್ಥಾಪಿತ ಸಂಘಟನೆ ಎಂದು ದಾರಿ ತಪ್ಪಿಸುತ್ತಿದ್ದಾರೆ. 26 ವರ್ಷಗಳ ಹಿಂದೆ ಮರಣ ಹೊಂದಿರುವ ಪ್ರೊ.ಕೃಷ್ಣಪ್ಪನವರು ಅದು ಹೇಗೆ ಬಂದು ಹೊಸ ಸಂಘಟನೆ ನೋಂದಾಯಿಸಿದರು. ಸಮಾಜದಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡಬಾರದು ಎಂದು ಕಿವಿ ಮಾತು ಹೇಳಿದರು.

ಮಾಜಿ ಶಾಸಕ ಎಸ್.ರಾಮಪ್ಪ ಪ್ರಶಸ್ತಿ ಪ್ರದಾನ ಮಾಡಿದರು. ಅಕ್ಷಯ ಆಸ್ಪತ್ರೆ ಮುಖ್ಯಸ್ಥ ಡಾ.ನಾಗರಾಜ ವಿ.ಟಿ., ಕ.ದ.ಸಂ.ಸ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ್‌, ವೆಂಕಟೇಶ್ ತೇಲ್ಕರ್, ಅಂಜುಮನ್ ಸಂಸ್ಥೆ ಅಧ್ಯಕ್ಷ ಸೈಯದ್ ಏಜಾಜ್, ಹರಳಹಳ್ಳಿ ಗ್ರಾಪಂ ಅಧ್ಯಕ್ಷ ಎಚ್.ಎಂ.ಹನುಮಂತಪ್ಪ, ಗುಳದಹಳ್ಳಿ ಮಂಜಪ್ಪ, ಹನುಮಂತಪ್ಪ, ತಿಮ್ಮಣ್ಣ ಕಡ್ಲೆಗೊಂದಿ, ಭಾನುವಳ್ಳಿ ಗ್ರಾಪಂ ಸದಸ್ಯ ಮಂಜಪ್ಪ, ಕೆಂಚಪ್ಪ, ಚೌಡಪ್ಪ ಸಿ. ಭಾನುವಳ್ಳಿ, ಜಯಪ್ಪ ಜಿಗಳಿ, ಚೌಡಪ್ಪ, ಅಂಜನಿ ಯಲವಟ್ಟಿ, ನಳಿನಿ, ಬಿ.ಆರ್.ಹನುಮಂತಪ್ಪ, ಅಣ್ಣಪ್ಪ ಅಜ್ಜೇರ್ ಇದ್ದರು. 

ಈ ಸಂದರ್ಭದಲ್ಲಿ ಪತ್ರಕರ್ತರಾದ  ಶೇಖರ್ ಗೌಡ ಪಾಟೀಲ್, ಜಿಗಳಿ ಪ್ರಕಾಶ್, ಬಿ.ವಾಸುದೇವ, ಎಂ.ಚಿದಾನಂದ ಕಂಚಿಕೇರಿ, ಎಂ.ಕೆ.ರಾಮಶೆಟ್ಟಿ, ಎಚ್.ಎಂ.ಸದಾನಂದ, ಪಿಎಸ್‍ಐ ಎಸ್.ಬಿ.ಚಿದಾನಂದಪ್ಪ, ಹೊನ್ನಾಳಿ ಶಿಕ್ಷಕ ಚನ್ನೇಶ್ವರ ಎ.ಕೆ. ಇವರಿಗೆ ಡಾ.ಬಿ.ಆರ್.ಅಂಬೇಡ್ಕರ್ ಸದ್ಭಾವನಾ ಪ್ರಶಸ್ತಿ ಪ್ರದಾನ ಮಾಡಲಾಯಿತು. 

error: Content is protected !!