ಸಾಲ ಮರುಪಾವತಿ ತಡೆ ಹಿಡಿಯಲು ಆಗ್ರಹ

ಸಾಲ ಮರುಪಾವತಿ  ತಡೆ ಹಿಡಿಯಲು ಆಗ್ರಹ

ಜಗಳೂರಿನಲ್ಲಿ ರೈತರ ಪ್ರತಿಭಟನೆ

ಜಗಳೂರು, ಡಿ. 8 – ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಮೈಕ್ರೋ ಫೈನಾನ್ಸ್‌ಗಳು  ಸಾಲ ಮರುಪಾವತಿಗೆ ರೈತರಿಗೆ ನೀಡುತ್ತಿರುವ ನೋಟೀಸ್ ತಡೆ ಹಿಡಿಯುವಂತೆ ನೋಟೀಸ್‌ ಗಳಿಗೆ ಬೆಂಕಿ ಹಚ್ಚಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹುಚ್ಚವ್ವನಹಳ್ಳಿ ಮಂಜು ನಾಥ್ ಬಣದಿಂದ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಬ್ಯಾಂಕ್ ಹಾಗೂ ಫೈನಾನ್ಸ್ ಅಧಿಕಾರಿಗಳ ವಿರುದ್ದ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿ, ನಂತರ ತಹಶೀಲ್ದಾರ್ ಸೈಯ್ಯದ್ ಕಲೀಂ ಉಲ್ಲಾ ಅವರಿಗೆ ಲಿಖಿತ ಮನವಿ ಸಲ್ಲಿಸಿದರು.

ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, ತಾಲ್ಲೂಕಿನಲ್ಲಿ ಬರ ಆವರಿಸಿ ಬೆಳೆದ ಬೆಳೆಗಳು ಕೈಗೆಟಕುದೇ  ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ.ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾಲ ಮರು ಪಾವತಿಗೆ  ಕಾಲಾವಕಾಶ ನೀಡದೆ  ರಾಷ್ಟ್ರೀಕೃತ  ಬ್ಯಾಂಕುಗಳು ಹಾಗೂ ಫೈನಾನ್ಸ್ ಕಂಪನಿಗಳು ನೋಟಿಸ್ ಜಾರಿಗೊಳಿಸಿ, ಸಾಲ ಮರುಪಾವತಿಗೆ ಬಲವಂತದಿಂದ ವಸೂಲಾತಿ ಕಿರುಕುಳ ನೀಡುತ್ತಿದ್ದಾರೆ  ಆರೋಪಿಸಿದರು.

ರೈತ ಕಾರ್ಮಿಕರ ಖಾತೆಗೆ ಸಾಮಾಜಿಕ ಭದ್ರತೆಯಡಿ ಸರ್ಕಾರ ಜಮಾ ಮಾಡುವ ಹಣವನ್ನು ಕೂಡಲೇ ಸಾಲ ಮರುಪಾವತಿಗೆ ಜಮಾ ಮಾಡಬಾರದು ಎಂದು ಆಗ್ರಹಿಸಿದರು.

ತಹಶೀಲ್ದಾರ್ ಸೈಯ್ಯದ್ ಕಲೀಂ ಉಲ್ಲಾ ಮನವಿ ಸ್ವೀಕರಿಸಿ ಮಾತನಾಡಿ, ಮುಂದಿನ ಸೋಮವಾರ ತಾಲ್ಲೂಕಿನ ಎಲ್ಲಾ ಮೈಕ್ರೋ ಫೈನಾನ್ಸ್ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳ ವ್ಯವಸ್ಥಾಪಕರನ್ನು ರೈತ ಸಂಘಟನೆ ಸಮ್ಮುಖದಲ್ಲಿ ಸಭೆ ಕರೆದು ಚರ್ಚೆ ನಡೆಸಿ ರೈತರ ಸಾಲ ಮರುಪಾವ ತಿಗೆ ಕಾಲಾವಕಾಶ ನೀಡಲು ತೀರ್ಮಾನಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾ
ಪ್ರಧಾನ ಕಾರ್ಯದರ್ಶಿ  ಚಿರಂಜೀವಿ, ಪದಾಧಿಕಾರಿಗಳಾದ ಸತೀಶ್, ಸಹದೇವರೆಡ್ಡಿ, ತಿಪ್ಪೇಸ್ವಾಮಿ, ಅಂಜಿನಪ್ಪ, ತಿಪ್ಪಣ್ಣ, ಸಣ್ಣಪಾಲಯ್ಯ, ತಿಪ್ಪೇಶ್, ರೆಡ್ಡಿ, ಅಶೋಕ ಮುಂತಾದವರು ಭಾಗವಹಿಸಿದ್ದರು.

error: Content is protected !!