ಶ್ರೀ ಪಾಂಡುರಂಗ ವಿಠ್ಠಲ ರುಕ್ಮಿಣಿ ದಿಂಡಿ ಮಹೋತ್ಸವದಲ್ಲಿ ಚಿಂತಕ ಜಗನ್ನಾಥ ನಾಡಿಗೇರ್
ದಾವಣಗೆರೆ, ಡಿ. 10- ಯಾವುದೇ ಒಂದು ಸಮಾಜ ಎಲ್ಲಾ ರೀತಿಯಿಂದ ಅಭಿವೃದ್ದಿಯಾಗ ಬೇಕಾದರೆ ಅದರಲ್ಲಿ ಹೃದಯವಂತ ಹಿರಿಯರು ಮತ್ತು ಪ್ರತಿಭಾವಂತ ಮಕ್ಕಳ ಪಾತ್ರ ತುಂಬಾ ಪ್ರಮುಖವಾದುದು, ಅಂತವರನ್ನು ಗೌರವಿಸ ಬೇಕಾದದ್ದು ಆ ಸಮಾಜದ ಮೊದಲ ಕರ್ತವ್ಯ ಎಂದು ಶೈಕ್ಷಣಿಕ ಸಲಹೆಗಾರ ಮತ್ತು ತರಬೇತು ದಾರ ಜಗನ್ನಾಥ ನಾಡಿಗೇರ್ ಅಭಿಪ್ರಾಯಪಟ್ಟರು.
ನಗರದ ನಾಮದೇವ ಸಿಂಪಿ ಸಮಾಜ ದೈವ ಮಂಡಳಿ ಮತ್ತು ಅದರ ವಿವಿಧ ಅಂಗ ಸಂಸ್ಥೆಗಳು ಸೇರಿ ಆಚರಿಸುತ್ತಿರುವ 98ನೇ ಶ್ರೀ ಪಾಂಡುರಂಗ ವಿಠ್ಠಲ ರುಕ್ಮಿಣಿ ದಿಂಡಿ ಮಹೋತ್ಸವದ ಮೊದಲ ದಿನವಾದ ಶುಕ್ರವಾರ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಿರಿಯರ ತ್ಯಾಗ ಮತ್ತು ಪರಿಶ್ರಮಗಳೇ ಮಕ್ಕಳನ್ನು ಪ್ರತಿಭಾವಂತರನ್ನಾಗಿ ಮಾಡುತ್ತವೆ. ಆ ಮಕ್ಕಳು ಅಧ್ಯಯನದಲ್ಲಿ ಪರಿಶ್ರಮ ಮತ್ತು ಸಾಧನೆ ಮಾಡಿದಾಗ ಆ ಹಿರಿಯರನ್ನು ಮತ್ತು ಸಮಾಜವನ್ನು ಕೀರ್ತಿವಂತರನ್ನಾಗಿ ಮಾಡುತ್ತದೆ ಎಂದು ಅವರು ತಿಳಿಸಿದರು.
ದಾವಣಗೆರೆಯಲ್ಲಿ 65ಕ್ಕೂ ಹೆಚ್ಚು ಸಮಾಜಗಳ ಜನರಿದ್ದಾರೆ. ನಮ್ಮ ನಾಮದೇವ ಸಮಾಜವು ಸಂಖ್ಯಾತ್ಮಕವಾಗಿ ಕಡಿಮೆ ಇದ್ದರೂ, ಗುಣಾತ್ಮಕವಾಗಿ ಉತ್ತಮ ಸ್ಥಿತಿಯಲ್ಲಿದೆ. ಇದಕ್ಕೆ ಈ ಸಮಾಜದ ಹಿರಿಯರೇ ಕಾರಣ. ಇಂದು ಈ ಸಮಾಜ ಪ್ರಸಿದ್ಧವಾಗಲು ಇದರ ಪ್ರತಿಭಾವಂತರು ಕಾರಣ. ಅಂತವರನ್ನು ಗುರುತಿಸಿ ಇಂದು ಗೌರವಿಸುತ್ತಿರುವುದು ನಮ್ಮ ಸಮಾಜದ ಕರ್ತವ್ಯ ಎಂದು ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ವಿಠ್ಠಲ್ ಎಂ.ಎಸ್ ಅಭಿಪ್ರಾಯ ಪಟ್ಟಿದ್ದಾರೆ.
ದಿಂಡಿ ಮಹೋತ್ಸವವನ್ನು ಕೇವಲ ಧಾರ್ಮಿಕ ಕಾರ್ಯಕ್ರಮವನ್ನಾಗಿ ಮಾಡದೇ ಸಮಾಜದಲ್ಲಿರುವ ಸಾಧಕರನ್ನು ಮತ್ತು ಅರ್ಹರನ್ನು ಗುರುತಿಸಿ, ಗೌರವಿಸುತ್ತಿರುವುದು ಶ್ಲ್ಯಾಘನೀಯವಾದದ್ದು. ಮೂರು ದಿನಗಳ ಕಾಲ ಶ್ರದ್ಧಾ ಭಕ್ತಿಗಳಿಂದ ನಡೆಯುತ್ತಿರುವುದು ನಮ್ಮ ಸಮಾಜದ ಉತ್ಸವ ಮತ್ತು ವಿಶೇಷತೆ. ಸಮಾಜದ ಎಲ್ಲರೂ ಕೈ ಜೋಡಿಸಿದಾಗ ಏನನ್ನಾದರೂ ಸಾಧಿಸಬಹುದು ಎಂದು ವಿಠಲ್ ಅವರು ತಿಳಿಸಿದರು.
ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ಚಾರ್ಟರ್ಡ್ ಅಕೌಂಟೆಂಟ್ ಶ್ರೀನಿವಾಸ ಮಹೇಂದ್ರಕರ್, ಬೆಸ್ಕಾಂನ ನಿವೃತ್ತ ಆಪ್ತ ಸಹಾಯಕಿ ಶ್ರೀಮತಿ ಉಮಾ ಮಹೇಂದ್ರಕರ್, ರಾಜ್ಯ ಮಟ್ಟದ ಕ್ರೀಡಾ ಪ್ರಶಸ್ತಿ ವಿಜೇತೆ ಅವನಿ ಬೊಂಗಾಳೆ ಇವರನ್ನು ಸನ್ಮಾನಿಸಲಾಯಿತು.
ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯ ಡಾ. ರವೀಂದ್ರ ಕುಮಾರ್ ಮುಖ್ಯ ಅತಿಥಿ ಗಳಾಗಿ ಆಗಮಿಸಿದ್ದರು. ಸಮಾಜದ ಗೌರವಾಧ್ಯಕ್ಷ ಜ್ಞಾನದೇವ ಬೊಂಗಾಳೆ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷರಾದ ಆನಂದರಾವ್ ರಾಕುಂಡೆ ಮತ್ತು ಹೆಚ್.ಕೆ.ಪರಶುರಾಮ್, ಸಹ ಕಾರ್ಯ ದರ್ಶಿ ವಿಠ್ಠಲ್ ರಾಕುಂಡೆ ಮತ್ತು ಮಂಜುನಾಥ ಪಿಸೆ ವೇದಿಕೆ ಮೇಲೆ ಉಪಸ್ಥಿತರಿದ್ದರು. ಮಂಡಳಿಯ ಸದಸ್ಯ ಪರಶುರಾಮ್ ಹೋವಳೆ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಮನೋಹರ ವಿ.ಬೊಂಗಾಳೆ ವಂದನಾರ್ಪಣೆ ಮಾಡಿದರು. ಸದಸ್ಯ ಅಶೋಕ್ ಮಾಳೋದೆ ಕಾರ್ಯಕ್ರಮ ನಿರೂಪಿಸಿದರು.