ಬುದ್ಧನ ಕಾಲದಿಂದಲೂ ಸ್ವಚ್ಛತೆಯ ಪರಿಕಲ್ಪನೆ

ಬುದ್ಧನ ಕಾಲದಿಂದಲೂ ಸ್ವಚ್ಛತೆಯ ಪರಿಕಲ್ಪನೆ

ಜಿಗಳಿ : ಎನ್ನೆಸ್ಸೆಸ್‌ ಶಿಬಿರದ ಸಮಾರೋಪ ಸಮಾರಂಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ

ಮಂದಿರ, ಮಸೀದಿ ಕಟ್ಟುವುದರಿಂದ ದೇಶ ಸದೃಢ ಆಗಲ್ಲ, ಸದೃಢ ಮನಸ್ಸುಗಳನ್ನು ಬೆಳೆಸಬೇಕು : ಚಂದ್ರಶೇಖರ್‌ ಪೂಜಾರ್‌ ಅಭಿಮತ

ಮಲೇಬೆನ್ನೂರು, ಡಿ.8- ಸ್ವಚ್ಛತೆಯ ಪರಿಕಲ್ಪನೆ ಬುದ್ಧನ ಕಾಲದಿಂದಲೂ ನಡೆದುಕೊಂಡು ಬಂದಿದ್ದು, ಮಹಾತ್ಮ ಗಾಂಧೀಜಿ ಅವರು ಗ್ರಾಮ ಸ್ವರಾಜ್ಯದ ಮೂಲಕ ಹಳ್ಳಿಗಳ ಅಭಿವೃದ್ಧಿ ಬಯಸಿದ್ದರೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ. ವಾಮದೇವಪ್ಪ ಹೇಳಿದರು.

ಶುಕ್ರವಾರ ಜಿಗಳಿ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹರಿಹರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ 7 ದಿನಗಳ ಎನ್ನೆಸ್ಸೆಸ್‌ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ಅವರು ರಾಷ್ಟ್ರಕವಿ ಕುವೆಂಪು ಭಾವಚಿತ್ರಕ್ಕೆ ಪುಷ್ಪಾ ರ್ಚನೆ ಮಾಡಿ ಸಮಾರೋಪ ಭಾಷಣ ಮಾಡಿದರು.

ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಜೊತೆಗೆ ಆದರ್ಶ ವ್ಯಕ್ತಿಗಳ ಚರಿತ್ರೆಯ ಪುಸ್ತಕಗಳನ್ನು ಓದಿ ಅವರ ಬಗ್ಗೆ ತಿಳಿದುಕೊಳ್ಳಬೇಕು. ಕನ್ನಡದ ಕವಿಗಳು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದುಕೊಂಡಿರುವುದನ್ನು ನೀವು ಸದಾ ನೆನಪಿನಲ್ಲಿಟ್ಟುಕೊಂಡು ನೀವು ಎಲ್ಲೇ ಇದ್ದರೂ ಕನ್ನಡ ನಿಮ್ಮ ಉಸಿರಾಗಿರಬೇಕೆಂದರು. 

ಬಿಜೆಪಿ ಮುಖಂಡ ಚಂದ್ರಶೇಖರ್‌ ಪೂಜಾರ್‌ ಮಾತನಾಡಿ, ಬಲಿಷ್ಠ ಭಾರತ ಕಟ್ಟುವ ನಿಟ್ಟಿನಲ್ಲಿ ಇಂದಿನ ಯುವ ಜನಾಂಗದ ಜವಾಬ್ದಾರಿ ಹೆಚ್ಚಿದೆ. ಮಂದಿರ, ಮಸೀದಿ ನಿರ್ಮಾಣದಿಂದ ಸುಭದ್ರ ದೇಶ ಕಟ್ಟಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಓದು ಮುಗಿಯುವವರೆಗೂ ದೇಶದಲ್ಲಿ ನಡೆಯುತ್ತಿರುವ ಇತರೆ ವಿಚಾರಗಳ ಬಗ್ಗೆ ತಲೆಕೆಡಸಿಕೊಳ್ಳಬಾರದು. 

ಲಯನ್ಸ್‌ ಮಾಜಿ ರಾಜ್ಯಪಾಲ ಡಾ. ಟಿ. ಬಸವರಾಜ್‌ ಮಾತನಾಡಿ, ಓದುವಾಗ ಮನಸ್ಸನ್ನು ಬೇರೆ ಕಡೆಗೆ ಹರಿಬಿಡಬೇಡಿ. ಒಳ್ಳೆಯ ಸ್ನೇಹಿತರ ಸಹವಾಸ ಮಾಡಿ, ಬದುಕಿನಲ್ಲಿ ನೀವು ಗೆದ್ದರೆ ನಿಮ್ಮ ಕುಟುಂಬ ಮತ್ತು ನಿಮ್ಮ ಊರು, ರಾಜ್ಯ, ದೇಶವನ್ನು ಗೆಲ್ಲಬಹುದೆಂದರು.

ಅರವಳಿಕೆ ತಜ್ಞ ಡಾ. ಎನ್‌.ಆರ್. ದಿನೇಶ್‌ಕುಮಾರ್‌ ಮಾತನಾಡಿ,  ವಿದ್ಯಾರ್ಥಿಗಳಲ್ಲಿ ಮಾನಸಿಕ ಧೈರ್ಯತೆ ಕಡಿಮೆ ಆಗುತ್ತಿದ್ದು, ಪರೀಕ್ಷೆಯಲ್ಲಿ ಫೇಲಾದ ತಕ್ಷಣ ಕೆಲವರು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಕೈಹಾಕುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಹೊರಬರಬೇಕು. ಮನಸ್ಸನ್ನು ಸದೃಢವಾಗಿಸಿಕೊಂಡರೆ ಮಾತ್ರ ನೀವು ಸದೃಢ ದೇಶ ಕಟ್ಟಲು ಸಾಧ್ಯ ಎಂದರು.

ಉಪತಹಶೀಲ್ದಾರ್‌ ಆರ್. ರವಿ ಮಾತನಾಡಿ,  ಸ್ವಚ್ಛತೆ ಇದ್ದಲ್ಲಿ ಆರೋಗ್ಯ ಇರುತ್ತದೆ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ರಸ್ತೆಯ ಮೇಲೆ ರೈತರು ಕೇಜ್‌ವ್ಹೀಲ್‌ ಹಾಕಿ ಟ್ರ್ಯಾಕ್ಟರ್‌ ಓಡಿಸಬೇಡಿ ಎಂದು ಮನವಿ ಮಾಡಿದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ, ಹರಿಹರ ತಾಲ್ಲೂಕು ಕಸಾಪ ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ, ಹರಿಹರ ತಾ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶರಣ್‌ಕುಮಾರ್ ಹೆಗಡೆ, ಡಿಸಿಸಿ ಬ್ಯಾಂಕ್‌ ಮಾಜಿ ಉಪಾಧ್ಯಕ್ಷ ಜಿ. ಆನಂದಪ್ಪ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಡಾ. ಎನ್‌. ನಾಗರಾಜ್‌ ಮಾತನಾಡಿದರು. 

ಶಿಬಿರದ ಕಾರ್ಯಕ್ರಮಾಧಿಕಾರಿ ಡಾ. ಬಿ.ಕೆ. ಮಂಜುನಾಥ್‌ ಪ್ರಾಸ್ತಾವಿಕ ಮಾತನಾಡಿದರು.

ಕಾಲೇಜಿನ ಪ್ರಾಚಾರ್ಯ ಪ್ರೊ. ಹೆಚ್‌. ವಿರೂಪಾಕ್ಷಪ್ಪ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ರೂಪಾ ಸೋಮಶೇಖರ್‌, ಗ್ರಾ.ಪಂ. ಮಾಜಿ ಅಧ್ಯಕ್ಷ ಎಂ.ವಿ. ನಾಗರಾಜ್‌, ಎಸ್‌ಡಿಎಂಸಿ ಅಧ್ಯಕ್ಷ ಬಿ. ಪ್ರಭಾಕರ್‌, ಉಪಾಧ್ಯಕ್ಷೆ ರೇಣುಕಮ್ಮ ನಿಂಗಪ್ಪ,  ಎಸ್‌ಡಿಎಂಸಿ ಸದಸ್ಯರಾದ ಶ್ರೀಮತಿ ಸುನೀತಾ ನಾಗರಾಜ್‌, ಶ್ರೀಮತಿ ರತ್ನಮ್ಮ ಬಸವರಾಜ್‌, ಕೆ.ಎಸ್‌. ಮಾಲತೇಶ್‌, ಶ್ರೀಮತಿ ಮಂಜುಳ ಮಾಲತೇಶ್‌, ವಿಜಯಭಾಸ್ಕರ್‌, ತೆಲಗಿ ನಾಗರಾಜ್‌, ಡಿ.ಪಿ. ಚಿದಾನಂದ್‌, ರೈತ ಸಂಘದ ಬೆಣ್ಣೇರ ನಂದ್ಯೆಪ್ಪ, ಶಿಕ್ಷಕರಾದ ಮಲ್ಲಿಕಾರ್ಜುನ್‌, ಗುಡ್ಡಪ್ಪ, ಶ್ರೀನಿವಾಸ್‌ ರೆಡ್ಡಿ ಭಾಗವಹಿಸಿದ್ದರು. 

ಕಲಾವಿದರಾದ ಜಿಗಳಿಯ ಡಿ. ರಂಗನಾಥ್‌, ಬಿ. ಉಮೇಶ್‌, ಕೆ.ಎನ್‌. ಅಣ್ಣಪ್ಪ, ಸಿರಿಗೆರೆಯ ಎಂ. ಶಿವಕುಮಾರ್‌, ಕುಂದೂರು ಮಂಜಪ್ಪ ಅವರು ರೈತ ಹಾಗೂ ಕ್ರಾಂತಿ ಗೀತೆ ಹಾಡಿದರು. 

ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಜಿ.ಪಿ. ಹನುಮಗೌಡ ಸ್ವಾಗತಿಸಿದರು. `ಜನತಾವಾಣಿ’  ಹಿರಿಯ ವರದಿಗಾರ ಜಿಗಳಿ ಪ್ರಕಾಶ್‌ ಕಾರ್ಯಕ್ರಮ ನಿರೂಪಿಸಿದರೆ, ಶಿಬಿರದ ಕಾರ್ಯಕ್ರಮಾಧಿಕಾರಿ ಡಾ. ಸಿ. ಚಂದ್ರಶೇಖರ್‌ ವಂದಿಸಿದರು.

error: Content is protected !!