ಭಾರತದಲ್ಲಿರುವ ಸಂಸ್ಕೃತಿ, ವೈವಿಧ್ಯತೆ, ಸಾಮರಸ್ಯ ಬೇರೆ ಯಾವ ದೇಶದಲ್ಲೂ ಇಲ್ಲ

ಭಾರತದಲ್ಲಿರುವ ಸಂಸ್ಕೃತಿ, ವೈವಿಧ್ಯತೆ, ಸಾಮರಸ್ಯ ಬೇರೆ ಯಾವ ದೇಶದಲ್ಲೂ ಇಲ್ಲ

ಕೊಕ್ಕನೂರು : ಎನ್ನೆಸ್ಸೆಸ್ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಎನ್ನೆಸ್ಸೆಸ್ ಸಂಯೋಜನಾಧಿಕಾರಿ ಅಶೋಕ್ ಪಾಳೇದ ಅಭಿಮತ

ಮಲೇಬೆನ್ನೂರು, ಡಿ.8- ನಮ್ಮ ತಂದೆ-ತಾಯಿ ಸೇರಿದಂತೆ ಬುದ್ಧ, ಬಸವಣ್ಣ, ಗಾಂಧೀಜಿ, ಅಂಬೇಡ್ಕರ್ ನಮಗೆ ಮಾದರಿಯಾಗಬೇಕೇ ಹೊರತು ಸಿನಿಮಾ ನಟರಲ್ಲ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಎನ್ನೆಸ್ಸೆಸ್ ಸಂಯೋಜನಾಧಿಕಾರಿ ಅಶೋಕ್ ಕುಮಾರ್ ಪಾಳೇದ ವಿದ್ಯಾರ್ಥಿಗಳಿಗೆ  ಹೇಳಿದರು.

ಅವರು, ಶುಕ್ರವಾರ ಸಂಜೆ ಕೊಕ್ಕನೂರು ಗ್ರಾಮದ ಶ್ರೀ ಪವನದೇವ ಕಲ್ಯಾಣ ಮಂಟಪದಲ್ಲಿ ಹರಿಹರದ ಶ್ರೀಶೈಲ ಜಗದ್ಗುರು ವಾಗೀಶ ಪಂಡಿತಾರಾಧ್ಯ ಪದವಿ ಮಹಾವಿದ್ಯಾಲಯ (ಎಸ್‌ಜೆವಿಪಿ) ಮತ್ತು ಸ್ನಾತಕೋತ್ತರ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ 7 ದಿನಗಳ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಮಾತನಾಡಿದರು.

ಭವಿಷ್ಯದ ಸುಭದ್ರ ದೇಶ ಕಟ್ಟಲು ನೀವು ಆದರ್ಶ ಮಹನೀಯರ ಬಗ್ಗೆ ತಿಳಿದು ಕೊಳ್ಳಬೇಕು. ನಮ್ಮ ದೇಶದ ಶ್ರೀಮಂತ ಸಂಸ್ಕೃತಿ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ಏಕೆಂದರೆ ಭಾರತದಲ್ಲಿರುವ ವೈವಿಧ್ಯತೆ, ಸಾಮರಸ್ಯ ಬೇರೆ ಯಾವ ದೇಶದಲ್ಲೂ ಇಲ್ಲ. ರೈತರು, ಸೈನಿಕರು, ಶ್ರಮಿಕರು ಹಾಗೂ ಯುವ ಜನತೆಯಿಂದಾಗಿ ನಮ್ಮ ದೇಶ ಸುರಕ್ಷಿತವಾಗಿದ್ದು, ಎನ್ನೆಸ್ಸೆಸ್ ಶಿಬಿರಗಳು ಬದುಕನ್ನು, ದೇಶವನ್ನು ಪ್ರೀತಿಸುವುದನ್ನು ಕಲಿಸುತ್ತವೆ.

ಮಹಾತ್ಮ ಗಾಂಧೀಜಿ ಅವರ 100ನೇ ಜನ್ಮದಿನಾಚರಣೆ ಸವಿನೆನಪಿಗಾಗಿ ಮತ್ತು ಗಾಂಧೀಜಿಯವರ ಚಿಂತನೆ ಜಾರಿಗೊಳಿಸುವ ಉದ್ದೇಶದಿಂದ 1969ರಲ್ಲಿ ಅಂದಿನ ಕೇಂದ್ರ ಸರ್ಕಾರದ ಶಿಕ್ಷಣ ಸಚಿವ ಡಾ. ವಿ.ಆರ್.ವಿ.ರಾವ್ ಅವರು, `ರಾಷ್ಟ್ರ ಸೇವೆಗೆ ಸದಾಸಿದ್ಧ, ನನಗಲ್ಲ-ನಿನಗೆ’ ಎಂಬ ದ್ಯೇಯದೊಂದಿಗೆ ಈ ಎನ್ನೆಸ್ಸೆಸ್ ಶಿಬಿರವನ್ನು ದೇಶದಲ್ಲಿ ಜಾರಿಗೆ ತಂದರು.

ಎಸ್‌ಜೆವಿಪಿ ವಿದ್ಯಾಸಂಸ್ಥೆಯ ಸಾಮಾನ್ಯ ಸಭೆಯ ಸದಸ್ಯ ಮಲೇಬೆನ್ನೂರಿನ ಕೆ.ಎಸ್.ಮಂಜಪ್ಪ ಅವರು, ಶಿಬಿರವನ್ನು ಉದ್ಘಾಟಿಸಿ ಶುಭ ಕೋರಿದರು. ಗ್ರಾ.ಪಂ. ಮಾಜಿ ಅಧ್ಯಕ್ಷ ಓ.ನಿಂಗನಗೌಡ, ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥ ರಮೇಶ್ ಕೆ.ಪರ್ವತಿ, `ಜನತಾವಾಣಿ’ ಹಿರಿಯ ವರದಿಗಾರ ಜಿಗಳಿ ಪ್ರಕಾಶ್ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್.ಹೆಚ್.ಶಿವಗಂಗಮ್ಮ ಮಾತನಾಡಿ, ಜೀವನದಲ್ಲಿ ಶಿಸ್ತು ಇದ್ದರೆ ಎಲ್ಲವೂ ನಿಮಗೆ ಸಿಗಲಿದೆ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ಶಿಬಿರದ ಕಾರ್ಯಕ್ರಮಾಧಿಕಾರಿ ಪ್ರೊ. ಎಸ್.ವಿ.ಸಿದ್ದಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.  ಸ್ವಯಂ ಸೇವಕ ವಿದ್ಯಾರ್ಥಿ ಎನ್.ಜಿ.ನಾಗರಾಜ್ ಪ್ರತಿಜ್ಞಾ ವಿಧಿ ಬೋಧಿಸಿದರು.

ಉಪನ್ಯಾಸಕರಾದ ನಿಖಿತಾ, ವಿಶಾಲ್ ಬೆಂಚಳ್ಳಿ, ಟಿ.ಭರಮಪ್ಪ, ವಿವಿಧ ಕಾಲೇಜು ಶಿಬಿರಾಧಿಕಾರಿಗಳಾದ ಅಣ್ಣೇಶ್, ಮಂಜುನಾಥ್, ವಿಶ್ವನಾಥ್ ಮತ್ತು ದೇವರಬೆಳಕೆರೆಯ ಎನ್‌.ಪಿ.ವೀರೇಶ್ ವೇದಿಕೆಯಲ್ಲಿದ್ದರು.

ಶಿಬಿರಾರ್ಥಿ ಪೂಜಾ ಸ್ವಾಗತಿಸಿದರು. ಕಾವ್ಯ ನಿರೂಪಿಸಿದರೆ, ಇನ್ನೋರ್ವ ಕಾರ್ಯಕ್ರಮಾಧಿಕಾರಿ ಪ್ರೊ. ಮಂಜುನಾಥ್ ಸಜ್ಜನ್ ವಂದಿಸಿದರು.

error: Content is protected !!