ಬಸವರಾಜ ದೇಶಿಕೇಂದ್ರ ಶ್ರೀಗಳಿಂದಾಗಿ ಐರಣಿ ಮಠ ಉತ್ತುಂಗಕ್ಕೆ

ಬಸವರಾಜ ದೇಶಿಕೇಂದ್ರ ಶ್ರೀಗಳಿಂದಾಗಿ ಐರಣಿ ಮಠ ಉತ್ತುಂಗಕ್ಕೆ

ಕೋಣನ ತಲೆ : ಶ್ರೀಗಳ ಪಟ್ಟಾಭಿಷೇಕದ 46ನೇ ವಾರ್ಷಿಕೋತ್ಸವದಲ್ಲಿ ಶಾಸಕ ಡಿ.ಜಿ. ಶಾಂತನಗೌಡ

ಮಲೇಬೆನ್ನೂರು, ಡಿ. 10 – ಶ್ರೀ ಸದ್ಗುರು ಬಸವರಾಜ ದೇಶಿಕೇಂದ್ರ ಸ್ವಾಮೀಜಿ ಮಠದ ಜವಾಬ್ದಾರಿ ವಹಿಸಿಕೊಂಡ ನಂತರ ಐರಣಿ ಹೊಳೆಮಠವು ಶಾಲೆಗಳು ಮತ್ತು ಕೋಣನತಲೆ ಬೀರನಕೆರೆ, ಹರಿಹರ, ದಾವಣಗೆರೆ, ಕಾಗಿನೆಲೆ, ಮೈಸೂರಿನಲ್ಲೂ ಶಾಖಾ ಮಠಗಳನ್ನು ತೆರೆಯುವ ಮೂಲಕ ಐರಣಿ ಮಠವನ್ನು ಉತ್ತುಂಗಕ್ಕೆ ಬೆಳೆಸಿದ್ದಾರೆ ಎಂದು ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ ಶ್ಲ್ಯಾಘಿಸಿದರು.

ಭಾನುವಾರ ಸಂಜೆ ಕೋಣನತಲೆ ಗ್ರಾಮದಲ್ಲಿರುವ ಶ್ರೀಗುರು ದೇವ ಮುಪ್ಪಿನಾರ್ಯ ಆಶ್ರಯದಲ್ಲಿ ಹಮ್ಮಿಕೊಂಡಿರುವ ಐರಣಿ ಹೊಳೆಮಠದ ಶ್ರೀ ಸದ್ಗುರು ಬಸವರಾಜ ದೇಶಿಕೇಂದ್ರ ಸ್ವಾಮೀಜಿಯವರ ಪಟ್ಟಾಭಿಷೇಕದ 46ನೇ ವಾರ್ಷಿಕೋತ್ಸವ ಮತ್ತು ಅಖಂಡ ಶಿವಭಜನಾ ಸಪ್ತಾಹ, ತುಲಾಭಾರ ಸೇವೆ, ಶ್ರೀ ಸಿದ್ಧಾರೂಢರ ಚರಿತ್ರೆ ಪಾರಾಯಣ ಮಂಗಲ, ಕಾರ್ತಿಕೋತ್ಸವ, ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ, ಸಾಮೂಹಿಕ ವಿವಾಹ ಕಾರ್ಯಕ್ರಮಗಳ 2ನೇ ದಿನದ ಧರ್ಮಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

1978ರಲ್ಲಿ ಐರಣಿಯಲ್ಲಿ ನಾನು ನೋಡಿದ್ದ ಮಠಕ್ಕೂ ಮತ್ತು ಈಗ ಆಗಿರುವ ಅಭಿವೃದ್ಧಿಗೆ ಸಾಕಷ್ಟು ವ್ಯತ್ಯಾಸವಾಗಿದ್ದು, ಶ್ರೀಗಳು ತಮ್ಮ ಸರಳ ಹಾಗೂ ಮಹಾನ್‌ ತಪಸ್ಸಿನಿಂದ ಅಪಾರ ಭಕ್ತರ  ಹೃದಯ ಗೆದ್ದಿದ್ದಾರೆ. ನನ್ನನ್ನೂ ಸೇರಿ ಎಲ್ಲಾ ಭಕ್ತರು ಈ ಮಠಗಳ ಅಭಿವೃದ್ಧಿ ಕೈ ಜೋಡಿಸಿದ್ದಾರೆ.

ಜನರನ್ನು ಸತ್ಯ ಧರ್ಮದ ಹಾದಿಯಲ್ಲಿ ಕರೆದುಕೊಂಡು ಹೋಗುವ ಪ್ರಯತ್ನವನ್ನು ನಮ್ಮ ನಾಡಿನಲ್ಲಿ ಮಠಗಳನ್ನು ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದರೂ ಕೆಲವರು ಇನ್ನೂ ನೀಚತನದಲ್ಲಿದ್ದಾರೆ.

ಚಪ್ಪಲಿಗೆ ಇರುವ ಬೆಲೆ ಸತ್ತ ಮೇಲೆ ಮನುಷ್ಯನಿಗೆ ಇರುವುದಿಲ್ಲ ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಂಡು ದಾನ, ಧರ್ಮದ ಹಾದಿಯಲ್ಲಿ ಹೋಗಬೇಕು. ಬರಗಾಲವನ್ನು ಎದುರಿಸುವ ಶಕ್ತಿಯನ್ನು ಭಗವಂತ ಹಾಗೂ ಶ್ರೀಗಳು ನಾಡಿನ ಜನತೆಗೆ ನೀಡಬೇಕೆಂದು ಶಾಂತನಗೌಡರು ಪ್ರಾರ್ಥಿಸಿದರು.

ಇನ್‌ಸೈಟ್ ಮುಖ್ಯಸ್ಥ ಜಿ.ಬಿ. ವಿನಯ್‌ ಕುಮಾರ್‌ ಮಾತನಾಡಿ, ಸಿದ್ಧಾರೂಢರ ಮಠಗಳ ಸಂಪ್ರದಾಯದಲ್ಲಿ ಜನರಿಗೆ ಹೆಚ್ಚು ಭಕ್ತಿ, ನಂಬಿಕೆ ಇರುವುದನ್ನು ನಾವು ಇಲ್ಲಿ ನೋಡಿ ತಿಳಿದು ಕೊಂಡಿದ್ದೇನೆಂದು ಹೇಳಿದರು.

ಬೇಗೂರು ಶ್ರೀ ಗುರು ಮುಪ್ಪಿನಾರ್ಯ ಆಶ್ರಮದ ಕಾರ್ಯದರ್ಶಿ ಹಾಗೂ ಶಿಕ್ಷಕ ಮಂಜುನಾಥ್‌
ಕೊಟ್ಟಣ ಮಾತನಾಡಿ, ಸಿದ್ಧಾರೂಢರ ಪುರಾಣ ಸತ್ಸಂಗ ನಡೆಯುವ ಊರಿನಲ್ಲಿ ಶಾಂತಿ, ಸಮೃದ್ಢಿ ನೆಲಸುತ್ತದೆ. ಸಾಧು-ಸಂತರ ಸಂಘವೇ ಸತ್ಸಂಗವಾಗಿದ್ದು, ಸತ್ಸಂಗದ ಫಲವಾಗಿ ಕುರಿ ಕಾಯುವ ವ್ಯಕ್ತಿ ಪರಮೇಶ್ವರ -ಪಾರ್ವತಿಯನ್ನು ಧರೆಗಿಳಿಸಿದ ಸತ್ಯ ಕತೆಯನ್ನು ಮಂಜುನಾಥ್‌ ಹೇಳಿದರು.

ಸಂತೇಬೆನ್ನೂರಿನ ಶಿಕ್ಷಕ ಮಾರುತಿ ಮಾತನಾಡಿ,  ಜಾತಿ, ವರ್ಗ ರಹಿತವಾದ ಆರೂಢ ಸಂಪ್ರದಾಯ ನಾಡಿನ ಜನರ ಹೃದಯ ಗೆದ್ದಿದೆ. ನಾವು-ನೀವು ದೀಪದಂತೆ ಬೆಳಕು ಹಿಡುವ ಕೆಲಸ ಮಾಡಬೇಕೆಂದ ಮಾರುತಿ ಅವರು, ಮಕ್ಕಳಲ್ಲಿ ನೈತಿಕತೆ ಬೆಳೆಸಬೇಕು. ಇಂತಹ ಸತ್ಸಂಗಗಳಿಗೆ ಕರೆತರಬೇಕೆಂದರು.

ಹೊನ್ನಾಳಿಯ ರೈಸ್‌ಮಿಲ್‌ ಮಾಲೀಕ ಹೆಚ್‌.ಎ ಉಮಾಪತಿ, ಮುಖಂಡ ಬಿ.ಸಿದ್ದಪ್ಪ ಮಾತನಾಡಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಹೋತನಹಳ್ಳಿ ಶ್ರೀ ಗುರು ಸಿದ್ಧಾಶ್ರಮದ ಶ್ರೀ ಶಂಕರಾನಂದ ಸ್ವಾಮೀಜಿ ಮಾತನಾಡಿ, ಬಸವರಾಜ ದೇಶಿಕೇಂದ್ರ ಶ್ರೀಗಳು ತಮ್ಮ ಅಧ್ಯಾತ್ಮಿಕ ಭಕ್ತಿ-ಭಾವದಿಂದ ನಮ್ಮ ರಾಜ್ಯದ ಜೊತೆಗೆ ಉತ್ತರ ಹಾಗೂ ದಕ್ಷಿಣ ಭಾರತದಲ್ಲೂ ಭಕ್ತರನ್ನು ಹೊಂದಿದ್ದಾರೆ ಎಂದರು.

ಶ್ರೀ ಸದ್ಗುರು ಬಸವರಾಜ ದೇಶಿಕೇಂದ್ರ ಸ್ವಾಮೀಜಿ, ಬಾಲಯೋಗಿ ಶ್ರೀ ಸಿದ್ಧಾರೂಢ ಸ್ವಾಮೀಜಿ ದಿವ್ಯ ನೇತೃತ್ವ ವಹಿಸಿದ್ದರು.

ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಬಸವಾಪಟ್ಟಣ ಶಿಕ್ಷಕ ಶಾಂತರಾಜ್‌, ಮಾಜಿ ಛೇರ್ಮನ್‌ ನಾಗಪ್ಪ, ಸುಭಾಷ್‌ ಚಂದ್ರ, ಜಿಗಳಿಯ ಗೌಡ್ರ ಬಸವರಾಜಪ್ಪ, ಬಿ.ಎಂ. ದೇವೇಂದ್ರಪ್ಪ, ಬಿ.ಸೋಮಶೇಖರಚಾರಿ, ಬೆಣ್ಣೇರ್‌ ನಂದ್ಯೆಪ್ಪ, ಪಶು ವೈದ್ಯಾಧಿಕಾರಿ ಡಾ. ಮೇಘರಾಜ್‌ ಪ್ರಗತಿ ಪರ ಯುವ ಚಿಂತಕ ರಾಘು ದೊಡ್ಮನಿ, ಉಪ ಪ್ರಾಚಾರ್ಯ ರಾಜಶೇಖರ್‌ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.

ಕರ್ನಾಟಕ ಕಲಾಶ್ರೀ ಬೆಂಗಳೂರಿನ ವಿ. ಮುರಳಿ ಹಾಗೂ ಎಂ. ದುರುಗೇಶ್‌ ಮತ್ತು ಅವರ ತಂಡದವರ ನಾದಸ್ವರ ಹಾಗೂ ಡೋಳ್ಳು ವಾದನ ಎಲ್ಲರ ಮನಸೂರೆಗೊಂಡಿತು. 

error: Content is protected !!