ಸದನದಲ್ಲಿ ರೈತರ ಪರ ಧ್ವನಿ ಎತ್ತಿದ ಶಾಸಕ ಬಸವಂತಪ್ಪ

ಸದನದಲ್ಲಿ ರೈತರ ಪರ ಧ್ವನಿ ಎತ್ತಿದ ಶಾಸಕ ಬಸವಂತಪ್ಪ

ದಾವಣಗೆರೆ, ಡಿ. 8- ಮಾಯ ಕೊಂಡ ಕ್ಷೇತ್ರದ ಜನರ ಜ್ವಲಂತ ಸಮಸ್ಯೆಗಳು, ಈ ಬಾರಿ ಮಳೆ ಇಲ್ಲದೆ ಬರಗಾಲ ಎದುರಾಗಿ, ರೈತರು ಅನುಭವಿಸುತ್ತಿರುವ ಕಷ್ಟ ಗಳನ್ನು ಶಾಸಕ ಕೆ.ಎಸ್. ಬಸವಂತಪ್ಪ ಸದನದಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟರು.

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಶುಕ್ರವಾರ ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿರುವ ಹಿನ್ನೆಲೆಯಲ್ಲಿ ಸಭಾಧ್ಯಕ್ಷರು ಈ ವಿಷಯದ ಬಗ್ಗೆ ಚರ್ಚೆಗೆ ಅವಕಾಶ ನೀಡಿದಾಗ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ , ಮಳೆ ಇಲ್ಲದೆ, ಬೆಳೆ ಇಲ್ಲದೆ ಮಾಯಕೊಂಡ ಕ್ಷೇತ್ರದ ರೈತರು ಅನುಭವಿಸುತ್ತಿರುವ ನೋವು-ಸಂಕಟಗಳನ್ನು ಗಂಭೀರವಾಗಿ ಚರ್ಚಿಸುವ ಮೂಲಕ ಸದನದ ಗಮನ ಸೆಳೆದರು.

 ಮಾಯಕೊಂಡ ಕ್ಷೇತ್ರದಲ್ಲಿ ಪ್ರತಿವರ್ಷ ಸುಮಾರು 80 ಪರ್ಸೆಂಟ್ ಮೆಕ್ಕೆಜೋಳವನ್ನು ರೈತರು ಬೆಳೆಯುತ್ತಿದ್ದಾರೆ. ಮೆಕ್ಕೆಜೋಳ ಬೆಳೆದ ರೈತರಿಗೆ ಬೆಂಬಲ ಬೆಲ ಸಿಗುತ್ತಿಲ್ಲ. ಖರೀದಿ ಕೇಂದ್ರ ತೆರೆಯುವ ಕೆಲಸವನ್ನು ಸರ್ಕಾರ ಮಾಡಬೇಕಿದೆ. ನಮ್ಮ ಕ್ಷೇತ್ರದಲ್ಲಿ 22 ಕೆರೆಗಳಿಗೆ ನೀರಿಲ್ಲ. ಇದರಿಂದ ಜನರು ಕುಡಿಯುವ ನೀರಿಗೆ, ನೀರಾವರಿ ಬೆಳೆಗಳಿಗೆ ನೀರು ಇಲ್ಲದೆ ರೈತರು ಮತ್ತು ಜನರು ಪರಿತಪಿಸುತ್ತಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ ಗಮನಹರಿಸಬೇಕು ಎಂದರು.

ಜೊತೆಗೆ ಭದ್ರಾ ಕಾಲುವೆಗಳಲ್ಲಿ ಹರಿದ ಅರೆಬರೆ ನೀರಿನಿಂದ ಭತ್ತ ಬೆಳೆದಿದ್ದು, ಕೂಡಲೇ ಭತ್ತದ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಖಾಸಗಿಯವರು ಭತ್ತ ಖರೀದಿ ಮಾಡಿ ರೈತರು ಮೋಸಕ್ಕೆ ಒಳಗಾಗುತ್ತಿದ್ದಾರೆ. ಇನ್ನೂ ಭದ್ರಾ ಡ್ಯಾಂನಲ್ಲಿರುವ ನೀರನ್ನು ತೋಟಗಾರಿಕಾ ಬೆಳೆಗೆ ಹರಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು. ಪ್ರಮುಖವಾಗಿ ಆರೋಗ್ಯ ವಿಚಾರವಾಗಿ ಮಾತನಾಡಿದ ಶಾಸಕ ಕೆ.ಎಸ್.ಬಸವಂತಪ್ಪ,  ಸರ್ಕಾರಿ ಆಸ್ಪತ್ರೆಗಳಲ್ಲಿ ಐಸಿಯು ಬೆಡ್ ಗಳನ್ನು ಹೆಚ್ಚಿಸಬೇಕು. ಜೊತೆಗೆ ನಮ್ಮ ಭಾಗದ ಶಾಲೆಗಳು, ಹಾಸ್ಟೆಲ್ ಗಳಿಗೆ ಸೌಲಭ್ಯಗಳನ್ನು ಕಲ್ಪಿಸಬೇಕು ಹಾಗು ರಸ್ತೆ ಅಭಿವೃದ್ದಿ ಸೇರಿದಂತೆ ಮಾಯಕೊಂಡ ಕ್ಷೇತ್ರದಲ್ಲಿರುವ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದು  ಸರ್ಕಾರಕ್ಕೆ ಮನವಿ ಮಾಡಿದರು.

error: Content is protected !!